ಬುಧವಾರ, ಏಪ್ರಿಲ್ 14, 2021
24 °C

ಯುವಕರ ಮೇಲೆ ಪೊಲೀಸರಿಂದ ಹಲ್ಲೆ: ರಸ್ತೆಯಲ್ಲೇ ಶಾಸಕಿ ಸೌಮ್ಯಾ ರೆಡ್ಡಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿದ್ಯಾರ್ಥಿನಿಗೆ ಆದ ಅನ್ಯಾಯ ಖಂಡಿಸಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ ಯುವಕರ ಮೇಲೆ ತಿಲಕನಗರ ಠಾಣೆ ಪೊಲೀಸರು ವಿನಾಕಾರಣ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಬುಧವಾರ ರಾತ್ರಿ ಠಾಣೆ ಎದುರಿನ ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು.

ಜಯನಗರ ಬಳಿಯ ಕಾಲೇಜೊಂದರ ವಿದ್ಯಾರ್ಥಿನಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು. ಅದೇ ಕಾರಣ ನೀಡಿ ಆಕೆಗೆ ಕಾಲೇಜಿನಲ್ಲಿ ಮಾನಸಿಕವಾಗಿ ಕಿರಿಕಿರಿ ನೀಡಲಾಗಿತ್ತು. ನೊಂದ ಯುವತಿ, ತನಗಾದ ನೋವನ್ನು ಎನ್‌ಎಸ್‌ಯುಐ ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ಕಾಲೇಜು ವಿದ್ಯಾರ್ಥಿಗಳ ಜೊತೆ ಪ್ರಾಂಶುಪಾಲರ ಬಳಿ ಹೋಗಿದ್ದ ಎನ್‌ಎಸ್‌ಯುಐ ಕಾರ್ಯಕರ್ತರು, ಯುವತಿಗಾಗುತ್ತಿರುವ ತೊಂದರೆ ಹಾಗೂ ಅನ್ಯಾಯದ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಪ್ರಾಂಶುಪಾಲರು ಪ್ರತಿಕ್ರಿಯಿಸಿರಲಿಲ್ಲ. ಅವಾಗಲೇ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದ್ದರು.

ಸ್ಥಳಕ್ಕೆ ಬಂದಿದ್ದ ತಿಲಕನಗರ ಪೊಲೀಸರು, ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಅದೇ ಸಂದರ್ಭದಲ್ಲೇ ಪೊಲೀಸರು ಯುವಕರ ಮೇಲೆ ಹಲ್ಲೆ ಮಾಡಿ ಬೂಟುಗಾಲಿನಿಂದ ಒದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸುದ್ದಿ ತಿಳಿದ ಶಾಸಕಿ ಸೌಮ್ಯಾ ರೆಡ್ಡಿ, ತಿಲಕನಗರ ಠಾಣೆ ಎದುರು ಬಂದು ಘೋಷಣಾ ಫಲಕ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ಆರಂಭಿಸಿದರು. ‘ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕಿ ಪಟ್ಟು ಹಿಡಿದು ರಸ್ತೆಯಲ್ಲೇ ಪ್ರತಿಭಟನೆ ಮುಂದುವರಿಸಿದರು‌.

‘ತಪ್ಪಿತಸ್ಥ ಸಿಬ್ಬಂದಿಗೆ ನೋಟಿಸ್‌ ನೀಡಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಪ್ರತಿಭಟನೆ ಕೈಬಿಡಿ’ ಎಂದು ಎಸಿಪಿ ಕೋರಿದರು.  ಬಳಿಕವೇ ಶಾಸಕಿ ಪ್ರತಿಭಟನೆ ಅಂತ್ಯಗೊಳಿಸಿದರು.

ದೂರು ನೀಡಿದ ವಿದ್ಯಾರ್ಥಿಗಳು: ‘ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಿ ಬೂಟುಗಾಲಿನಿಂದ ಒದ್ದಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಎಸಿಪಿ ಅವರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು