ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಚಕರು ಮೃತಪಟ್ಟರೆ ₹ 2 ಲಕ್ಷ ಪರಿಹಾರ: ರಾಮಲಿಂಗಾರೆಡ್ಡಿ

Published 13 ಅಕ್ಟೋಬರ್ 2023, 15:56 IST
Last Updated 13 ಅಕ್ಟೋಬರ್ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರು ಮೃತಪಟ್ಟರೆ ಅವರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆಯನ್ನು ಶುಕ್ರವಾರ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲಿ ಅರ್ಚಕರು ಮತ್ತು ನೌಕರರಿಗೆ ಆರೋಗ್ಯ ಕಾರ್ಡ್‌ ವಿತರಿಸಲಾಗುವುದು. ನೋಂದಣಿ ಶುಲ್ಕವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು. ವರ್ಷಕ್ಕೆ 1200 ಅರ್ಚಕ, ನೌಕರರನ್ನು ಕಾಶಿ, ಗಯಾ ಯಾತ್ರೆಗೆ ಉಚಿತವಾಗಿ ಕಳುಹಿಸಲಾಗುವುದು ಎಂದರು.

ಶೈಕ್ಷಣಿಕ ಪ್ರೋತ್ಸಾಹ ಧನ: ಅರ್ಚಕರು, ನೌಕರರ ಮಕ್ಕಳಿಗೆ ಪಿಯುಸಿ, ಐಟಿಐ, ಜೆಒಸಿ, ಡಿಪ್ಲೊಮಾ ಮಾಡುವವರಿಗೆ ₹ 5 ಸಾವಿರ, ಪದವಿಗೆ ₹ 7 ಸಾವಿರ, ಸ್ನಾತಕೋತ್ತರ ಪದವಿಗೆ ₹ 15 ಸಾವಿರ, ಆಯುರ್ವೇದ, ಹೋಮಿಯೋಪತಿ ಪದವಿ, ತಾಂತ್ರಿಕ ಶಿಕ್ಷಣಕ್ಕೆ ₹ 25 ಸಾವಿರ, ವೈದ್ಯಕೀಯ, ದಂತ ಶಿಕ್ಷಣಕ್ಕೆ ₹ 50 ಸಾವಿರ ನೀಡಲಾಗುವುದು. ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಒಂದು ಬಾರಿ ₹ 1 ಲಕ್ಷ ನೀಡಲಾಗುವುದು ಎಂದು ವಿವರಿಸಿದರು.

ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು. ತಸ್ತೀಕ್‌ ನೇರ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗುವುದು. ದೇವಸ್ಥಾನಗಳಲ್ಲಿ ಮೊಬೈಲ್‌ ಫೋನ್‌ ಬಳಕೆ ನಿಷೇಧಿಸಲಾಗಿದ್ದು, ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ಹಲವು ಕ್ಷೇತ್ರಗಳ ಮುಖಂಡರುಗಳನ್ನು ಒಳಗೊಂಡ ‘ವಿಷನ್‌ ಗ್ರೂಪ್‌’ ರಚಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಪುರಾತನ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ರಚಿಸಿದ್ದ ಆರ್ಕಿಟೆಕ್ಚರಲ್ ಸಮಿತಿ ನಿಷ್ಕ್ರಿಯವಾಗಿದೆ. ಹೊಸ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯಗಳ ಮಾಹಿತಿಗಳನ್ನು ಭಕ್ತರಿಗೆ ಒದಗಿಸಲು ಕಾಲ್‌ ಸೆಂಟರ್‌ ತೆರೆಯಲಾಗುವುದು ಎಂದರು.

ಯಾತ್ರೆ ಸಹಾಯಧನ ಹೆಚ್ಚಳ

ಕಾಶಿ ಯಾತ್ರೆಯಲ್ಲಿ ಗಯಾ ಕ್ಷೇತ್ರವನ್ನು ಸೇರ್ಪಡೆಗೊಳಿಸಲಾಗಿದೆ. ಯಾತ್ರಿಗಳಿಗೆ ಇದ್ದ ₹5 ಸಾವಿರ ಸಹಾಯ ಧನವನ್ನು ₹ 7500ಕ್ಕೆ ಹೆಚ್ಚಿಸಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ಕಾಶಿ ಯಾತ್ರೆ ಚಾರ್‌ದಾಮ್‌ ಯಾತ್ರೆ ಮತ್ತು ಮಾನಸ ಸರೋವರ ಯಾತ್ರೆಗೆ ತೆರಳುವ ಕರ್ನಾಟಕದ ಯಾತ್ರಾತ್ರಿಗಳಿಗೆ ಹೊಸದಾಗಿ ಮೊಬೈಲ್‌ ಆಪ್‌ ಸಿದ್ದಗೊಳಿಸಲಾಗಿದೆ. ಯಾತ್ರಿಗಳು ಫೋಟೊ ಅಪ್‌ಲೋಡ್‌ ಮಾಡಿದರೆ ಅವರ ಖಾತೆಗೆ ಕ್ರಮವಾಗಿ ಕಾಶಿ–ಗಯಾ ಯಾತ್ರೆಗೆ ₹ 7500/- ಚಾರ್‌ದಾಮ್‌ ಯಾತ್ರೆಗೆ ₹  20 ಸಾವಿರ ಹಾಗೂ ಮಾನಸ ಸರೋವರ ಯಾತ್ರೆಗೆ ₹ 30 ಸಾವಿರ ಡಿಬಿಟಿ ಮೂಲಕ ಸಂದಾಯ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT