ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಕುಡಿದಿದ್ದ ಬ್ಯೂಟಿಷಿಯನ್; ತುರ್ತು ಕರೆಗೆ 5 ನಿಮಿಷದಲ್ಲಿ ಸ್ಪಂದಿಸಿದ ಪೊಲೀಸರು

Last Updated 28 ಫೆಬ್ರುವರಿ 2023, 6:29 IST
ಅಕ್ಷರ ಗಾತ್ರ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲೆಂದು ವಿಷ ಕುಡಿದಿದ್ದ ಬ್ಯೂಟಿಷಿಯನ್‌ ಒಬ್ಬರನ್ನು ಪುಲಿಕೇಶಿನಗರ ಠಾಣೆ ಪೊಲೀಸರು ರಕ್ಷಿಸಿದ್ದು, ಅಸ್ವಸ್ಥಗೊಂಡಿರುವ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಸಾರ್ವಜನಿಕರೊಬ್ಬರಿಂದ ಬಂದ ತುರ್ತು ಕರೆಗೆ ಸ್ಪಂದಿಸಿ 5 ನಿಮಿಷಗಳಲ್ಲಿ ಸ್ಥಳಕ್ಕೆ ಹೋಗಿ ಮಹಿಳೆಯನ್ನು ಕಾಪಾಡಿರುವ ಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಪುಲಿಕೇಶಿನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಿರುವ 30 ವರ್ಷದ ಮಹಿಳೆ, ವೃತ್ತಿಯಲ್ಲಿ ಬ್ಯೂಟಿಷಿಯನ್. ಯೂಟ್ಯೂಬರ್ ಸಹ ಆಗಿರುವ ಇವರ ಚಾನೆಲ್‌ಗೆ ಲಕ್ಷಾಂತರ ಮಂದಿ ಚಂದಾದಾರರಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೌಟುಂಬಿಕ ಕಾರಣದಿಂದ ಮಾನಸಿಕವಾಗಿ ನೊಂದಿದ್ದ ಮಹಿಳೆ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಭಾನುವಾರ ರಾತ್ರಿ ಕ್ರಿಮಿನಾಶಕ ಕುಡಿದಿದ್ದರು. ಪ್ರಾಣ ಹೋಗುವ ಸಂಕಟ ತಾಳಲಾರದೇ ಕಿರುಚಾಡಲಾರಂಭಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳೆಯ ನರಳಾಟ ಗಮನಿಸಿದ್ದ ಸ್ಥಳೀಯರೊಬ್ಬರು ಮನೆಯೊಳಗೆ ಹೋಗಲು ಯತ್ನಿಸಿದ್ದರು. ಆದರೆ, ಒಳಗಿನಿಂದ ಲಾಕ್ ಆಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಪಶ್ಚಿಮ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತ್ವರಿತವಾಗಿ ಸ್ಪಂದಿಸಿದ ಡಿಸಿಪಿ, ಹೊಯ್ಸಳ ಗಸ್ತು ವಾಹನ ಸಿಬ್ಬಂದಿಗೆ ಸಂದೇಶ ರವಾನಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘5 ನಿಮಿಷದಲ್ಲಿ ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ, ಮಹಿಳೆಯನ್ನು ಎತ್ತಿಕೊಂಡು ಹೊಯ್ಸಳ ಗಸ್ತು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಹೇಳಿವೆ.

ರಕ್ಷಣೆ ಬಗ್ಗೆ ಪ್ರತಿಕ್ರಿಯಿಸಿದ ಭೀಮಾಶಂಕರ್ ಗುಳೇದ್, ‘ಸಾರ್ವಜನಿಕರೊಬ್ಬರು ನೀಡಿದ್ದ ಮಾಹಿತಿಗೆ ಸ್ಪಂದಿಸಿದ್ದ ಇನ್‌ಸ್ಪೆಕ್ಟರ್ ಪಿ.ಬಿ.ಕಿರಣ್, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ (ಎಎಸ್‌ಐ) ಡಿ. ರೇವಣ್ಣ ಹಾಗೂ ಹೆಡ್ ಕಾನ್‌ಸ್ಟೆಬಲ್ ಕುಮಾರ್, ಮಹಿಳೆಯನ್ನು ರಕ್ಷಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT