ಮಂಗಳವಾರ, ಸೆಪ್ಟೆಂಬರ್ 21, 2021
23 °C
ಖಾಸಗಿ ಶಾಲಾ ಶಿಕ್ಷಕರಿಂದ ಪ್ರತಿಭಟನೆ

ಶಿಕ್ಷಕರಿಂದ ಕರಾಳ ದಿನ ಆಚರಣೆ: ಪರಿಹಾರ ಪ್ಯಾಕೇಜ್‌ ಘೋಷಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಕರ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದ ಖಾಸಗಿ ಶಾಲಾ ಶಿಕ್ಷಕರು ಶನಿವಾರ ಶಿಕ್ಷಕರ ಸದನದ ಎದುರು ಪ್ರತಿಭಟನೆ ನಡೆಸಿದರು. 

‘ಮಹಿಳೆಯರಿಂದಲೇ ಎಷ್ಟೋ ಮನೆಗಳು ನಡೆಯುತ್ತಿವೆ. ಆದರೆ, ಮಹಿಳೆಯರಿಗೆ ವೇತನ ನೀಡುವುದು ಲೆಕ್ಕಕ್ಕಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ವಿದ್ಯೆ ಕೊಡಿ ಎನ್ನುತ್ತಾರೆ. ಆದರೆ, ವಿದ್ಯೆ ಪಡೆದಿರುವ, ವಿದ್ಯೆ ನೀಡಿರುವ ಹೆಣ್ಣುಮಕ್ಕಳಿಗೆ ವೇತನ ಕೊಡದೆ ಮನೆಯಲ್ಲಿ ಕೂರಿಸಲಾಗುತ್ತಿದೆ’ ಎಂದು ಖಾಸಗಿ ಶಾಲೆಯ ಶಿಕ್ಷಕಿ ಸುಧಾ ಬೇಸರ ವ್ಯಕ್ತಪಡಿಸಿದರು. 

‘ನಾವೂ ಬಿ.ಇಡಿ, ಡಿ.ಇಡಿ ಎಲ್ಲ ಮಾಡಿ ಶಿಕ್ಷಕ ವೃತ್ತಿ ಮಾಡುತ್ತಿದ್ದೇವೆ. ಈಗ ಶಾಲೆಗಳಲ್ಲಿ ವೇತನ ನೀಡುತ್ತಿಲ್ಲ. ಶಾಲೆ ಪ್ರಾರಂಭವಾಗುವವರೆಗೆ ಇತ್ತ ಬರಲೇಬೇಡಿ ಎಂದು ಹೇಳುತ್ತಿದ್ದಾರೆ. ಸರ್ಕಾರವೂ ನಮಗೆ ಕೆಲಸ ಕೊಡುವುದಿಲ್ಲ. ಎಷ್ಟೋ ಶಿಕ್ಷಕರು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಶಿಕ್ಷಣ ಸಚಿವರು ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರದಿಂದ ಪ್ಯಾಕೇಜ್‌ ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದರು. 

‘ಖಾಸಗಿ ಶಾಲಾ ಶಿಕ್ಷಕರಿಗೆ ಪ್ಯಾಕೇಜ್‌ ಕೊಡಬೇಕು ಎಂದು ಮುಖ್ಯಮಂತ್ರಿಯವರೇ ಹೇಳಿದರೂ ಈವರೆಗೆ ಯಾವುದೇ ನೆರವು ನೀಡಿಲ್ಲ. ಗೌರವ ಧನವೂ ಸಿಗುತ್ತಿಲ್ಲ. ಇಲಾಖೆಯ ಅಧಿಕಾರಿಗಳು ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್‌ ದೂರಿದರು. 

‘ಪೋಷಕರು ಶುಲ್ಕ ಕಟ್ಟುತ್ತಿಲ್ಲ. ಸರ್ಕಾರದಿಂದ ಪೂರ್ಣಪ್ರಮಾಣದ ಆರ್‌ಟಿಇ ಬಾಕಿ ಹಣ ಖಾಸಗಿ ಶಾಲೆಗಳಿಗೆ ಇನ್ನೂ ಪಾವತಿಸಿಲ್ಲ’ ಎಂದೂ ಅವರು ಹೇಳಿದರು. 

‘ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಪ್ರತಿಭಟನಾ ನಿರತ ಶಿಕ್ಷಕರಿಗೆ ಭರವಸೆ ನೀಡಿದರು. 

ಗೃಹ ಕಚೇರಿಗೂ ಭೇಟಿ: ಅನುದಾನರಹಿತ ಶಾಲೆಗಳ ಶಿಕ್ಷಕರು, ಅತಿಥಿ ಶಿಕ್ಷಕರು ಶನಿವಾರ ಬೆಳಿಗ್ಗೆಯೇ ಸಚಿವರ ಗೃಹ ಕಚೇರಿಗೆ ಭೇಟಿ ನೀಡಿ ಅಹವಾಲು ಸಲ್ಲಿಸಿದರು. ಅವರ ಸಮಸ್ಯೆ ಪರಿಹಾರಕ್ಕೆ ಶಿಕ್ಷಣ ಇಲಾಖೆ ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳ ಕುರಿತು ಸಚಿವರು ಮಾಹಿತಿ ನೀಡಿದರು. 

ನೂಡಲ್ಸ್‌ ನೀಡಲು ಮುಂದಾದ ಶಿಕ್ಷಕಿಯರು 
ಖಾಸಗಿ ಶಾಲೆಗಳಲ್ಲಿ ಸರಿಯಾದ ವೇತನ ನೀಡದ ಕಾರಣ, ಶಿಕ್ಷಕರು ಅನಿವಾರ್ಯವಾಗಿ ಬೇರೆ ಬೇರೆ ಕೆಲಸ ಮಾಡಬೇಕಾಗಿದೆ. ಕೆಲವು ಶಿಕ್ಷಕಿಯರು ಸೇರಿ ‘ನೂಡಲ್ಸ್‌’ ಮಾರಾಟ ಪ್ರಾರಂಭಿಸಿದ್ದಾರೆ. ಇದರಿಂದ ಬಂದ ಆದಾಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಹೀಗೆ ತಯಾರಿಸಿದ ನೂಡಲ್ಸ್‌ ಪೊಟ್ಟಣವನ್ನು ಸಚಿವರಿಗೆ ಕೊಡಲು ಕೆಲವು ಶಿಕ್ಷಕಿಯರು ಮುಂದಾದರು. ಶಿಕ್ಷಕರ ಸಮಸ್ಯೆಯನ್ನು ಕೇಳಿಸಿಕೊಂಡ ಸಚಿವರು ಬೇಸರದಲ್ಲಿಯೇ ಶಿಕ್ಷಕರ ಸದನದೊಳಗೆ ತೆರಳಿದರು. ನೂಡಲ್ಸ್‌ ಪೊಟ್ಟಣವನ್ನು ಅವರು ತೆಗೆದುಕೊಳ್ಳಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು