ಪೀಣ್ಯ ದಾಸರಹಳ್ಳಿ: ‘ಚೊಕ್ಕಸಂದ್ರ ಕೆರೆಗೆ ಕಲುಷಿತ ನೀರು ಹರಿಸಬಾರದು’ ಎಂದು ಶಾಸಕ ಎಸ್. ಮುನಿರಾಜು ಅಧಿಕಾರಿಗಳಿಗೆ ಸೂಚಿಸಿದರು.
ಕೆರೆ ಪರಿಶೀಲನೆ ಹಾಗೂ ಚರಂಡಿ ನೀರನ್ನು ಶುದ್ಧೀಕರಿಸಲು ಇರುವ ಘಟಕಕ್ಕೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚೊಕ್ಕಸಂದ್ರ ಕೆರೆಯಲ್ಲಿ ಚರಂಡಿಯ ಕಲುಷಿತ ನೀರು ಸೇರಿ ಮೀನುಗಳು ಸಾವಿಗೀಡಾಗಿವೆ. ಹೀಗಾಗಿ, ಮೀನುಗಾರಿಕೆ ಇಲಾಖೆಗೆ ಪತ್ರ ಬರೆದು ಸದ್ಯಕ್ಕೆ ಕೆರೆಗೆ ಮೀನುಗಳನ್ನು ಬಿಡಬೇಡಿ’ ಎಂದು ಸೂಚಿಸುತ್ತೇನೆ’ ಎಂದು ತಿಳಿಸಿದರು.
’ಕೆರೆಗಳನ್ನು ಅಭಿವೃದ್ಧಿ ಮಾಡಿ ಮಾದರಿ ಕೆರೆಗಳ ಮಾಡುವ ಕಲ್ಪನೆ ನಮ್ಮದು. 2017ಕ್ಕೆ ಮೊದಲು ದಾಸರಹಳ್ಳಿ, ಬಾಗಲಗುಂಟೆ, ಕಮ್ಮಗೊಂಡನಹಳ್ಳಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಬಾಗಲಗುಂಟೆ ಕೆರೆಯಲ್ಲಿ ಮಳೆಗಾಲದಲ್ಲಿ ನೀರು ತುಂಬುವ ಕೆಲಸವಾಗದೆ ಕೊಳವೆ ಬಾವಿಗಳ ನೀರಿನ ಮಟ್ಟ ಕುಸಿಯುತ್ತಿದೆ' ಎಂದರು.
'ಕಲುಷಿತ ನೀರಿನಿಂದ ದುರ್ವಾಸನೆ ಬೀರುತ್ತಿದೆ. ಸ್ವಚ್ಛತೆ ಕಾಪಾಡಿಲ್ಲ. ವಾಯುವಿಹಾರಿಗಳಿಗೆ ನಡೆದಾಡಲು ಸರಿಯಾದ ರಸ್ತೆ ಇಲ್ಲ. ಜಿಮ್ ಯಂತ್ರಗಳು ಇಲ್ಲ. ಇಂತಹ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದರು.
ಈ ವೇಳೆ ಗಣೇಶ ಹಬ್ಬ ಹತ್ತಿರ ಇರುವುದರಿಂದ ಚೊಕ್ಕಸಂದ್ರ ಕೆರೆಯ ಪಕ್ಕದಲ್ಲಿ ಇದ್ದ ದೊಡ್ಡ ಕಲ್ಯಾಣಿಗೆ ನೀರು ತುಂಬಿಸಿ ಅಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.