ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೇ ವರ್ಷಕ್ಕೆ ವಾಲಿತು ವಸತಿ ಸಮುಚ್ಚಯ: ಐಐಎಸ್ಸಿ ತಜ್ಞರಿಂದ ಪರಿಶೀಲನೆ

2018ರಲ್ಲಿ ನಿರ್ಮಿಸಿದ್ದ ಪೊಲೀಸ್ ವಸತಿ ಕಟ್ಟಡದಲ್ಲಿ ಬಿರುಕು
Last Updated 16 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಿನ್ನಿ ಮಿಲ್ ಬಳಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಚಯದಲ್ಲಿ ಬಿರುಕು ಕಾಣಿಸಿಕೊಂಡು, ಏಳು ಮಹಡಿಯ ‘ಬಿ’ ಬ್ಲಾಕ್‌ನ ಅರ್ಧ ಕಟ್ಟಡ ಎಡಕ್ಕೆ ವಾಲಿದೆ. ಅಪಾಯದ ಮುನ್ಸೂಚನೆಸಿಗುತ್ತಿದ್ದಂತೆಯೇ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ.

ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಅವರ ಕುಟುಂಬದವರ ವಾಸಕ್ಕಾಗಿ 2018ರಲ್ಲಿ ಈ ವಸತಿ ಸಮುಚ್ಚಯವನ್ನು ನಿರ್ಮಿಸಲಾಗಿತ್ತು. ಏಳು ಮಹಡಿಗಳ ‘ಬಿ’ ಬ್ಲಾಕ್‌ ಕಟ್ಟಡದಲ್ಲಿ 64 ಕುಟುಂಬಗಳು ನೆಲೆಸಿವೆ. ಕಟ್ಟಡದ ಅರ್ಧ ಭಾಗದಲ್ಲಿ ಹಲವು ತಿಂಗಳ ಹಿಂದೆಯೇ ಬಿರುಕು ಕಾಣಿಸಿಕೊಂಡಿತ್ತು. ಈ ಕಟ್ಟಡವೀಗ ಎಡಕ್ಕೆ ವಾಲಿದ್ದು, ಸಮುಚ್ಚಯದಲ್ಲಿ ವಾಸವಿರುವ ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ.

ವಸತಿ ಸಮುಚ್ಚಯದಲ್ಲಿ ಕುಟುಂಬಗಳು ನೆಲೆಸಿದ ನಂತರ, ಪೊಲೀಸ್ ಗೃಹ ಮಂಡಳಿಯ ತಾಂತ್ರಿಕ ತಜ್ಞರ ತಂಡ ಇದನ್ನು ಹಲವು ಬಾರಿ ಪರಿಶೀಲನೆ ನಡೆಸಿತ್ತು. ಈ ಬಗ್ಗೆ ಪೊಲೀಸ್ ಕಮಿಷನರ್ ಅವರಿಗೆ ಕಾಲ ಕಾಲಕ್ಕೆ ವರದಿ ನೀಡಿತ್ತು.

ಇತ್ತೀಚೆಗಷ್ಟೇ ಪರಿಷ್ಕೃತ ವರದಿ ನೀಡಿದ್ದ ತಾಂತ್ರಿಕ ಸಮಿತಿಯು, ‘ಕಟ್ಟಡದ ಹಲವೆಡೆ ಬಿರುಕು ಕಾಣಿಸಿಕೊಂಡಿದೆ. ಒಂದೂವರೆ ವರ್ಷದ ಹಿಂದೆಯೇ ಕಟ್ಟಡ ಎಡಕ್ಕೆ ಸ್ವಲ್ಪ ವಾಲಿರುವುದು ಕಂಡುಬಂದಿದೆ. ಕಟ್ಟಡದ ಸುರಕ್ಷತೆ ಬಗ್ಗೆ ಹೆಚ್ಚಿನ ತಪಾಸಣೆ ನಡೆಸಬೇಕಿದೆ. ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬದವರ ಜೀವದ ಸುರಕ್ಷತೆ ಮುಖ್ಯ. ಹಾಗಾಗಿ ಇಲ್ಲಿ ನೆಲೆಸಿರುವ ಕುಟುಂಬಗಳನ್ನು ತೆರವು ಮಾಡಬೇಕು’ ಎಂದು ಶಿಫಾರಸು ಮಾಡಿತ್ತು.

ವರದಿ ಕೈ ಸೇರುತ್ತಿದ್ದಂತೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಗುರುವಾರ (ಅ.14) ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಮಲ್ ಪಂತ್, ‘ವಸತಿ ಸಮುಚ್ಚಯ ವಾಲಿರುವ ಬಗ್ಗೆ ತಾಂತ್ರಿಕ ಸಮಿತಿ ವರದಿ ನೀಡಿದೆ. ಹೀಗಾಗಿ, ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಕಟ್ಟಡ ಸುರಕ್ಷಿತವೇ ಅಥವಾ ಅಸುರಕ್ಷಿತವೇ ಎಂಬುದನ್ನು ತಜ್ಞರೇ ಹೇಳಬೇಕು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರನ್ನು ಕೋರಲಾಗಿದೆ’ ಎಂದೂ ಅವರು ತಿಳಿಸಿದರು.

2018ರಲ್ಲಿ ನಿರ್ಮಿಸಿದ್ದ ಕಟ್ಟಡ: ‘2018ರಲ್ಲಿ ₹ 23 ಕೋಟಿ ವೆಚ್ಚದಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗಿತ್ತು. ಕೇವಲ ಮೂರೇ ವರ್ಷಕ್ಕೆ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಒಂದೂವರೆ ವರ್ಷದ ಹಿಂದೆಯೇ ಕಟ್ಟಡ ವಾಲಿದೆ. ಮಳೆಗೂ ಕಟ್ಟಡ ವಾಲಿರುವುದಕ್ಕೂ ಸಂಬಂಧವಿಲ್ಲ. ಈಗ ನಗರದಲ್ಲಿ ಹೆಚ್ಚು ಮಳೆ ಆಗುತ್ತಿದ್ದು, ಕುಟುಂಬದವರು ಆತಂಕಗೊಂಡಿದ್ದಾರೆ. ವೃದ್ಧರು, ಮಕ್ಕಳು, ಮಹಿಳೆಯರು ಇದ್ದಾರೆ. ಎಲ್ಲರನ್ನೂ ಏಕಕಾಲದಲ್ಲಿ ಸ್ಥಳಾಂತರಿಸಲು ಆಗುವುದಿಲ್ಲ. ಎಲ್ಲರ ಸುರಕ್ಷತೆ ದೃಷ್ಟಿಯಿಂದ ಹಂತ ಹಂತವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದೂ ತಿಳಿಸಿದರು.

‘32 ಕುಟುಂಬಗಳ ಸ್ಥಳಾಂತರ’

‘ಬಿ’ ಬ್ಲಾಕ್‌ನ ಅರ್ಧದಷ್ಟು ಕಟ್ಟಡದಲ್ಲಿ ವಾಸವಿರುವ 32 ಕುಟುಂಬಗಳಿಗೆ ಅಸುರಕ್ಷಿತ ಭಾವ ಕಾಡುತ್ತಿದೆ. ಈ ಕುಟುಂಬಗಳನ್ನು ಅನ್ನಪೂರ್ಣೇಶ್ವರಿನಗರದಲ್ಲಿರುವ ಮತ್ತೊಂದು ವಸತಿ ಸಮುಚ್ಚಯಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಕಮಿಷನರ್ ಅವರ ಸೂಚನೆಯಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಟ್ಟಡದ ಸುರಕ್ಷತೆ ಬಗ್ಗೆ ತಜ್ಞರ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.

‘ಸಮುಚ್ಚಯ ನಿರ್ಮಾಣಕ್ಕೆ ಟೆಂಡರ್’

ವಸತಿ ಸಮುಚ್ಚಯ ವಾಲಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಬಿನ್ನಿ ಮಿಲ್‌ ಪ್ರದೇಶದಲ್ಲಿ 10ಸಾವಿರ ಮನೆಗಳುಳ್ಳ ಹೊಸ ಪೊಲೀಸ್‌ ವಸತಿ ಸಮುಚ್ಚಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ. ಹೊಸ ಕಟ್ಟಡಗಳು ನಿರ್ಮಾಣವಾದರೆ ಪೊಲೀಸರ ವಸತಿ ಸಮಸ್ಯೆ ಪರಿಹಾರವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT