ಬೆಂಗಳೂರು: ಕಮಲಾನಗರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಗೊಂದಲ ಉಂಟಾಗಿದೆ. ಬೆಳಿಗ್ಗೆ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿ ಮೂರ್ತಿಯನ್ನು, ಸ್ಥಳದಿಂದ ಪಕ್ಕಕ್ಕೆ ಸರಸಿ ಪೊಲೀಸರು ಪೆಂಡಾಲ್ ಬಿಚ್ಚಿದ್ದಾರೆ.
ಬಸವೇಶ್ವರ ನಗರ ಪೊಲೀಸರ ಈ ವರ್ತನೆಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಮಲಾನಗರದ ಹಲವು ಕಡೆ ಯುವಕರು ಹಾಗೂ ಮಕ್ಕಳು, ಒಳ ರಸ್ತೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅದಕ್ಕಾಗಿ ಅಂದದ ಪೆಂಡಾಲ್ ನಿರ್ಮಿಸಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರು, ಮೂರ್ತಿ ಪ್ರತಿಷ್ಠಾಪನೆ ಸ್ಥಳಕ್ಕೆ ಹೋಗಿ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.
'ಅನುಮತಿ ಇಲ್ಲದೇ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಿರಾ. ತೆರವು ಮಾಡಿ. ಠಾಣೆಗೆ ಬನ್ನಿ' ಎಂದು ಯುವಕರಿಗೆ ಹೇಳಿ ಹೋಗಿದ್ದಾರೆ.
ಈ ಬಗ್ಗೆ ಅಳಲು ತೋಡಿಕೊಂಡ ಯುವಕರು, 'ಪ್ರತಿವರ್ಷದಂತೆ ಈ ವರ್ಷವೂ ನಮ್ಮ ರಸ್ತೆಯ ನಿವಾಸಿಗಳಷ್ಟೇ ಸೇರಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ. ಪೊಲೀಸರು ಏಕಾಏಕಿ ಸ್ಥಳಕ್ಕೆ ಬಂದು, ಮೂರ್ತಿ ತೆರವು ಮಾಡಿದ್ದಾರೆ. ಪೆಂಡಾಲ್ ಬಿಚ್ಚಿದ್ದಾರೆ' ಎಂದರು.
'ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ. ಅದೇ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದೀಗ, ಪೊಲೀಸರು ತಮ್ಮಿಷ್ಟದಂತೆ ವರ್ತಿಸುತ್ತಿದ್ದಾರೆ. ಠಾಣೆಗೆ ಬರುವಂತೆ ಹೇಳಿ ಕಿರುಕುಳ ನೀಡುತ್ತಿದ್ದಾರೆ' ಎಂದೂ ಯುವಕರು ಹೇಳಿದರು.
'ಕೊರೊನಾ ನಿಯಮ ಪಾಲಿಸಿದ್ದೇವೆ. ಯಾರಿಗೂ ತೊಂದರೆ ಮಾಡದೇ ಒಳ ರಸ್ತೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದ್ದೇವೆ' ಎಂದರು.
'ಕಮಲಾನಗರದಲ್ಲಿ ಐದು ಕಡೆಯ ಪೆಂಡಾಲ್‌ಗೆ ಬಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ' ಎಂದೂ ಯುವಕರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, 'ಅನುಮತಿ ಪಡೆಯದೇ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಗೊತ್ತಾಗಿದೆ. ಗಸ್ತಿನಲ್ಲಿದ್ದ ಸಿಬ್ಬಂದಿ, ಸೂಕ್ತ ದಾಖಲೆ ಕೇಳಿದಾಗ ಕೊಟ್ಟಿಲ್ಲ. ಹೀಗಾಗಿ, ಠಾಣೆಗೆ ಬರುವಂತೆ ಹೇಳಿದ್ದಾರೆ' ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.