‘ಜೈಲಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡುವೆ ಪ್ರತ್ಯೇಕ ಗುಂಪುಗಳಿವೆ. ಒಂದು ಗುಂಪಿನ ಅಧಿಕಾರಿಗಳಿಗೆ ಕೆಟ್ಟ ಹೆಸರು ತರಬೇಕೆಂದು, ಇನ್ನೊಂದು ಗುಂಪು ಕೈದಿಗಳಿಗೆ ಮೊಬೈಲ್ ನೀಡಿ ಆ ದೃಶ್ಯವನ್ನು ಚಿತ್ರೀಕರಿಸಿಕೊಂಡಿದೆ. ಸೌಲಭ್ಯ ನೀಡಿದ ಜೈಲು ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಕೆಲವು ಕೈದಿಗಳು ವಿಡಿಯೊ ಚಿತ್ರೀಕರಿಸಿಕೊಂಡು ಹೊರಗಿರುವ ಆಪ್ತರಿಗೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸಿದ್ದರು ಎಂಬುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ. ‘ಉಮೇಶ್ ರೆಡ್ಡಿ ಮೊಬೈಲ್‌ನಲ್ಲಿ ಮಾತನಾಡಿರುವ ದೃಶ್ಯವು 2023ರಲ್ಲಿ ಚಿತ್ರೀಕರಣಗೊಂಡಿರುವುದು. ಬೆಳಗಾವಿ ಕೇಂದ್ರ ಕಾರಾಗೃಹದಿಂದ ಉಮೇಶ್ ರೆಡ್ಡಿಯನ್ನು ಪರಪ್ಪನ ಅಗ್ರಹಾರಕ್ಕೆ ಕರೆತಂದು ಜೈಲಿನ ಆಸ್ಪತ್ರೆ ವಿಭಾಗದಲ್ಲಿ ಇರಿಸಲಾಗಿತ್ತು. ಅದೇ ವಿಭಾಗದಲ್ಲಿ ರೌಡಿ ಶೀಟರ್ ವಡ್ಡ ನಾಗನಿದ್ದ. ಆತನೇ ಉಮೇಶ್ ರೆಡ್ಡಿಗೆ ಮೊಬೈಲ್ ನೀಡಿ ಮಾತನಾಡುವಂತೆ ಹೇಳಿ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದ. ಈ ವಿಚಾರವನ್ನು ಉಮೇಶ್ ರೆಡ್ಡಿ ಕಾರಾಗೃಹದ ಅಧಿಕಾರಿಗಳಿಗೆ ತಿಳಿಸಿದ್ದಾನೆ’ ಎಂದು ಗೊತ್ತಾಗಿದೆ.