ಗುರುವಾರ , ಮೇ 19, 2022
21 °C

ರಾಜಧಾನಿ ಒಡಲ ಧನಿ: ರಸ್ತೆ ಗುಂಡಿ ಮುಚ್ಚಲು ಇನ್ನೆಷ್ಟು ಕಾಲ ಬೇಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಹಲವು ತಿಂಗಳುಗಳಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಸ್ತೆ ಗುಂಡಿಗಳಿಂದಾಗಿಯೇ ಅಪಘಾತಕ್ಕೀಡಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ದುರ್ಘಟನೆಗಳು ಆಗಾಗ ಸಂಭವಿಸುತ್ತಲೇ ಇವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಪರದಾಡಬೇಕಾದ ಸ್ಥಿತಿ ಇದೆಯೆ? ಎಂಬುದರ ಕುರಿತು ಜನರ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಏಕೆ ಪದೇ ಪದೇ ಗುಂಡಿಗಳು ಬೀಳುತ್ತಿವೆ? ಗುಂಡಿ ಮುಚ್ಚಲು ಅಷ್ಟೊಂದು ಸಮಯ ಬೇಕೆ? ಎಂಬುದರ ಕುರಿತು ತಜ್ಞರು, ರಾಜಕೀಯ ಮುಖಂಡರು, ಸಾರ್ವಜನಿಕರು ‘ಪ್ರಜಾವಾಣಿ’ ಜತೆ ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

ಪದೇ ಪದೇ ಗುಂಡಿಗಳು ಬೀಳುತ್ತಿವೆ!

ಬಿಬಿಎಂಪಿ ವ್ಯಾಪ್ತಿಯಲ್ಲಿ 1,500 ಕಿ.ಮೀ. ಉದ್ದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿವೆ. 11,500 ಕಿ.ಮೀ. ಉದ್ದದ ಸಣ್ಣ ರಸ್ತೆಗಳಿವೆ. ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ಇರುವುದರಿಂದ ಪದೇ ಪದೇ ಗುಂಡಿಗಳು ಬೀಳುತ್ತಿವೆ. ಕಾಂಕ್ರೀಟ್‌ ರಸ್ತೆಗಳು, ಟೆಂಡರ್‌ ಶ್ಯೂರ್‌ ರಸ್ತೆಗಳಲ್ಲಿ ಈ ಸಮಸ್ಯೆ ಇಲ್ಲ. 

ರಸ್ತೆ ಗುಂಡಿಗಳನ್ನು ಮುಚ್ಚಲು ಬೇಕಾದ ಎಲ್ಲ ಸೌಲಭ್ಯಗಳೂ ಇವೆ. ದಿನವೊಂದಕ್ಕೆ 60 ಲಾರಿಗಳಷ್ಟು ಡಾಂಬರು ಮಿಶ್ರಿತ ಜೆಲ್ಲಿ ಸಿದ್ಧಪಡಿಸುವ ಘಟಕವನ್ನು ರಾಜ್ಯ ಸರ್ಕಾರವೇ ಸ್ಥಾಪಿಸಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ 15 ದಿನಗಳೊಳಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ರಸ್ತೆಗಳನ್ನೂ ಗುಂಡಿ ಮುಕ್ತಗೊಳಿಸಬಹುದು. ರಸ್ತೆ ಗುಂಡಿ ಮುಚ್ಚಲು ಅನುದಾನದ ಕೊರತೆ ಇಲ್ಲ. ಮಳೆ ಇದ್ದಾಗ ಕೆಲಸ ಕಷ್ಟ. ಆದರೆ, ಮಳೆ ಕಡಿಮೆಯಾದರೂ ಗುಂಡಿ ಮುಚ್ಚಲು ಸಾಧ್ಯ. ಸದ್ಯ ಇರುವ ಸೌಲಭ್ಯ ಆಧಾರದಲ್ಲಿ ರಸ್ತೆಗಳ ಗುಂಡಿ ಮುಚ್ಚುವುದು ಬಿಬಿಎಂಪಿ ಪಾಲಿಗೆ ಸವಾಲಿನ ಕೆಲಸವೇ ಆಗಬಾರದು. ರಸ್ತೆ ನಿರ್ಮಾಣ, ನಿರ್ವಹಣೆ ಮತ್ತು ಗುಂಡಿ ಮುಚ್ಚುವ ವಿಚಾರದಲ್ಲಿ ಮಾರ್ಗಸೂಚಿ ‍ಪಾಲಿಸಿದರೆ ಸಮಸ್ಯೆಯೇ ಇರುವುದಿಲ್ಲ.

- ಕೆ.ಟಿ. ನಾಗರಾಜ್‌, ಬಿಬಿಎಂಪಿಯ ನಿವೃತ್ತ ಮುಖ್ಯ ಎಂಜಿನಿಯರ್‌

ಕಾಳಜಿ ಇಲ್ಲದಿರುವುದೇ ಸಮಸ್ಯೆಗೆ ಮೂಲ

ಐದು ವರ್ಷಗಳ ಅವಧಿಯಲ್ಲಿ ಬಿಬಿಎಂ‍ಪಿ ವ್ಯಾಪ್ತಿಯಲ್ಲಿನ ರಸ್ತೆಗಳ ಕಾಮಗಾರಿಗಳಿಗೆ ₹ 20,000 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ವಿಧಾನಮಂಡಲದಲ್ಲಿ ಹೇಳಿದ್ದಾರೆ. ಅದು, ನಿಜವೇ ಆಗಿದ್ದರೆ ಬೆಂಗಳೂರಿನಲ್ಲಿ ಗುಂಡಿಗಳಿರುವ ರಸ್ತೆಗಳೇ ಇರಬಾರದು. ಆದರೆ, ಎಲ್ಲಿ ನೋಡಿದರೂ ರಸ್ತೆಗಳ ತುಂಬಾ ಗುಂಡಿಗಳೇ ಕಾಣುತ್ತಿವೆ. ರಸ್ತೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಅತಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಏನು ಬೇಕು?

ಬೆಂಗಳೂರಿನಲ್ಲೇ ಹಲವು ಒಳ್ಳೆಯ ರಸ್ತೆಗಳಿವೆ. ಗುಂಡಿ ಬೀಳದ ಹಾಗೆ ರಸ್ತೆ ನಿರ್ಮಿಸುವುದು ಗೊತ್ತಿದೆ. ಆದರೆ, ಅದನ್ನು ಬಳಕೆ ಮಾಡುತ್ತಿಲ್ಲ ಎಂಬುದು ಸತ್ಯ. ರಸ್ತೆ ನಿರ್ಮಾಣದಲ್ಲಿನ ಭ್ರಷ್ಟಾಚಾರ ಅಮಾಯಕರ ಪ್ರಾಣಕ್ಕೇ ಸಂಚಕಾರ ತರುತ್ತಿದೆ. ಗುಂಡಿಗಳಿಂದ ಸಾವು, ನೋವುಗಳು ಸಂಭವಿಸುತ್ತಿವೆ. ಮುಂದುವರಿದ ದೇಶಗಳಲ್ಲಿ ಇರುವಂತೆ ಇಂತಹ ಪ್ರಕರಣಗಳಲ್ಲಿ ಸರ್ಕಾರವನ್ನೇ ಹೊಣೆಗಾರನನ್ನಾಗಿ ಮಾಡಿ ಮೊಕದ್ದಮೆ ಹೂಡುವ ವ್ಯವಸ್ಥೆ ತರಬೇಕಿದೆ.

ಸರ್ಕಾರ ನಡೆಸುವವರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲ. ಕೇವಲ ಚುನಾವಣೆಗಳನ್ನು ನಡೆಸುವುದರಲ್ಲೇ ಮುಳುಗಿದ್ದಾರೆ. ಸ್ವತಃ ಮುಖ್ಯಮಂತ್ರಿಯವರೇ ಬೆಂಗಳೂರಿನ ಉಸ್ತುವಾರಿ ಹೊಂದಿದ್ದಾರೆ. ಆದರೂ, ರಸ್ತೆ ಗುಂಡಿ ಮುಚ್ಚಲು ಇಷ್ಟೊಂದು ವಿಳಂಬ ಏಕೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಿದೆ. ಪಾಲಿಕೆಯಲ್ಲಿ ಚುನಾಯಿತ ಸದಸ್ಯರೂ ಇಲ್ಲ. ಜನರು ಬೀದಿಗೆ ಇಳಿದು ಹೋರಾಡುವುದೊಂದೆ ದಾರಿ.

- ಶಾಂತಲಾ ದಾಮ್ಲೆ, ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ

ಓಡಾಡುವುದೇ ಕಷ್ಟವಾಗುತ್ತಿದೆ

ಬೆಂಗಳೂರಿನ ಎಲ್ಲ ಪ್ರದೇಶಗಳಲ್ಲೂ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚುತ್ತಿದೆ. ಎಲ್ಲಿಯೂ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ವಾಹನಗಳಲ್ಲಿ ಸಂಚಾರ ತೀರಾ ಕಷ್ಟ. ನಡೆದಾಡುವುದೂ ಕಷ್ಟ ಎನಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬಿಬಿಎಂಪಿ ಆಡಳಿತಕ್ಕೆ ಜನರ ಕಷ್ಟ ಪರಿಹರಿಸುವ ಕಾಳಜಿ ಇಲ್ಲದಿರುವುದೇ ಇದಕ್ಕೆ ಕಾರಣ. ಆಡಳಿತ ವ್ಯವಸ್ಥೆ ಮನಸ್ಸು ಮಾಡಿದರೆ ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹರಿಸಬಹುದು. ಆದರೂ, ಮಾಡುತ್ತಿಲ್ಲ. ಇಂತಹ ಧೋರಣೆಗೇನು ಎಂಬುದು ತಿಳಿಯುತ್ತಿಲ್ಲ.

- ಮಂಜುನಾಥ್‌, ಬಾಣಸವಾಡಿ

ಕಿವಿಯೂ ಕೇಳಿಸುತ್ತಿಲ್ಲ... ಕಣ್ಣು ಕಾಣುತ್ತಿಲ್ಲ...’

ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಗುಂಡಿಗಳೇ ಕಾಣುತ್ತಿವೆ. ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳು ಮೌನವಾಗಿದ್ದಾರೆ. ದೂರು ಕೊಟ್ಟರೂ ಸ್ಪಂದಿಸುತ್ತಿಲ್ಲ. ಅವರ ಕಿವಿಯೂ ಕೇಳಿಸುತ್ತಿಲ್ಲ... ಕಣ್ಣು ಕಾಣುತ್ತಿಲ್ಲ...

ಕೇಬಲ್ ಅಳವಡಿಕೆ ಹಾಗೂ ಇತರೆ ಉದ್ದೇಶಕ್ಕಾಗಿ ಖಾಸಗಿ ಕಂಪನಿಯವರು ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಹೋಗುತ್ತಿದ್ದಾರೆ. ಇದರಿಂದಲೇ ಗುಂಡಿಗಳು ಬಿದ್ದು, ಇಡೀ ರಸ್ತೆ ಹಾಳಾಗುತ್ತಿದೆ. ಅವರನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ.

- ಎನ್‌. ಮುನಿರಾಜು, ದಂಡು ಪ್ರದೇಶ ಕನ್ನಡ ಸಂಘಟನೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

ಗಣ್ಯರು ಬಂದಾಗ ಮಾತ್ರ ಗುಂಡಿ ಮುಚ್ಚಿಕೊಳ್ಳುತ್ತದೆಯೇ?

ಬೆಂಗಳೂರಿನ ಹಲವು ರಸ್ತೆಗಳು ಗುಂಡಿಗಳಿಂದ ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ರಸ್ತೆ ಗುಂಡಿಗಳ ಅನುಭವವೇ ನೀಡದ ದುಬಾರಿ ಕಾರುಗಳಲ್ಲಿ ಶ್ರೀಮಂತರು ಸಂಚರಿಸಿಬಿಡುತ್ತಾರೆ. ಆದರೆ, ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ಗುಂಡಿಗಳ ರಸ್ತೆಗಳಲ್ಲಿ ಬಿದ್ದು ಏಳುವುದೇ ಹೆಚ್ಚು. ಜನರ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳನ್ನು ಹಾಗೆಯೇ ಬಿಟ್ಟಿರುವುದು ಆಡಳಿತ ವ್ಯವಸ್ಥೆಯ ಕೈಗನ್ನಡಿ. ರಸ್ತೆಗಳು ಸರಿಯಾಗಬೇಕೆಂದರೆ ಗಣ್ಯರು ಅಥವಾ ರಾಜಕಾರಣಿಗಳೇ ಆಗಮಿಸಬೇಕೇ?

- ವಿಜಯ್, ಖಾಸಗಿ ಕಂಪನಿ ಉದ್ಯೋಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು