ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪದರ್ಶಿ ಕೊಲೆ: ತನಿಖೆಗೆ ಸಹಕರಿಸದ ಆಧಾರ್‌ ಪ್ರಾಧಿಕಾರ

Last Updated 24 ಆಗಸ್ಟ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಓಲಾ ಕ್ಯಾಬ್‌ ಚಾಲಕನಿಂದ ಕೊಲೆಯಾದ ಕೋಲ್ಕತ್ತಾದ ರೂಪದರ್ಶಿ ಪೂಜಾಸಿಂಗ್‌ ಡೇ ಅವರ ವೈಯಕ್ತಿಕ ವಿವರಗಳನ್ನು ಆಧಾರ್‌ ಪ್ರಾಧಿಕಾರ ತಮಗೆ ನೀಡಿದ್ದರೆ ಒಂದೇ ದಿನದಲ್ಲಿ ಕೊಲೆ ಪ್ರಕರಣ ಭೇದಿಸಲು ಸಾಧ್ಯವಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸದ ನಿಮಿತ್ತ ಜುಲೈ 30ರಂದು ಕೋಲ್ಕತ್ತಾದಿಂದ ನಗರಕ್ಕೆ ಬಂದಿದ್ದ ಕಾರ್ಯಕ್ರಮ ಸಂಘಟಕಿಯೂ ಆಗಿದ್ದ ಪೂಜಾಸಿಂಗ್‌ ಜುಲೈ 31ರಂದು ಬೆಳಗಿನ ಜಾವ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಳಿ ಕ್ಯಾಬ್‌ ಚಾಲಕ ಎಚ್‌.ಎಂ ನಾಗೇಶ್‌ ಎಂಬಾತನಿಂದ ಬರ್ಬರವಾಗಿ ಹತ್ಯೆಯಾದರು. ಈ ಕೊಲೆ ಪ್ರಕರಣ ಭೇದಿಸಲು 19 ದಿನ ಹಿಡಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪೂಜಾಸಿಂಗ್‌ ಅವರ ಬಯೋ ಮೆಟ್ರಿಕ್‌ ವಿವರ ತೆಗೆದುಕೊಂಡು, ವೈಯಕ್ತಿಕ ಮಾಹಿತಿ ಒದಗಿಸುವಂತೆ ಆಧಾರ್‌ ಪ್ರಾಧಿಕಾರಕ್ಕೆ ಕೇಳಲಾಯಿತು. ನಮ್ಮ ಕೋರಿಕೆಯನ್ನು ಅಧಿಕಾರಿಗಳು ಆಲಿಸಿದ್ದರೆ ತಕ್ಷಣವೇ ಅವರ ಗುರುತು, ವಿಳಾಸ ಪತ್ತೆ ಮಾಡಬಹುದಿತ್ತು. ಎಷ್ಟೇ ಮನವೊಲಿಸಿದರು ಮೃತರ ವೈಯಕ್ತಿಕ ವಿವರಗಳನ್ನು ನೀಡಲು ಅಧಿಕಾರಿಗಳು ಒಪ್ಪಲಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಕೊಡಲಾಗದು ಎಂದುಬಿಟ್ಟರು’ ಎಂಬುದಾಗಿ ತನಿಖಾಧಿಕಾರಿಗಳು ವಿವರಿಸಿದ್ದಾರೆ.

‘ಆಧಾರ್‌ ಅಧಿಕಾರಿಗಳು ಕಡೇ ಪಕ್ಷ ಸತ್ತವರ, ಕಣ್ಮರೆಯಾದವರ ವಿವರಗಳನ್ನಾದರೂ ಒದಗಿಸಿದರೆ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಾಯವಾಗಲಿದೆ. ನಗರದಲ್ಲಿ ತಿಂಗಳಿಗೆ ಸರಾಸರಿ 25 ಶವಗಳು ಪತ್ತೆಯಾಗುತ್ತಿವೆ. ಆಧಾರ್‌ ಪ್ರಾಧಿಕಾರ ಇಂತಹ ಪ್ರಕರಣಗಳಲ್ಲಾದರೂ ಸಹಕಾರ ನೀಡಬೇಕು’ ಎಂದು ಅವರು ಅಭಿಪ್ರಾಯ ಪಟ್ಟರು.

ಪೂಜಾ ಅವರ ಶವ ಜುಲೈ 31ರಂದು ಬೆಳಿಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಕಾಂಪೌಂಡ್‌ ಬಳಿ ಪತ್ತೆಯಾಗಿದ್ದರೂ, ಆಗಸ್ಟ್‌ 19ರಂದು ಆರೋಪಿ ನಾಗೇಶ್‌ನನ್ನು ಬಂಧಿಸಲಾಯಿತು. ಆತನಿಂದ ವಶಪಡಿಸಿಕೊಂಡ ಮೃತರ ಬ್ಯಾಗಿನಲ್ಲಿ ಆಧಾರ್ ಕಾರ್ಡ್‌ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಸ್ವಿಚ್‌ ಆನ್‌ ಆಗಿದ್ದ ಫೋನ್‌
ಪೂಜಾಸಿಂಗ್‌ ಅವರ ಕೊಲೆಯ ಬಳಿಕ ಸ್ವಿಚ್‌ ಆಫ್‌ ಆಗಿದ್ದ ಅವರ ಮೊಬೈಲ್‌ ಫೋನ್‌ ಎರಡು ದಿನಗಳ ನಂತರ ಆನ್‌ ಆಗಿತ್ತು. ಫೋನ್‌ ಆನ್‌ ಆಗುತ್ತಿದ್ದಂತೆ ಬಹಳಷ್ಟು ಮೆಸೇಜ್‌ಗಳು ಬಂದಿದ್ದವು.

ತಮ್ಮ ಪತ್ನಿ ಎಲ್ಲಿದ್ದಾರೆ ಎಂದು ತಿಳಿಯಲು ಅವರ ಪತಿಯೂ ಮೆಸೇಜ್‌ ಮಾಡಿದ್ದರು. ‘ನಾನು ಹೈದರಾಬಾದ್‌ನಲ್ಲಿ ಇದ್ದೇನೆ. ಕೊಂಚ ಹಣ ಬೇಕಾಗಿದೆ’ ಎಂದು ಡೇ ಅವರ ಮೆಸೇಜ್‌ಗೆ ಸಿಂಗ್‌ ಅವರ ಪರವಾಗಿ ಆರೋಪಿಯೇ ಉತ್ತರಿಸಿದ್ದ ಎಂದು ಗೊತ್ತಾಗಿದೆ.

ಇದರಿಂದ ಅನುಮಾನಗೊಂಡ ಪತಿ, ಕೋಲ್ಕತ್ತಾದ ನ್ಯೂ ಟೌನ್‌‍ ಪೊಲೀಸರನ್ನು ಸಂಪರ್ಕಿಸಿದ್ದರು. ದೂರು ದಾಖಲಿಸಿಕೊಳ್ಳದ ಪೊಲೀಸರು ಅವರನ್ನು ಸಮಾಧಾನಪಡಿಸಿ ವಾಪಸ್‌ ಕಳುಹಿಸಿದ್ದರು ಎನ್ನಲಾಗಿದೆ.

ಸೋದರರಿಗೆ ಕರೆ ಮಾಡಿದ್ದ ಪೂಜಾ
ಜುಲೈ 30ರಂದು ಬೆಂಗಳೂರಿನಲ್ಲಿದ್ದ ಪೂಜಾ ತಮ್ಮ ಸೋದರರಾದ ವಿಶಾಲ್‌ ಮತ್ತು ಸೂರಜ್‌ ಅವರಿಗೆ ವ್ಯಾಟ್ಸ್‌ ಆಪ್‌ ಕರೆ ಮಾಡಿದ್ದರು. ಕೋಲ್ಕತ್ತಾಕ್ಕೆ ಹಿಂತಿರುಗಿದ ಬಳಿಕ ‘ರಕ್ಷಾ ಬಂಧನ್‌’ ದಿನ ಸಿನಿಮಾಗೆ ಕರೆದೊಯ್ಯುವುದಾಗಿ ತಿಳಿಸಿದ್ದರು ಎಂದು ಗೊತ್ತಾಗಿದೆ.

₹ 50 ಸಾವಿರ ಬಹುಮಾನ: ನಿಗೂಢ ಕೊಲೆ ಪ್ರಕರಣವನ್ನು ಭೇದಿಸಿದ ಇನ್‌ಸ್ಪೆಕ್ಟರ್‌ ರಾಮಮೂರ್ತಿ ಹಾಗೂ ಅವರ ತಂಡಕ್ಕೆ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ₹ 50,000 ಬಹುಮಾನ ಪ್ರಕಟಿಸಿದ್ದಾರೆ. ಈ ಪ್ರಕರಣವನ್ನು ಭೇದಿಸುವ ಮೂಲಕ ನಮ್ಮ ಪೊಲೀಸರು ಸಾಧನೆ ಮಾಡಿದ್ದಾರೆ ಎಂದಿದ್ದಾರೆ.

ಈ ಮಧ್ಯೆ, ಆರೋಪಿಯನ್ನು ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. 22ರಂದು ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ತಿಂಗಳ 27ರವರೆಗೆ ಪೊಲೀಸ್‌ ಕಸ್ಟಡಿಗೆ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT