ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವ್ಯ ಹೋರಾಟಕ್ಕೆ ಶಕ್ತಿ ನೀಡಬಲ್ಲದು: ಎಚ್.ಎಲ್. ಪುಷ್ಪ

Published 24 ಆಗಸ್ಟ್ 2024, 14:17 IST
Last Updated 24 ಆಗಸ್ಟ್ 2024, 14:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾವ್ಯ ಮನಸ್ಸಿಗೆ ನೆಮ್ಮದಿ ಹಾಗೂ ಹೋರಾಟಕ್ಕೆ ಶಕ್ತಿ ನೀಡಬಲ್ಲದು’ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಹೇಳಿದರು.

ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಂಗಮಂಡಲ ಸಹಯೋಗದಲ್ಲಿ ಶನಿವಾರ ನಡೆದ ‘ಕಾವ್ಯ ಸಂಸ್ಕೃತಿ ಯಾನ: ರಾಜಧಾನಿ ಬೆಂಗಳೂರಿನಿಂದ ಧಾರವಾಡದ ಸಾಧನಕೇರಿ ಕಡೆಗೆ ಕಾವ್ಯ ದೀವಟಿಗೆಯ ಪಯಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ನಾವು ಕವಿತೆಗಳನ್ನು ರಚಿಸಬೇಕು. ಸಮಾಜದಲ್ಲಿರುವ ತಾರತಮ್ಯಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸಬೇಕು. ಕಾವ್ಯವನ್ನು ಸರಳವಾಗಿ ಬರೆದು, ಜನರಿಗೆ ತಲುಪಿಸಬೇಕು. ಕವಿತೆಗಳು ಕವಿಗಳಿಂದ ಕವಿಗಳಿಗೆ ಭಿನ್ನವಾಗಿರುತ್ತವೆ. ಮಹಿಳೆಯರು ಹಾಗೂ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಾವ್ಯದ ಮೂಲಕ ಖಂಡಿಸಬೇಕು’ ಎಂದು ಕರೆ ನೀಡಿದರು.

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ‘ಕಾವ್ಯಕ್ಕೆ ಅಕ್ಷರ ರೂಪ ದೊರೆತ ನಂತರ ಅದು ನಿರ್ದಿಷ್ಟವಾಗಿ ಇವರದೇ ಕವಿತೆ ಎಂಬುದನ್ನು ಗುರುತಿಸುವುದಕ್ಕೆ ಅನುಕೂಲವಾಯಿತು. ಅಕ್ಷರ ಪರಂಪರೆಯಲ್ಲಿ ಕವಿಗಳು ತಮ್ಮದೇ ಆದ ಭಾಷೆ, ಅಸ್ಮಿತೆಯ ಮೂಲಕ ಕಾವ್ಯ ರಚಿಸುತ್ತಿದ್ದಾರೆ’ ಎಂದರು.

‘ಕಣ್ಣಿಗೆ ಕಂಡದನ್ನು ಭಾಷೆಯ ರೂಪದಲ್ಲಿ ಕೊಡುವುದೇ ಕಾವ್ಯ. ಛಂದಸ್ಸು, ಅಲಂಕಾರ ಶಾಸ್ತ್ರ ಕಲಿತು ಕವಿಗಳಾಗಬಹುದು. ಆದರೆ, ಸಹಜ ಕವಿಗಳಾಗುವುದು ಕಷ್ಟ. ಸಹಜ ಕಾವ್ಯಕ್ಕೆ ಅನುಭವ ಬೇಕಾಗುತ್ತದೆ. ಅದು ಅನುಭಾವಿಕ ವ್ಯಾಪ್ತಿಯ ಕಲೆಯಾಗಿ ಹೊರಹೊಮ್ಮುತ್ತದೆ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಸವರಾಜ ಸಾದರ, ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ಕಾವ್ಯ ಸಂಸ್ಕೃತಿಯಾನದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT