ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಕ್ಷೇತ್ರ | ಮೀಸಲಾತಿ ಚಳವಳಿ ಅಗತ್ಯ: ರವಿವರ್ಮ ಕುಮಾರ್‌

Published 31 ಆಗಸ್ಟ್ 2024, 16:07 IST
Last Updated 31 ಆಗಸ್ಟ್ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಕ್ಷೇತ್ರದಲ್ಲೂ ಸಾಮಾಜಿಕ ನ್ಯಾಯ ಇರಬೇಕು. ಹಾಗಾಗಿ ಈ ಕ್ಷೇತ್ರದಲ್ಲೂ ಮೀಸಲಾತಿ ಕೇಳುವ ಚಳವಳಿ ಹುಟ್ಟುಹಾಕಬೇಕು ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಹೇಳಿದರು.

ಅಲ್ಪಸಂಖ್ಯಾತ, ಹಿಂದುಳಿದ, ದಲಿತ ನೌಕರರ ವಿಚಾರ ವೇದಿಕೆ ಶನಿವಾರ ಆಯೋಜಿಸಿದ್ದ ದೇವರಾಜ ಅರಸು ಅವರ 109ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

’ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣಕ್ಕೆ ಅವಕಾಶ ನೀಡಬಾರದು. ಬಡ್ತಿಯಲ್ಲೂ ಮೀಸಲಾತಿ ಸಿಗಬೇಕು’ ಎಂದು ಹೇಳಿದರು.

’ಎಲ್ಲಿಯವರೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 50 ರಷ್ಟು ಮೀಸಲಾತಿ ಕೊಡುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಉದ್ದಾರವಾಗುವುದಿಲ್ಲ. ಶಕ್ತಿ ಯೋಜನೆ ಪರಿಣಾಮ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿವೆ. ಸಂಸ್ಥೆಯು ಲಾಭದತ್ತ ಸಾಗುತ್ತಿದೆ’ ಎಂದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದ ಪರಿಣಾಮ ಸುಮಾರು 15 ಲಕ್ಷ ಕುಟುಂಬಗಳಿಗೆ ಆಶಾ ಜ್ಯೋತಿ ಆಯಿತು. ಬ್ರಾಹ್ಮಣರು, ಒಕ್ಕಲಿಗರು ಮತ್ತು ಲಿಂಗಾಯತರ ತೀವ್ರ ವಿರೋಧದ ನಡುವೆಯೂ 1977ರಲ್ಲಿ ಎಲ್.ಜಿ.ಹಾವನೂರು ವರದಿಯನ್ನು ಅರಸು ಅವರು ಜಾರಿ ಮಾಡುವ ಮೂಲಕ ಹಿಂದುಳಿದ ವರ್ಗದವರಿಗೆ ಶೇ 32 ಮೀಸಲಾತಿ ಕಲ್ಪಿಸಿದರು ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ಸರ್ಕಾರಿ ನೌಕರರ ಸಂಘದಲ್ಲಿ ಒಬಿಸಿ ಪ್ರಾತಿನಿಧ್ಯ ಇಲ್ಲ ಎಂದು ಕೊರಗುವುದನ್ನು ಬಿಟ್ಟು, ಅವಕಾಶ ಬಂದಾಗ ಸಾಬೀತು ಪಡಿಸಬೇಕು. ನೌಕರರ ಸಂಘದಲ್ಲಿ ಅಹಿಂದ ವರ್ಗದ ಸದಸ್ಯರ ಸಂಖ್ಯೆ 3.50 ಲಕ್ಷ. ಪ್ರತಿಯೊಬ್ಬರು ವಿದ್ಯಾರ್ಥಿಗಳನ್ನು ದತ್ತು ಪಡೆಯಬೇಕು’ ಎಂದು ಸಲಹೆ ನೀಡಿದರು. 

ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಮಂಜೇಗೌಡ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಆಡಳಿತ ಅವಧಿ ಮುಕ್ತಾಯವಾಗಿದೆ. ಆಡಳಿತಾಧಿಕಾರಿ ನೇಮಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇನೆ. ಸಂಘದ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಲು ಕ್ರಮ ಕೈಗೊಳ್ಳಬೇಕು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಸುದರ್ಶನ್ ಮಾತನಾಡಿ, 2021ರಲ್ಲಿ ಜನಗಣತಿ ನಡೆಸಬೇಕಿತ್ತು. ಈವರೆಗೂ ನಡೆದಿಲ್ಲ. ಶೀಘ್ರ ಜನಗಣತಿಯೊಂದಿಗೆ ಜಾತಿಗಣತಿಯನ್ನು ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಅಹಿಂದ ವಿಚಾರ ವೇದಿಕೆ ಸಂಚಾಲಕ ಬಸವರಾಜ ಸಂಗಪ್ಪನವರ್ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ರಘುಮೂರ್ತಿ, ಬಾಬ ಸಾಹೇಬ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT