ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮೊಟ್ಟೆ ದಿನಾಚರಣೆ | ಕೋಳಿ ಸಾಕಣೆ ಉದ್ಯಮಕ್ಕೆ ಬೆಂಬಲ: ಡಿ.ಕೆ.ಶಿವಕುಮಾರ್‌

Published 13 ಅಕ್ಟೋಬರ್ 2023, 16:05 IST
Last Updated 13 ಅಕ್ಟೋಬರ್ 2023, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಏರಿಳಿತದ ಮಾರುಕಟ್ಟೆಗಿಂತ ಸ್ಥಿರ ಮಾರುಕಟ್ಟೆ ಇದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಸರ್ಕಾರವು ಕೋಳಿ ಮೊಟ್ಟೆ ಮತ್ತು ಮಾಂಸ ಮಾರಾಟಗಾರರ ಬೆಂಬಲಕ್ಕೆ ನಿಲ್ಲಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ವಿಶ್ವ ಮೊಟ್ಟೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಣ್ಣ ವದಂತಿ ಬಂದರೂ ಕೋಳಿ ಮಾರುಕಟ್ಟೆ, ಮೊಟ್ಟೆ ಮಾರುಕಟ್ಟೆ ಕುಸಿದು ಹೋಗುತ್ತದೆ. ಇದರಿಂದ ಕೋಳಿ ಸಾಕಣೆ ಮಾಡುವವರು, ಕೋಳಿ ಮಾಂಸ, ಮೊಟ್ಟೆ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ’ ಎಂದು ಹೇಳಿದರು.

‘ಸಹಕಾರ ಕುಕ್ಕುಟ ಮಹಾಮಂಡಳಿಯ ಸಮಸ್ಯೆ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸೋಣ. ಮಹಾಮಂಡಳಿಯನ್ನು ಪುನಶ್ಚೇತನಗೊಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸೋಣ’ ಎಂದರು.

‘ಮೊಟ್ಟೆ ತಿಂದವನು ಜಟ್ಟಿಯಾಗುತ್ತಾನೆ ಎಂಬ ಹಿರಿಯರ ಮಾತು ಆರೋಗ್ಯಕ್ಕೆ ಮೊಟ್ಟೆ ಎಷ್ಟು ಒಳ್ಳೆಯದು ಎಂಬುದನ್ನು ತೋರಿಸುತ್ತದೆ. ಆಹಾರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ’ ಎಂದು ವಿವರಿಸಿದರು.

ಎಂಬಿಬಿಎಸ್‌ ವೈದ್ಯರಿಗಿಂತ ಪಶುವೈದ್ಯರಿಗೆ ಬೇಡಿಕೆ ಹೆಚ್ಚಿದೆ. ಪಶು ವೈದ್ಯಕೀಯ ಕಾಲೇಜುಗಳನ್ನು ಹೆಚ್ಚು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು ಮಾತನಾಡಿ, ‘ರಾಜ್ಯದಲ್ಲಿ ದಿನಕ್ಕೆ 2 ಕೋಟಿ ಮೊಟ್ಟೆ ಉತ್ಪಾದನೆಯಾಗುತ್ತದೆ. ಅಂಗನವಾಡಿಗಳಿಗೆ ಮಹಾಮಂಡಳಿಯೇ ಮೊಟ್ಟೆ ಪೂರೈಕೆ ಮಾಡುತ್ತಿದೆ. ಮೊಟ್ಟೆ ವಿತರಣೆಗೆ ಸರ್ಕಾರ ನೀಡುವ ₹ 2.5 ಕೋಟಿ ಕೇವಲ ವೇತನಕ್ಕೆ ಸರಿಯಾಗುತ್ತಿದೆ. ಕುಕ್ಕುಟ ಮಹಾಮಂಡಳಿಯನ್ನು ಕರ್ನಾಟಕದ ಹಾಲು ಒಕ್ಕೂಟದ ತರಹ ಬೆಳೆಸಬೇಕು. ಮಹಾಮಂಡಳಿಯನ್ನು ಪುನಶ್ಚೇತನಗೊಳಿಸಲು ಮತ್ತು ಕೋಳಿ ಸಾಕಣೆ ಮಾಡುವ ರೈತರನ್ನು ಪ್ರೋತ್ಸಾಹಿಸಲು ಸರ್ಕಾರ ಯೋಜನೆ ರೂಪಿಸಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ನಾರಾಯಣ ಸ್ವಾಮಿ, ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವ ವಿದ್ಯಾಲಯದ ಕುಲಪತಿ ಕೆ.ಸಿ ವೀರಣ್ಣ, ಮಹಾಮಂಡಳಿ ಉಪಾಧ್ಯಕ್ಷ ಜಿ.ಟಿ.ಹರೀಶ್‌, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ನಿರ್ದೇಶಕ ಮಂಜುನಾಥ ಎಸ್‌. ಪಾಳೇಗಾರ್‌ ಇದ್ದರು.

‘ಕೋಳಿ ಫಾರ್ಮ್‌ ನನ್ನ ಮೊದಲ ವ್ಯಾಪಾರ’

‘ನನ್ನ ಬದುಕಿನ ಮೊದಲ ವ್ಯವಹಾರವೇ ಕೋಳಿ ಫಾರ್ಮ್‌ ಆಗಿತ್ತು. ಪಿಯುಸಿ ಓದುತ್ತಿದ್ದಾಗ ಇಲ್ಲೇ ಕೋಳಿ ಫಾರ್ಮ್‌ ಬಗ್ಗೆ ತರಬೇತಿ ಪಡೆದಿದ್ದೆ. ಸುಂಕದಕಟ್ಟೆಯಲ್ಲಿ ಜಮೀನು ಇತ್ತು. ಮುಂದೆ ಬ್ಯಾಂಕ್‌ನಿಂದ ಸಾಲ ಪಡೆದು ಕೋಳಿ ಫಾರ್ಮ್‌ ಮಾಡುವ ಮೂಲಕ ವ್ಯವಹಾರ ಕ್ಷೇತ್ರಕ್ಕೆ ಕಾಲಿರಿಸಿದೆ. ಆದರೆ ನಷ್ಟವಾಗಿ ಕೋಳಿ ಫಾರ್ಮ್‌ ಮುಚ್ಚಿದೆ’ ಎಂದು ಡಿ.ಕೆ. ಶಿವಕುಮಾರ್‌ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT