ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌ ಹಂಚಿಕೆ: ಇನ್ನೂ ಮೂವರಿಗೆ ಎಸ್‌ಐಟಿ ಶೋಧ

Published 13 ಮೇ 2024, 15:24 IST
Last Updated 13 ಮೇ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿದ್ದಾರೆ ಎಂಬ ಆರೋಪದ ಮೇಲೆ ಹಾಸನದಲ್ಲಿ ಇಬ್ಬರನ್ನು ಬಂಧಿಸಿರುವ ಎಸ್‌ಐಟಿ, ಇದೇ ಪ್ರಕರಣದಲ್ಲಿ ಮತ್ತೆ ಮೂವರಿಗೆ ಶೋಧ ಮುಂದುವರಿಸಿದೆ.

ಹಾಸನದ ಚೇತನ್‌ ಹಾಗೂ ಲಿಖಿತ್‌ ಎಂಬುವರನ್ನು ಭಾನುವಾರ ಬಂಧಿಸಲಾಗಿತ್ತು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್‌ ಅವರಿಗೆ ಸೇರಿದ್ದು ಎನ್ನಲಾದ ಪೆನ್‌ಡ್ರೈವ್‌ ಅನ್ನು ಇನ್ನೂ ಮೂವರು ಹಂಚಿಕೆ ಮಾಡಿದ್ದಾರೆ ಎಂಬ ಮಾಹಿತಿ ಎಸ್‌ಐಟಿಗೆ ಲಭಿಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಮೂವರೂ ತಲೆಮರೆಸಿಕೊಂಡಿದ್ದಾರೆ.

‘ಅರಕಲಗೂಡು ಶಾಸಕ ಎ.ಮಂಜು ಅವರಿಗೆ ಪೆನ್‌ಡ್ರೈವ್‌ ನೀಡಿದ್ದೆ’ ಎಂದು ನವೀನ್‌ಗೌಡ ಎಂಬುವರು ಹೇಳಿಕೆ ನೀಡಿದ್ದು, ಆತನ ವಿರುದ್ಧ ಮಂಜು ಅವರು ಎಸ್‌ಐಟಿಗೆ ದೂರು ನೀಡಿದ್ದಾರೆ. ಆ ದೂರನ್ನೂ ಸ್ವೀಕರಿಸಿರುವ ಎಸ್‌ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

‘ಏಪ್ರಿಲ್‌ 20ರಂದು ರಸ್ತೆಯಲ್ಲಿ ಸಿಕ್ಕಿದ ಪೆನ್‌ಡ್ರೈವ್‌ ಅನ್ನು ಎ.ಮಂಜು ಅವರಿಗೆ ಏ.21ರಂದು ಅರಕಲಗೂಡಿನ ಮಾರುತಿ ಕಲ್ಯಾಣ ಮಂಟಪದ ಬಳಿ ನೀಡಿದ್ದೆ’ ಎಂದು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ನವೀನ್‌ ಬರೆದುಕೊಂಡಿದ್ದರು. ‘ನವೀನ್‌ಗೌಡ ಯಾರೆಂದು ಗೊತ್ತಿಲ್ಲ. ಮೊದಲು ನವೀನ್‌ಗೌಡನನ್ನೇ ಬಂಧಿಸಬೇಕು. ಆಗ ಪೆನ್‌ಡ್ರೈವ್‌ ಇತಿಹಾಸ ತಿಳಿಯಲಿದೆ’ ಎಂದು ಮಂಜು ಹೇಳಿದ್ದರು.

ದೋಷಾರೋಪಪಟ್ಟಿ ಸಲ್ಲಿಕೆಗೆ ತಯಾರಿ:

ಮತ್ತೊಂದೆಡೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲು ತಯಾರಿ ನಡೆಸುತ್ತಿದೆ. ಹಾಸನದಲ್ಲೂ ಒಂದು ತಂಡ ಬೀಡುಬಿಟ್ಟಿದ್ದು, ಮಾಹಿತಿ ಕಲೆಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್‌ ರೇವಣ್ಣ ಅವರು ಇನ್ನೂ ವಿದೇಶದಿಂದ ವಾಪಸ್ ಆಗಿಲ್ಲ. ಅವರು ಎರಡು ಬಾರಿ ದಿಢೀರ್ ಆಗಿ ವಿಮಾನದ ಟಿಕೆಟ್‌ ಅನ್ನು ರದ್ದುಪಡಿಸಿರುವ ಮಾಹಿತಿ ಎಸ್‌ಐಟಿಗೆ ಸಿಕ್ಕಿದೆ. ಅವರನ್ನು ರಾಜ್ಯಕ್ಕೆ ಕರೆತರುವ ತಯಾರಿ ನಡೆಸುತ್ತಿದೆ.

‘ತನಿಖೆ ಪೂರ್ಣಗೊಳಿಸಿ, ಸಾಕ್ಷ್ಯಾಧಾರ ಸಹಿತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುತ್ತೇವೆ. ನಂತರ, ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಲಾಗುವುದು. ಸಿಬಿಐನ ಇಂಟರ್‌ಪೋಲ್‌ನ ಅನುಮತಿ ಕೇಳಲಾಗಿದೆ. ಪ್ರಜ್ವಲ್‌ ಅವರ ರಾಜತಾಂತ್ರಿಕ ಹಾಗೂ ಸಾಮಾನ್ಯ ಪಾಸ್‌ಪೋರ್ಟ್‌ ರದ್ದುಗೊಂಡರೆ ಅವರನ್ನು ರಾಜ್ಯ ಕರೆ ತರುವುದು ಸುಲಭವಾಗಲಿದೆ’ ಎಂದು ಮೂಲಗಳು ಹೇಳಿವೆ.

ಪ್ರಜ್ವಲ್‌ ರಾಜ್ಯಕ್ಕೆ ಬರುವ ನಿರೀಕ್ಷೆ?: ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಹೊಳೆನರಸಿಪುರದ ಶಾಸಕ, ಪ್ರಜ್ವಲ್‌ ಅವರ ತಂದೆ ಎಚ್‌.ಡಿ.ರೇವಣ್ಣ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ಈ ಬೆನ್ನಲ್ಲೇ ಪ್ರಜ್ವಲ್‌ ಅವರೇ ರಾಜ್ಯಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಿಗಾ ಇಡಲಾಗಿದೆ. ರಾಜ್ಯಕ್ಕೆ ಬಂದರೆ ತಕ್ಷಣವೇ ವಶಕ್ಕೆ ಪಡೆಯಲಾಗುವುದು ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT