ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ, ದ್ವಿತೀಯ ಹಂತದ ರಾಜಕಾಲುವೆಗಳು ಕಣ್ಮರೆ

ಮಳೆ ನೀರು ನಿರ್ವಹಣೆ ಅನಾದರ–ಸಿಎಜಿ ವರದಿ ಕಳವಳ
Last Updated 15 ಸೆಪ್ಟೆಂಬರ್ 2021, 20:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಳೆ ನೀರಿನ ನಿರ್ವಹಣೆ ಬಗ್ಗೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಅನಾದರ ತೋರಿಸಿರುವುದರ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರ (ಸಿಎಜಿ) ವರದಿ ತೀವ್ರ ಕಳವಳ ವ್ಯಕ್ತಪಡಿಸಿದೆ.

1900ನೇ ಇಸವಿಯ ಪಹಣಿ ನಕ್ಷೆಗಳಿಗೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯ ಕೋರಮಂಗಲ ಕಣಿವೆ ಪ್ರದೇಶದ ಜಲಕಾಯಗಳ ಸಂಖ್ಯೆ 41ರಿಂದ 8ಕ್ಕೆ ಇಳಿದಿದೆ. ಈ ಕಣಿವೆಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳ ಉದ್ದ 113.24 ಕಿ.ಮೀ.ಯಿಂದ 62.84 ಕಿ.ಮೀಗೆ ಇಳಿದಿದೆ. ವೃಷಭಾವತಿ ಕಣಿವೆಯ ಜಲಕಾಯಗಳ ಸಂಖ್ಯೆ 51ರಿಂದ 13ಕ್ಕೆ ಇಳಿದಿದೆ. ಈ ಕಣಿವೆಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳ ಉದ್ದ 226.29 ಕಿ.ಮೀ.ಯಿಂದ 111.72 ಕಿ.ಮೀ.ಗೆ ಇಳಿದಿದೆ.

ಕರ್ನಾಟಕವು 2002ರಲ್ಲಿ ನಗರ ಕುಡಿಯುವ ನೀರು ಮತ್ತು ನೈರ್ಮಲ್ಯ ನೀತಿಯನ್ನು ಜಾರಿಗೆ ತಂದಿದೆ. 2011ರಲ್ಲಿ ಅಂತರ್ಜಲ (ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣ) ಕಾಯ್ದೆಯನ್ನು ಜಾರಿಗೊಳಿಸಿದೆ. ಇವೆರಡರಲ್ಲೂ ಮಳೆ ನೀರಿನ ನಿರ್ವಹಣೆಯ ಅಗತ್ಯವನ್ನು ಕಡೆಗಣಿಸಿರುವುದನ್ನು ವರದಿ ಬೊಟ್ಟು ಮಾಡಿ ತೋರಿಸಿದೆ. 2010ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ನಗರಗಳ ಪ್ರವಾಹವನ್ನು ನದಿ ಪ್ರವಾಹಕ್ಕಿಂತ ಭಿನ್ನವಾದ ವಿಪತ್ತು ಎಂದು ಗುರುತಿಸಿ ಅದರ ನಿರ್ವಹಣೆಗೆ ಸಾಂಸ್ಥಿಕ ಚೌಕಟ್ಟು ರೂಪಿಸಲು ಸೂಚಿಸಿತ್ತು. ಚರಂಡಿಗಳ ವಿನ್ಯಾಸ ಹಾಗೂ ವಿಪತ್ತು ನಿರ್ವಹಣೆಯ ವಿಧಾನಗಳನ್ನು ನಿಗದಿಪಡಿಸಿ ಮಾರ್ಗಸೂಚಿ ರೂಪಿಸಿತ್ತು. ಅವುಗಳನ್ನು ಪಾಲಿಸುವಲ್ಲೂ ಸರ್ಕಾರ ಹಾಗೂ ಬಿಬಿಎಂಪಿ ವಿಫಲವಾಗಿದೆ ಎಂದು ವರದಿಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಜಲಸಂಪನ್ಮೂಲ ಇಲಾಖೆ ರೂಪಿಸಿದ ಜಲನೀತಿಯಲ್ಲೂ ಮಳೆ ನೀರಿನ ನಿರ್ವಹಣೆ ನಿಯಂತ್ರಣಕ್ಕೆ ಕ್ರಮಬದ್ಧ ಚೌಕಟ್ಟಿನ ಕೊರತೆ ಇರುವುದನ್ನು ವರದಿ ಎತ್ತಿ ತೋರಿಸಿದೆ.

ಕೇಂದ್ರವು 2012ರಲ್ಲಿ ಜಾರಿಗೆ ತಂದ ಜಲನೀತಿಯು ನದಿ, ನದಿ ಪಾತ್ರ, ಕೆರೆ, ಅದಕ್ಕೆ ಸಂಬಂಧಿಸಿದ ಜೌಗು ಪ್ರದೇಶ, ಪ್ರವಾಹ ಪ್ರದೇಶಗಳು ಹಾಗೂ ಪರಿಸರ ಉದ್ದೇಶಕ್ಕೆ ಕಾಯ್ದಿಟ್ಟ ಪ್ರದೇಶಗಳ ಸಂರಕ್ಷಣೆಗೆ ಒತ್ತು ನೀಡಿದೆ. ಅದಕ್ಕೆ ಪೂರಕವಾಗಿ ರಾಜ್ಯದ ಜಲನೀತಿಯನ್ನು ಪರಿಷ್ಕರಿಸಿಲ್ಲ. ಹೆಚ್ಚುತ್ತಿರುವ ಕೊರತೆ ಹಾಗೂ ಬೇಡಿಕೆಗಳನ್ನು ಪರಿಗಣಿಸಿ ನಗರದಲ್ಲಿ ನೀರಿನ ಹರಿವನ್ನು ಜಲಸಂಪನ್ಮೂಲ ಎಂದು ಗುರುತಿಸುವ ನಿಟ್ಟಿನಲ್ಲಿ ರಾಜ್ಯದ ಜಲನೀತಿಯನ್ನು ಮರುಪರಿಶೀಲಿಸುವ ಅಗತ್ಯವನ್ನು ವರದಿಯು ಪ್ರತಿಪಾದಿಸಿದೆ.

‘ಪ್ರಾಧಿಕಾರಗಳ ನಡುವೆ ಸಮನ್ವಯ ಇಲ್ಲ’

ನಗರದಲ್ಲಿ ಚರಂಡಿ ನಿರ್ಮಾಣ, ನಿರ್ವಹಣೆ, ಶುಚಿಗೊಳಿಸುವಿಕೆ ಹಾಗೂ ಕಸ ನಿರ್ವಹಣೆ ಬಿಬಿಎಂಪಿಯ ಹೊಣೆ. ಮಹಾನಗರ ಪ್ರದೇಶಕ್ಕೆ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವುದು ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಬಿಡಿಎ ಜವಾಬ್ದಾರಿ. ನೀರು ಪೂರೈಕೆ ಮತ್ತು ಕೊಳಚೆ ನೀರಿನ ವಿಲೇವಾರಿ ಜಲಮಂಡಳಿಯ ಹೊಣೆ. ಪರಸ್ಪರ ಸಂಬಂಧವಿರುವ ಈ ಜವಾಬ್ದಾರಿಗಳನ್ನು ನಿಭಾಯಿಸಲು ಅನೇಕ ಪ್ರಾಧಿಕಾರಗಳನ್ನು ಹೊಂದಿರುವುದು ಅವುಗಳ ಸಮನ್ವಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿರುವುದನ್ನು ಸಿಎಜಿ ವರದಿಯಲ್ಲಿ ಗುರುತಿಸಲಾಗಿದೆ.

‘ನಾಗರಿಕರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ, ಬಿಡಿಎ, ಜಲಮಂಡಳಿಯಂತಹ ಪಾಲುದಾರ ಸಂಸ್ಥೆಗಳ ಸಮನ್ವಯ ಸಮಿತಿಯನ್ನು ರಾಜ್ಯ ಸರ್ಕಾರ 2015ರ ಜೂನ್‌ನಲ್ಲಿ ರಚಿಸಿದೆ. ಆದರೆ, ಈ ಸಮಿತಿ ಸಭೆಗಳು 2018ರ ಆಗಸ್ಟ್‌ ಬಳಿಕ ಮಾತ್ರ ನಿಯಮಿತವಾಗಿ ನಡೆಯುತ್ತಿದೆ. ರಾಜಕಾಲುವೆ ಒತ್ತುವರಿ ಹಾಗೂ ಕೊಳಚೆ ನೀರು ಮಿಶ್ರವಾಗುವಿಕೆ ಕುರಿತು ಸಮಿತಿಯ ಸಭೆಗಳಲ್ಲಿ ಪದೇ ಪದೇ ಚರ್ಚೆಯಾಗುತ್ತಿವೆ. ಒತ್ತುವರಿ ತೆರವು ಹಾಗೂ ರಾಜಕಾಲುವೆಗಳಿಗೆ ಕೊಳಚೆ ನೀರು ಹರಿಯುವಿಕೆಯನ್ನು ತಡೆಯಲು ಸಮಿತಿ ಮತ್ತೆ ಮತ್ತೆ ಸೂಚನೆ ನೀಡಿದೆ. ಆ ಬಳಿಕವೂ ಪರಿಸ್ಥಿತಿ ಸುಧಾರಿಸಿಲ್ಲ. ಪ್ರಾಧಿಕಾರಗಳ ನಡುವೆ ಸಮನ್ವಯವೇ ಇಲ್ಲ’ ಎಂದು ಸಿಎಜಿ ವರದಿ ಹೇಳಿದೆ.

ರಾಜಕಾಲುವೆ ಕಾಂಕ್ರಿಟೀಕರಣದಿಂದ ಪ್ರವಾಹ ಹೆಚ್ಚಳ

ರಾಜಕಾಲುವೆಗಳ ತಳ ಭಾಗವನ್ನು ಕಾಂಕ್ರಿಟೀಕರಣ ಮಾಡಿರುವುದು ಪದೇ ಪದೇ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿಸಿದೆ ಎಂಬ ಅಂಶವನ್ನು ಸಿಎಜಿ ವರದಿ ಬೊಟ್ಟು ಮಾಡಿದೆ.

ರಾಜಕಾಲುವೆಗಳ ನೈಸರ್ಗಿಕ ಮಣ್ಣಿನ ತಳವು ನೀರು ಹರಿವಿನ ವೇಗವನ್ನು ಕಡಿಮೆ ಮಾಡುತ್ತದೆ. ಅಂತರ್ಜಲ ಮರುಪೂರಣಕ್ಕೂ ಕಾರಣವಾಗುತ್ತದೆ.ರಾಜಕಾಲುವೆಗಳಲ್ಲಿ ಮಳೆ ನೀರಿನ ಬದಲು ಕೊಳಚೆ ನೀರೇ ಜಾಸ್ತಿ ಹರಿಯುತ್ತಿರುವುದರಿಂದ ಅವುಗಳ ಮೇಲಿನ ಒತ್ತಡ ಹೆಚ್ಚುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಕಟ್ಟಡಗಳ ಅವಶೇಷವನ್ನೂ ರಾಜಕಾಲುವೆಗಳಲ್ಲಿ ಸುರಿಯಲಾಗುತ್ತಿದ್ದು, ಇದರಿಂದ ಚರಂಡಿಗಳಲ್ಲಿ ನೀರು ಹರಿಯುವಿಕೆ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ತಳವನ್ನು ಕಾಂಕ್ರೀಟೀಕರಣ ಮಾಡಲಾಯಿತು’ ಎಂಬ ಸರ್ಕಾರದ ವಾದವನ್ನು ಸಿಎಜಿ ಒಪ್ಪಿಲ್ಲ.

ಕೋರಮಂಗಲ ಕಣಿವೆಯಲ್ಲಿ ಹಸಿರು ಹೊದಿಕೆ ಶೇ 5ರಷ್ಟು, ಖಾಲಿ ಪ್ರದೇಶವು ಶೇ 21ರಷ್ಟು ಕಡಿಮೆ ಆಗಿದೆ. ವೃಷಭಾವತಿ ಕಣಿವೆಯಲ್ಲಿ ಹಸಿರು ಹೊದಿಕೆ ಶೇ 6ರಷ್ಟು ಹೆಚ್ಚಳವಾಗಿದ್ದರೆ, ಖಾಲಿ ಪ್ರದೇಶವು ಶೇ 45ರಷ್ಟು ಕಡಿಮೆ ಆಗಿದೆ. ಹಸಿರು ಹೊದಿಕೆ ಮತ್ತು ಖಾಲಿ ಪ್ರದೇಶ ಇಳಿಕೆ ಆಗಿರುವುದು ಅಂತರ್ಜಲದ ನೈಸರ್ಗಿಕ ಮರುಪೂರಣದ ಮೇಲೆ ಪರಿಣಾಮ ಬೀರುತ್ತದೆ. ಅಭೇದ್ಯ ಪದರ ಹಾಗೂ ಕಟ್ಟಡ ನಿರ್ಮಿತ ಪ್ರದೇಶ ಹೆಚ್ಚಳವಾಗಿರುವುದು ಪ್ರವಾಹ ಉಂಟಾಗುವುದಕ್ಕೆ ಕಾರಣವಾಗುತ್ತಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT