ಮಂಗಳವಾರ, ಮಾರ್ಚ್ 2, 2021
31 °C
ಬೀದಿನಾಯಿ ಹಾವಳಿ * ಕಸ ವಿಲೇವಾರಿ ಸಮಸ್ಯೆ * ರಾಜಕಾಲುವೆಗಳಲ್ಲಿ ಗಿಡಗಂಟಿ

ಸಮಸ್ಯೆಗಳಿಗೆ ಸ್ಪಂದನೆ: ಮೂಡಿದ ಹೊಸ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಬೀದಿನಾಯಿ ಹಾವಳಿ, ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರಿನ ತೊಂದರೆ, ಗಿಡ ಗಂಟಿ ಬೆಳೆದು ಕಟ್ಟಿಕೊಂಡ ರಾಜಕಾಲುವೆ...

ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಗೊಂಡ ವಾರ್ಡ್‌ಗಳನ್ನೇ ಹೊಂದಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನತೆ ಹಲವಾರು ವರ್ಷಗಳಿಂದ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿವು.

ಇಂತಹ ಹತ್ತು ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯುವ ಬಗ್ಗೆ ಸ್ಥಳೀಯರಲ್ಲಿ ಹೊಸ ಭರವಸೆ ಮೂಡಿದೆ. ಜನರ ಸಮಸ್ಯೆಗಳನ್ನು ಜನಪ್ರತಿನಿಧಿ
ಗಳಿಗೆ ಹಾಗೂ ಅಧಿಕಾರಿಗಳ ಗಮನಕ್ಕೆ ತರುವುದಕ್ಕೆ ವೇದಿಕೆ ಕಲ್ಪಿಸಿದ್ದು ‘ಪ್ರಜಾವಾಣಿ’ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮ. ಕ್ಷೇತ್ರದ ಎಂಟು ವಾರ್ಡ್‌ಗಳ ನೂರಾರು ಜನ ಸಮಸ್ಯೆಗಳ ತೀವ್ರತೆಯನ್ನು ತೆರೆದಿಟ್ಟರು. 

ಜನರ ಕಷ್ಟಗಳನ್ನು ಸಮಚಿತ್ತದಿಂದ ಆಲಿಸಿದ ಶಾಸಕ ಆರ್‌.ಮಂಜುನಾಥ್‌ ಹಾಗೂ ಆಯಾ ವಾರ್ಡ್‌ಗಳ ಪಾಲಿಕೆ ಸದಸ್ಯರು ಅವುಗಳಿಗೆ ಕಾಲಮಿತಿಯೊಳಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಬೀದಿನಾಯಿ ಹಾವಳಿ: ಕ್ಷೇತ್ರದ ಬಹುತೇಕ ವಾರ್ಡ್‌ಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಅನೇಕರು ಅಳಲು ತೋಡಿಕೊಂಡರು.

‘ಚೊಕ್ಕಸಂದ್ರವಾರ್ಡ್‌ನ ಎಚ್‌ಎಂಟಿ ಬಡಾವಣೆಯಲ್ಲಿ ಹೆಚ್ಚೆಂದರೆ 800 ಮನೆಗಳಿವೆ. ಆದರೆ, ಇಲ್ಲಿ 600ಕ್ಕೂ ಹೆಚ್ಚು ನಾಯಿಗಳಿವೆ. ಬಿಬಿಎಂಪಿಯವರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಆದರೆ, ಇಲ್ಲಿಂದ ಹಿಡಿದುಕೊಂಡು ಹೋಗಿದ್ದಕ್ಕಿಂತ ಹೆಚ್ಚಿನ ನಾಯಿಗಳನ್ನು ತಂದು ಬಿಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿ ರಾಜ್‌ಕುಮಾರ್‌ ಅವರು ದೂರಿದರು.

‘ಬೀದಿ ನಾಯಿ ಹಾವಳಿಯಿಂದ ಮಕ್ಕಳೇ ಶಾಲೆಗೆ ಹೋಗಲು ಹೆದರುತ್ತಿದ್ದಾರೆ’ ಎಂದು ಸಿದ್ದೇಶ್ವರ ಬಡಾವಣೆಯ ಅಂದಾನಯ್ಯ ತಿಳಿಸಿದರು.

‘ಬೀದಿ ನಾಯಿಗಳ ಜೊತೆಗೆ ಹಾವು ಚೇಳುಗಳ ಕಾಟವೂ ಹೆಚ್ಚಾಗಿದೆ’ ಎಂದು ಸೌಂದರ್ಯ ಬಡಾವಣೆಯ ಆಯೇಷಾ ದೂರಿದರು. ಹೆಗ್ಗನಹಳ್ಳಿ ವಾರ್ಡ್‌ನ ಉಮೇಶ್‌, ಮಲ್ಲಸಂದ್ರ ವಾರ್ಡ್‌ನ ಎಂ.ಬಿ.ಬೈರಣ್ಣ, ಟಿ.ದಾಸರಹಳ್ಳಿ ವಾರ್ಡ್‌ನ ಕೃಷ್ಣಮೂರ್ತಿ, ಬಾಗಲಕುಂಟೆ ವಾರ್ಡ್‌ನ ಶರತ್‌ ಅತ್ತಾವರ ಅವರೂ ಈ ಸಮಸ್ಯೆಯ ತೀವ್ರತೆ ವಿವರಿಸಿದರು.

ರಾಜಕಾಲುವೆ ಸಮಸ್ಯೆ: ರಾಜಕಾಲುವೆಯಲ್ಲಿ ಅನೇಕ ಕಡೆ ಹೂಳು ತುಂಬಿದ್ದಲ್ಲದೇ ಗಿಡಗಂಟಿಗಳು ಬೆಳೆದಿವೆ.  ಚರಂಡಿಗಳಲ್ಲೂ ಹೂಳು ತುಂಬಿದ್ದು, ಇವುಗಳಲ್ಲಿ ನೀರಿನ ಸಹಜ ಹರಿವು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ರಾಜಕಾಲುವೆಗಳಲ್ಲಿ ನೀರು ಉಕ್ಕಿ ಪ್ರವಾಹ ಉಂಟಾಗುವ ಅಪಾಯವಿದೆ ಎಂಬ ಭಯ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.

‘ಚರಂಡಿ ಹೂಳೆತ್ತಿದ್ದಾರೆ. ಆದರೆ ಅದನ್ನು ವಿಲೇವಾರಿಯನ್ನು ಸರಿಯಾಗಿ ನಡೆಸಿಲ್ಲ. ಮಳೆ ಬಂದರೆ ಆ ಹೂಳು ಮತ್ತೆ ಚರಂಡಿಗೆ ಸೇರುತ್ತದೆ. ರಾಜಕಾಲುವೆಗಳಲ್ಲಿ ಬೆಳೆದ ಗಿಡ ಗಂಟಿಗಳನ್ನು ಹಾಗೂ ಹೂಳನ್ನು ತೆರವುಗೊಳಿಸದಿದ್ದರೆ ಈ ಮಳೆಗಾಲದಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಳ್ಳಲಿವೆ’ ಎಂದು ಸಿದ್ದೇಶ್ವರ ಬಡಾವಣೆಯ ಅಂದಾನಯ್ಯ ಆತಂಕ ವ್ಯಕ್ತಪಡಿಸಿದರು. 

ರಾಜಕಾಲುವೆ ಹಾಗೂ ಚರಂಡಿಯನ್ನು ಸ್ವಚ್ಛಗೊಳಿಸಲು ಶೀಘ್ರ ಕ್ರಮಕೈಗೊಳ್ಳುವುದಾಗಿ ಬಿಬಿಎಂಪಿ ರಾಜಕಾಲುವೆ ವಿಭಾಗದ ಅಧಿಕಾರಿಗಳು ಭರವಸೆ ನೀಡಿದರು.

ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಅನೇಕ ಮಂದಿ ದೂರಿದರು.

‘ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿ ಪಕ್ಕದಲ್ಲೇ ಕಸವನ್ನು ತಂದು ಸುರಿಯುತ್ತಾರೆ. ಆದರೂ ಕ್ರಮ ಕೈಗೊಂಡಿಲ್ಲ’ ಎಂದು ಲೋಕೇಶ್‌ ಗೌಡ ಬೇಸರ ವ್ಯಕ್ತಪಡಿಸಿದರು.

‘ಮಲ್ಲಸಂದ್ರ ವಾರ್ಡ್‌ನ ಸೈಪ್ರಸ್‌ ಬಡಾವಣೆಯಲ್ಲಿ ಕಸವನ್ನು ಸಂಗ್ರಹಿಸುವ ತಾಣದಿಂದಾಗಿ ಸ್ಥಳೀಯ ನಿವಾಸಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕಸ ಸಂಗ್ರಹಣೆಗೆ ಬೇರೆ ಜಾಗ ಹುಡುಕಿ’ ಎಂಬುದು ಇಲ್ಲಿನ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಬೇಡಿಕೆ.

‘ಇಲ್ಲಿ ಕುವೆಂಪು ಕಾಲೇಜು ಗೇಟಿನ ಎದುರೇ ಕಸ ಸುರಿಯುತ್ತಾರೆ. ಇದನ್ನು ತಡೆಯಲು ಕ್ರಮಕೈಗೊಳ್ಳಬೇಕು’ ಎಂದು ಸಂಘದ ‍ಪ್ರತಿನಿಧಿಗಳು ಒತ್ತಾಯಿಸಿದರು.

‘ಕಸ ಸಂಗ್ರಹಿಸುವ ಸ್ಥಳವನ್ನು ಹಿಂದೊಮ್ಮೆ ಬೇರೆ ಕಡೆಗೆ ಸ್ಥಳಾಂತರಿಸಿದ್ದೆವು. ಅಲ್ಲೂ ವಿರೋಧ ವ್ಯಕ್ತವಾಗಿದ್ದರಿಂದ ಮತ್ತೆ ಇಲ್ಲೇ ಕಸ ಸಂಗ್ರಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡುತ್ತೇವೆ’ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ 2 ದಿನಗಳಲ್ಲಿ ಇತ್ಯರ್ಥ

ಈ ಕ್ಷೇತ್ರದ ಅನೇಕ ವಾರ್ಡ್‌ಗಳಿಗೆ ಒಂದು ತಿಂಗಳಿನಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಅನೇಕರು ಅಳಲು ತೋಡಿಕೊಂಡರು. ವಾಲ್ವ್‌ ಸಮಸ್ಯೆಯಿಂದ ಕೆಲವು ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ಒಪ್ಪಿಕೊಂಡರು.

ಇದರಿಂದ ಸಿಟ್ಟಿಗೆದ್ದ ಶಾಸಕರು, ‘ನೀರಿನ ಸಮಸ್ಯೆ ಹೇಳಿಕೊಂಡು ನಿತ್ಯ ನೂರು ಜನ ನನಗೆ ಕರೆ ಮಾಡುತ್ತಾರೆ. ಸಬೂಬು ಹೇಳಬೇಡಿ. ಎಷ್ಟು ದಿನಗಳ ಒಳಗೆ ಸಮಸ್ಯೆ ಬಗೆಹರಿಸುತ್ತೀರಿ ಸ್ಪಷ್ಟಪಡಿಸಿ’ ಎಂದು ಖಾರವಾಗಿ ಹೇಳಿದರು.

ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ, ಎರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ವಾಗ್ದಾನ ನೀಡಿದರು.

‘ಒತ್ತಡ ಕಡಿಮೆ ಇರುವ ಕಾರಣ ಅನೇಕ ಎತ್ತರ ಪ್ರದೇಶಗಳಿಗೆ ನೀರು ತಲುಪುತ್ತಿಲ್ಲ. ಬೇಕಿದ್ದರೆ ನಾಲ್ಕು ದಿನಗಳಿಗೊಮ್ಮೆ ನೀರು ಬಿಡಿ. ಆದರೆ, ನೀರು ಹರಿಸುವ ಅವಧಿಯನ್ನು ಎರಡು ಗಂಟೆಗೆ ಸೀಮಿತಗೊಳಿಸುವ ಬದಲು ನಾಲ್ಕು ಗಂಟೆವರೆಗೆ ವಿಸ್ತರಿಸಿ’ ಎಂದು ನಾಗೇಂದ್ರ ಕೋರಿದರು.

‘ನೀರಿನ ಟ್ಯಾಂಕ್‌ ಭರ್ತಿಯಾದಾಗ ನೀರು ಪೂರೈಕೆ ತನ್ನಿಂದ ತಾನೇ ನಿಲ್ಲುವಂತಹ ಸ್ವಯಂಚಾಲಿತ ವ್ಯವಸ್ಥೆ ಅಳಡಿವಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ಎಜಿಪಿ ಬಡಾವಣೆಯ ಅನೇಕ ಮನೆಗಳ ನೀರಿನ ಟ್ಯಾಂಕ್‌ ಭರ್ತಿಯಾಗಿ ರಸ್ತೆಗಳಲ್ಲಿ ಹರಿಯುತ್ತಿರುತ್ತದೆ’ ಎಂದು ಕೃಷ್ಣಯ್ಯ ಸಲಹೆ ನೀಡಿದರು.

ಅಭಿವೃದ್ಧಿಗೆ ಜನರ ಸಲಹೆಗಳು

ನಾಗರಾಜ್‌, ಪೀಣ್ಯ ಕೈಗಾರಿಕ ಪ್ರದೇಶ: ಇದು ಕೇವಲ ಮಾತಿನ ಕಾರ್ಯಕ್ರಮ ಆಗಬಾರದು ಎನ್ನುವುದು ನನ್ನ ಕಳಕಳಿ. 39, 41, 70 ಮತ್ತು 71ನೇ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಆ ಬಗ್ಗೆ ಪಾಲಿಕೆ ಸದಸ್ಯರು ಗಮನ ಹರಿಸಬೇಕು.

ಕೃಷ್ಣಯ್ಯ, ಚಿಕ್ಕಬಾಣವರ: ಎಲ್ಲಾ ರೈಲುಗಳಿಗೆ ಚಿಕ್ಕಬಾಣವರದಲ್ಲಿ ನಿಲುಗಡೆ ನೀಡಬೇಕು.

ಹೇಮಂತ್‌ ಗೌಡ: ಆರೋಗ್ಯ ಕರ್ನಾಟಕ ಯೋಜನೆ ಉತ್ತಮವಾಗಿದ್ದು, ಆ ಬಗ್ಗೆ ಕಾರ್ಮಿಕ ವರ್ಗದವರಿಗೆ ಮಾಹಿತಿ ನೀಡಬೇಕು.

ಮಳೆ ನೀರು ಸಂಗ್ರಹ ಕಡ್ಡಾಯವಾಗಿದ್ದರೂ ಯಾರೂ ಅದನ್ನು ಅಳವಡಿಸಿಕೊಳ್ಳುತ್ತಿಲ್ಲ. ಅದರ ಕಠಿಣ ಜಾರಿಗೆ ಜಲಮಂಡಳಿ ಕ್ರಮಕೈಗೊಳ್ಳಬೇಕು. ಆಗ ನೀರಿನ ಸಮಸ್ಯೆ ಪರಿಹಾರವಾಗುತ್ತದೆ.

‘ಬಿಬಿಎಂಪಿಯಲ್ಲಿ ಗೋಲ್‌ಮಾಲ್‌’

‘ಕಾಲಿಗೆ ಪೋಲಿಯೊ ಆಗಿತ್ತು. ಹಂಗೋ ಹಿಂಗೋ ಹೊಲಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಅಂಗವಿಕಲರಿಗಾಗಿ ಬಿಬಿಎಂಪಿ ನೀಡುವ ವಾಹನವನ್ನು ಪಡೆದು, ಇದ್ದ ಕಾಲನ್ನು ಕಳೆದುಕೊಂಡೆ. ₹72 ಸಾವಿರ ಮುಚ್ಚಳಿಕೆ ಬರೆಸಿಕೊಂಡು ಕಳಪೆ ಗುಣಮಟ್ಟದ ಮಹೀಂದ್ರ ಸ್ಕೂಟಿ ನೀಡಿದ್ದಾರೆ’ ಎಂದು ಶಶಿರಾಜ್‌ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಸದಸ್ಯ ನರಸಿಂಹ ನಾಯಕ, ‘ಎಲ್ಲಾ ವಾರ್ಡ್‌ಗಳಲ್ಲಿಯೂ ಅದೇ ವಾಹನವನ್ನು ನೀಡಿದ್ದೇವೆ. ಇಲ್ಲಿಯವರೆಗೆ ಯಾರಿಂದಲೂ ದೂರು ಬಂದಿಲ್ಲ. ನಿಮ್ಮ ದೂರಿನ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

‘ರಸ್ತೆ ಕಳುವಾಗಿದೆ; ಇನ್ನೂ ಸಿಕ್ಕಿಲ್ಲ’

ದಾಸರಹಳ್ಳಿ ವಾರ್ಡ್‌ನಲ್ಲಿನ ಶಿವದೇವಾಲಯದಿಂದ ಮಲೆಮಹದೇಶ್ವರ ದೇವಸ್ಥಾನದವರೆಗೆ ಪೂರ್ವ ಪಶ್ಚಿಮವಾಗಿದ್ದ ರಸ್ತೆ 15 ವರ್ಷಗಳ ಹಿಂದೆ ಕಳುವಾಗಿದ್ದು, ಇನ್ನೂ ಸಿಕ್ಕಿಲ್ಲ ಎಂದು ಅದೇ ವಾರ್ಡ್‌ ನಿವಾಸಿ ವಿಜಯನಾಥ್‌ ವ್ಯಂಗ್ಯವಾಡಿದರು.

‘ಆ ರಸ್ತೆಯನ್ನು ಒತ್ತುವರಿ ಮಾಡಿರುವವರು ಪ್ರಭಾವಿಗಳಾಗಿದ್ದಾರೆ. ಅವರ ವಿರುದ್ಧ ನಾವು ಕೋರ್ಟ್‌ಗೆ ಹೋಗಿದ್ದೆವು. ಅಲ್ಲಿ ಕೇಸ್‌ ನಮ್ಮ ಪರವಾಗಿಯೇ ಆಗಿದೆ. 5 ವರ್ಷಗಳ ಹಿಂದೆ ಕೋರ್ಟ್‌ ಆದೇಶವನ್ನು ಬಿಬಿಎಂಪಿಗೆ ನೀಡಿದ್ದೇವೆ. ಇನ್ನೂ ಅವರು ಯಾವುದೇ ಕ್ರಮ ಕೈಗೊಳ್ಳಲು ಆಗಿಲ್ಲ’ ಎಂದು ಹೇಳಿದರು.

ಶಾಸಕರ ಭರವಸೆಗಳು

ಮಲ್ಲಸಂದ್ರ, ಹೆಗ್ಗನಹಳ್ಳಿಯಲ್ಲಿನ ಬಿಬಿಎಂಪಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು

ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಚಿಂತನೆ ನಡೆಸಿದ್ದೇನೆ

80 ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ಸೂಚಿಸಿದ್ದೇನೆ

ನನ್ನ ಕ್ಷೇತ್ರದ ಎಲ್ಲಾ ಮೋರಿಗಳನ್ನು ಸಿಮೆಂಟ್‌ನಲ್ಲಿ ನಿರ್ಮಿಸುತ್ತೇನೆ

ಜನರ ಸಮಸ್ಯೆಗಳು

ಮೋಹನ್‌ಕೃಷ್ಣ, ಶೆಟ್ಟಿಹಳ್ಳಿ ವಾರ್ಡ್‌: ಜಲಮಂಡಳಿ ಜಾಗವನ್ನು ಖಾಸಗಿ ಸಂಸ್ಥೆಯವರು ಅತಿಕ್ರಿಮಿಸಿ ರಸ್ತೆ ನಿರ್ಮಿಸಿದ್ದಾರೆ. ಅಯ್ಯಪ್ಪ ದೇವಸ್ಥಾನದಿಂದ ಸಪ್ತಗಿರಿ ಕಾಲೇಜಿನವರೆಗೆ ರಸ್ತೆ ವಿಸ್ತರಣೆ ಮಾಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು.

ಪಾಲಿಕೆ ಸದಸ್ಯ, ಕೆ.ನಾಗಭೂಷಣ್‌: ಜಲಮಂಡಳಿ ಜಾಗ ಒತ್ತುವರಿಯಾಗಿದ್ದರೆ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಪಾಲಿಕೆ ಸದಸ್ಯರು ಸ್ಥಳ ಪರಿಶೀಲನೆಗೆ ಹೋದರೆ ರೋಲ್‌ಕಾಲ್‌ಗೆ ಬಂದಿದ್ದಾರೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ಮಾಡಬೇಕು.

ರಸ್ತೆ ವಿಸ್ತರಣೆ ಬಗ್ಗೆ ಪರಿಶೀಲಿಸುತ್ತೇವೆ. ಸಂಚಾರ ಪೊಲೀಸರು ಅಯ್ಯಪ್ಪ ದೇವಸ್ಥಾನದಿಂದ ಸಪ್ತಗಿರಿ ಕಾಲೇಜಿನವರೆಗೆ ಭಾರಿ ವಾಹನ ಸಂಚಾರ ನಿಷೇಧಿಸಬೇಕು. ಚೊಕ್ಕಸಂದ್ರ– ಎವಿಆರ್‌ ಲೇಔಟ್‌ ಬಳಿ ಸೇತುವೆ ನಿರ್ಮಿಸಲಾಗಿದೆ. ಇಲ್ಲಿನ ರಸ್ತೆ ಅಭಿವೃದ್ಧಿಗೆ ₹2.5 ಕೋಟಿ ಅನುದಾನ ಕಾಯ್ದಿರಿಸಿದ್ದೇವೆ. ಆದರೆ, ಕಾಮಗಾರಿ ಕೈಗೆತ್ತಿಕೊಳ್ಳಲು ರೈಲ್ವೆ ಇಲಾಖೆ ಅನುಮತಿ ನೀಡುತ್ತಿಲ್ಲ.

ಅನುರಾಧಾ, ಹೆಗ್ಗನಹಳ್ಳಿ ವಾರ್ಡ್‌: ತಿಂಗಳಲ್ಲಿ ಐದಾರು ಬಾರಿ ರಸ್ತೆ ಅಗೆಯುತ್ತಾರೆ. ಅದರಿಂದ ಒಮ್ಮೊಮ್ಮೆ ಪೈಪ್‌ ಕಟ್ಟಾಗುತ್ತದೆ, ಮತ್ತೊಮ್ಮೆ ಕೇಬಲ್‌ಗಳು ಕಟ್‌ ಆಗುತ್ತವೆ. ಮೋರಿ ಸ್ಲ್ಯಾಬ್‌ಗಳನ್ನು ಹಾಗೆಯೇ ಬಿಟ್ಟಿರುತ್ತಾರೆ. ನಮ್ಮ ಮನೆಗಳಲ್ಲಿಯೇ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತಿಲ್ಲ

ಬಿಬಿಎಂಪಿ ಎಂಜಿನಿಯರ್‌: ಈ ವಿಚಾರದ ಬಗ್ಗೆ ನನಗೆ ಗೊತ್ತಿರಲಿಲ್ಲ. ಸೋಮವಾರ ಅಲ್ಲಿಗೆ ಬಂದು ಪರಿಶೀಲಿಸುತ್ತೇನೆ

ಲಕ್ಷ್ಮೀಶ, ಚೊಕ್ಕಸಂದ್ರ ವಾರ್ಡ್‌: 8ನೇ ಮೈಲಿ ರಸ್ತೆಯಲ್ಲಿ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಅಲ್ಲದೆ, ಕರ್ಕಶವಾಗಿ ಸದ್ದು ಮಾಡಿಕೊಂಡು ಬೈಕ್‌ ಚಲಾಯಿಸುತ್ತಾರೆ.

ಟ್ರಾಫಿಕ್‌ ಪೊಲೀಸ್‌: ಸೈಲೆನ್ಸರ್‌ನ ಮಫ್ಲರ್‌ ತೆಗೆದು ಎನ್‌ಫೀಲ್ಡ್‌ ಬೈಕ್‌ಗಳನ್ನು ಓಡಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಕಳೆದು ತಿಂಗಳು ಅದಕ್ಕಾಗಿಯೇ ಕಾರ್ಯಾಚರಣೆ ನಡೆಸಿ 40 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೆ, ಶೋ ರೂಮ್‌ಗಳಿಗೂ ಎಚ್ಚರಿಕೆ ನೀಡಿದ್ದೇವೆ.

ಚನ್ನೇಗೌಡ, ಬಾಗಲಕುಂಟೆ ವಾರ್ಡ್‌: ಬೃಂದಾವನ ಬಡಾವಣೆಯಲ್ಲಿ ಚರಂಡಿ, ರಸ್ತೆ ವ್ಯವಸ್ಥಿತವಾಗಿಲ್ಲ. ಮೋರಿಯಲ್ಲಿ ಕಸ ಕಟ್ಟಿಕೊಂಡು ಸ್ವಲ್ಪ ಮಳೆಯಾದರೂ ನೀರು ತುಂಬಿ ಹರಿಯುತ್ತದೆ. ಏನಾದರೂ ಅನಾಹುತ ನಡೆದ ನಂತರವೇ ನೀವು ಎಚ್ಚೆತ್ತುಕೊಳ್ಳುತ್ತೀರಿ ಅನ್ನಿಸುತ್ತದೆ.

ಪಾಲಿಕೆ ಸದಸ್ಯ ನರಸಿಂಹ ನಾಯಕ: ಆ ಬಡಾವಣೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದ್ಯತೆ ಮೇರೆಗೆ ಕೆಲಸಗಳನ್ನು ಮಾಡುತ್ತಿದ್ದೇವೆ. ಎಂಜಿನಿಯರ್‌ಗಳ ಸಮೇತ ನಾಳೆಯೇ ಬಂದು ಮೋರಿ ಪರಿಶೀಲಿಸುತ್ತೇನೆ.

ರೂಪಶ್ರೀ, ಬಾಗಲಕುಂಟೆ ವಾರ್ಡ್‌: ಮೀನಾಕ್ಷಿ ಬಡಾವಣೆಯಲ್ಲಿನ ಸಾಕಷ್ಟು ಮನೆಗಳಿಗೆ ಖಾತೆಯ ಸಂಖ್ಯೆಗಳು ಸರಿಯಿಲ್ಲ. ನಾವು ತೆರಿಗೆ ಕಟ್ಟುವ ಸಂಖ್ಯೆ ಒಂದಾದರೆ, ಅದಲ್ಲಿ ನಮೂದಿಸಿಕೊಳ್ಳುವುದೇ ಮತ್ತೊಂದು. ಈ ಬಗ್ಗೆ ಸ್ವಲ್ಪ ಗಮನಹರಿಸಿ. ಜೊತೆಗೆ ನನ್ನ ತಾಯಿ ಸ್ಕಿಜೋಫ್ರೇನಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಪಿಂಚಣಿ ಹಣ ಬರುವಂತೆ ದಯವಿಟ್ಟು ವ್ಯವಸ್ಥೆ ಮಾಡಿಕೊಡಿ.

ಪಾಲಿಕೆ ಸದಸ್ಯ ನರಸಿಂಹ ನಾಯಕ: ಬಿಬಿಎಂಪಿಯಲ್ಲಿ ಆ ರೀತಿಯ ಕಾಯಿಲೆ ಇರುವವರಿಗೆ ಹಣ ಕೊಡಲಾಗುತ್ತದೆ. ಸಂಬಂಧ ಪಟ್ಟ ದಾಖಲೆಯನ್ನು ನೀಡಿ ಅದರಲ್ಲಿ ₹1 ಲಕ್ಷವನ್ನು ಕೊಡಿಸುತ್ತೇನೆ.

ಆನಂದ ಚೌರಾಸಿಯ, ನೇವಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ: ನಮ್ಮ ಬಡಾವಣೆಗೆ ಸರಿಯಾದ ಸಂಪರ್ಕ ರಸ್ತೆಯೇ ಇಲ್ಲದಾಗಿದೆ. ಇದ್ದ ಒಂದು ರಸ್ತೆಯನ್ನು ವಾಯುದಳದವರು ಬಂದ್‌ ಮಾಡಿದ್ದಾರೆ. ಪರ್ಯಾಯ ರಸ್ತೆಯೂ ಸಮರ್ಪಕವಾಗಿಲ್ಲ. ದಯವಿಟ್ಟು ಒಂದು ರಸ್ತೆಯನ್ನು ನಿರ್ಮಿಸಿಕೊಡಿ.

ಪಾಲಿಕೆ ಸದಸ್ಯ ನರಸಿಂಹ ನಾಯಕ: ನಿಮ್ಮ ಬಡಾವಣೆಯಲ್ಲಿ ಸುಮಾರು 10 ಮನೆಗಳಿದ್ದು, ಸಮಸ್ಯೆಯ ಬಗ್ಗೆ ಅರಿವಿದೆ. ಅದಕ್ಕೆ ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇನೆ. ಖಂಡಿತವಾಗಿಯೂ ಅಲ್ಲಿ ರಸ್ತೆ ನಿರ್ಮಿಸಿಯೇ ನಿರ್ಮಿಸುತ್ತೇನೆ.

ರಾಜೀವ್‌, ಚಿಕ್ಕಬಾಣಾವರ: ಮಹಾವೀರ್‌ ಡಿಸೈನರ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನಾವು ವಾಸವಿದ್ದೇವೆ. ಮನೆ ಖರೀದಿಸಿದಾಗ ಅಲ್ಲಿ ರಸ್ತೆಯಿತ್ತು. ಆದರೆ ಅಲ್ಲೇ ಪಕ್ಕದಲ್ಲಿ ಹಾದು ರೈಲು ಹಳಿ ಹಾದುಹೋಗುತ್ತದೆ. ಅಲ್ಲಿ ಜೋಡಿ ಹಳಿ ಮಾಡಿದ ನಂತರ ಅದರಿಂದ 100 ಅಡಿವರೆಗೂ ರೈಲ್ವೆ ಇಲಾಖೆಯ ಜಾಗ ಎಂದು ಅವರು ವಾದಿಸುತ್ತಿದ್ದಾರೆ. ಇದರಿಂದ ನಮಗೆ ರಸ್ತೆಯೇ ಇಲ್ಲದಂತಾಗಿದೆ. 4 ವರ್ಷದಿಂದ ಇದಕ್ಕೆ ಮನವಿ ಮಾಡುತ್ತಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಪಾಲಿಕೆ ಸದಸ್ಯ ಕೆ.ನಾಗಭೂಷಣ್‌: ರೈಲ್ವೆ ಇಲಾಖೆಯ ಜೊತೆ ನಾವು ಮಾತುಕತೆ ನಡೆಸಿದ್ದೇವೆ. ಏನೂ ಉಪಯೋಗವಾಗಿಲ್ಲ. ನಿಮಗೊಂದು ರಸ್ತೆ ನಿರ್ಮಿಸಿಕೊಡುವ ಜವಾಬ್ದಾರಿ ನನ್ನದು.

 ರಾಮಚಂದ್ರಯ್ಯ, ಬಾಗಲಕುಂಟೆ: ಕಲಿಕಲ್ಲು ಬಡಾವಣೆಯಲ್ಲಿ ನಾನು ಸುಮಾರು 30 ವರ್ಷದಿಂದ ವಾಸ ಮಾಡುತ್ತಿದ್ದೇನೆ. ನಮ್ಮ ವಾಸಕ್ಕೆ ಹಕ್ಕುಪತ್ರ ನೀಡಿ ಎಂದು ಬಿಬಿಎಂಪಿಗೆ ಅಲೆದಾಡುವುದೇ ಆಗಿದೆ. ಕೊಳಗೇರಿ ಮಂಡಳಿ ಆ ಜಾಗವನ್ನು ಬಿಬಿಎಂಪಿಗೆ ವರ್ಗಾವಣೆ ಮಾಡಿದೆ. ದಯವಿಟ್ಟು ಹಕ್ಕುಪತ್ರ ನೀಡಿ.

ಶಾಸಕ: ಆ ಜಾಗದಲ್ಲಿ ವಾಸವಿರುವವರು ಹೆದರುವ ಅಗತ್ಯವಿಲ್ಲ. ಬಹಳ ವರ್ಷಗಳಿಂದ ಅಲ್ಲಿ ವಾಸವಿದ್ದೀರಿ ಅದು ನಿಮ್ಮದೇ ಜಾಗ. 1,800 ಮಂದಿಗೆ ಹಕ್ಕಪತ್ರ ನೀಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ. 

ಸುಧಾರಾಣಿ, ಕಿರ್ಲೋಸ್ಕರ್‌ ಬಡಾವಣೆ: ಕಸ ವಿಲೇವಾರಿ ಸಮಸ್ಯೆ ತೀವ್ರವಾಗಿದೆ. ನಮ್ಮ ಬಡಾವಣೆಗೊಂದು ಸಮುದಾಯಭವನ ಬೇಕು

ನರಸಿಂಹ ನಾಯಕ: ಕಸ ಸಾಗಣೆ ವಾಹನಗಳಿಗೆ ಜಿಪಿಎಸ್‌ ಅಳವಡಿಸುವ ಮೂಲಕ ಅವುಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಜಾರಿಯಾಗಿದೆ. ಕಸ ಸಾಗಣೆಗೆ ಇನ್ನಷ್ಟು ವಾಹನಗಳ ಅಗತ್ಯವಿದೆ. ಇದನ್ನು ಶೀಘ್ರವೇ ಬಗೆಹರಿಸುತ್ತೇವೆ. ಸಮುದಾಯಭವನ ಒದಗಿಸಲು ಪ್ರಯತ್ನಿಸುತ್ತೇವೆ

 ರಂಗನಾಥ್‌, ವಿಶ್ವೇಶ್ವರಯ್ಯ ಬಡಾವಣೆ: ರಸ್ತೆಗಳು ಹದಗೆಟ್ಟಿವೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಹಿರಿಯ ನಾಗರಿಕರಿಗೆ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿ

ನರಸಿಂಹ ನಾಯಕ: ಪಾಲಿಕೆ ಸದಸ್ಯರಿಗೆ ವರ್ಷಕ್ಕೆ ₹ 5 ಕೋಟಿ ಅನುದಾನ ಮಾತ್ರ ಲಭ್ಯ. ಹಾಗಾಗಿ ರಸ್ತೆ ಅಭಿವೃದ್ಧಿ ಕೆಲಸವನ್ನು ಹಂತ ಹಂತವಾಗಿ ಕೈಗೊಳ್ಳುತ್ತೇವೆ. ಗ್ರಂಥಾಲಯ ಆರಂಭಿಸಲು ಶೀಘ್ರವೇ ಕ್ರಮಕೈಗೊಳ್ಳುತ್ತೇನೆ.

 ಗೋವಿಂದ ಶಾಸ್ತ್ರಿ: ಶಾರದಾ ವಿದ್ಯಾಲಯ ಸಮೀಪದ ಮೋರಿಯನ್ನು ಕೆಡವಿ ಎರಡು ವರ್ಷಗಳಾಗಿವೆ. ಇನ್ನೂ ದುರಸ್ತಿ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ.

ಕಾರ್ಯಪಾಲಕ ಎಂಜಿನಿಯರ್‌, ಶಿವಕುಮಾರ್‌: ಒಂದು ತಿಂಗಳ ಒಳಗೆ ಮೋರಿಯನ್ನು ದುರಸ್ತಿಪಡಿಸುತ್ತೇವೆ.

ಸಂಪರ್ಕ ಸಂಖ್ಯೆಗಳು

ಪಾಲಿಕೆ ಸದಸ್ಯರು

ಕೆ.ನಾಗಭೂಷಣ್‌ (ಶೆಟ್ಟಿಹಳ್ಳಿ): 9845019093

ಎನ್‌.ಲೋಕೇಶ್‌ (ಮಲ್ಲಸಂದ್ರ): 9886935566

ಕೆ.ನರಸಿಂಹ ನಾಯಕ (ಬಾಗಲಕುಂಟೆ): 9901234578

ಉಮಾದೇವಿ ನಾಗರಾಜ್‌ (ಟಿ.ದಾಸರಹಳ್ಳಿ): 9611921030

ಸರ್ವಮಂಗಳ (ಚೊಕ್ಕಸಂದ್ರ): 9980049681

ಲಲಿತಾ (ಪೀಣ್ಯ ದಾಸರಹಳ್ಳಿ): 9900118099

ಜಿ.ಪದ್ಮಾವತಿ (ರಾಜಗೋಪಾಲ ನಗರ): 9845535908

ಕೆ.ಭಾಗ್ಯಮ್ಮ (ಹೆಗ್ಗನಹಳ್ಳಿ): 9343731898

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು