ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಖಾಸಗಿ ಸಾರಿಗೆಯವರ ಮುಷ್ಕರ: ಪರದಾಡಿದ ಸಾರ್ವಜನಿಕರು

ಹಲವೆಡೆ ಹಲ್ಲೆ, ಹಾನಿ: ಖಾಸಗಿ ಸಾರಿಗೆ ಮುಷ್ಕರ ಹಿಂಪಡೆದ ಒಕ್ಕೂಟ
Published 11 ಸೆಪ್ಟೆಂಬರ್ 2023, 15:42 IST
Last Updated 11 ಸೆಪ್ಟೆಂಬರ್ 2023, 15:42 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟವು ಸೋಮವಾರ ಮುಷ್ಕರ ನಡೆಸಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಮುಷ್ಕರ ಕರೆಗೆ ಓಗೊಡದೇ ವಾಹನ ಚಲಾಯಿಸಿದ ಚಾಲಕರ ಮೇಲೆ ಹಲ್ಲೆ ನಡೆಸಲಾಗಿದೆ. ವಾಹನಗಳಿಗೆ ಹಾನಿ ಮಾಡಲಾಗಿದೆ.

ಆರ್ಥಿಕ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಈಡೇರಿಸುವ ಭರವಸೆಯನ್ನು ಸಾರಿಗೆ ಸಚಿವರು ನೀಡಿದ ಕಾರಣ ಒಕ್ಕೂಟವು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಮುಷ್ಕರವನ್ನು ಹಿಂಪಡೆದುಕೊಂಡಿತು.

‘ಶಕ್ತಿ’ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಅಥವಾ ರಸ್ತೆ ತೆರಿಗೆ ರದ್ದು ಮಾಡಬೇಕು. ರ‍್ಯಾಪಿಡೊ ಬೈಕ್‌– ಟ್ಯಾಕ್ಸಿ ನಿಷೇಧಿಸಬೇಕು. ರ‍್ಯಾಪಿಡೊ, ಓಲಾ, ಉಬರ್‌, ಇನ್ನಿತರ ಆನ್‌ಲೈನ್‌ ಕಂಪನಿಗಳಿಗೆ ಇ–ರಿಕ್ಷಾಗಳ ನೇರ ನೋಂದಣಿ ಮಾಡುವುದನ್ನು ನಿಷೇಧಿಸಬೇಕು. ಬಿಳಿ ಬಣ್ಣದ ಫಲಕ ಹೊಂದಿರುವ ವಾಹನಗಳಲ್ಲಿ ಬಾಡಿಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಕೈಬಿಡಬೇಕು. ಚಾಲಕರಿಗೆ ₹ 10 ಸಾವಿರ ಮಾಸಿಕ ಪರಿಹಾರ ಧನಸಹಾಯ ನೀಡಬೇಕು. ಚಾಲಕರ ಕಲ್ಯಾಣ ನಿಧಿ ಆರಂಭಿಸಬೇಕು ಎಂಬುದು ಸೇರಿ 30 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಒಕ್ಕೂಟವು ಮುಷ್ಕರಕ್ಕೆ ಕರೆ ನೀಡಿತ್ತು.

ಈ ಒಕ್ಕೂಟದ ಅಡಿಯಲ್ಲಿ ಬರುವ ಖಾಸಗಿ ಬಸ್‌, ಆಟೊ, ಟ್ಯಾಕ್ಸಿ, ಶಾಲಾ ವಾಹನ ಸಹಿತ 32 ಸಂಘಟನೆಗಳ ಸದಸ್ಯರು ಸೋಮವಾರ ಮುಂಜಾನೆಯೇ ರಸ್ತೆಗೆ ಇಳಿದಿದ್ದರು. ಖಾಸಗಿ ವಾಹನಗಳು ರಸ್ತೆಗಿಳಿಯಬಾರದು ಎಂದು ಮೆರವಣಿಗೆ ನಡೆಸಿ ಮನವಿ ಮಾಡಿಕೊಂಡರು.

ಮುಷ್ಕರಕ್ಕೆ ಬೆಂಬಲ ನೀಡಿರುವ ವಿವಿಧ ಸಂಘಟನೆಗಳ ಸದಸ್ಯರು ನಗರದ ವಿವಿಧ ಕಡೆಗಳಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದರು. ಬಳಿಕ ಉದ್ಯಾನದಲ್ಲಿ ಪ್ರತಿಭಟನಾ ಸಭೆ ನಡೆಯಿತು. 30 ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಬಿಎಂಟಿಸಿ ಹೆಚ್ಚುವರಿ ಬಸ್‌: ಮುಷ್ಕರದಿಂದ ಸಾರ್ವಜನಿಕರು ತೊಂದರೆಗೀಡಾಗಬಾರದು ಎಂದು ಹೆಚ್ಚುವರಿಯಾಗಿ ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸಲಾಗಿತ್ತು. ಆದರೂ ಬೆಳಿಗ್ಗೆ ಮತ್ತು ಮಧ್ಯಾಹ್ನದ ಹೊತ್ತು ಹಲವು ಬಸ್‌ಗಳಲ್ಲಿ ನೂಕುನುಗ್ಗಲು ಉಂಟಾಗುವಷ್ಟು ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ಸಾರಿಗೆ ಸಚಿವರ ಭೇಟಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ‘ನಾನು ನಿಮ್ಮ ಪರ ಇದ್ದೇನೆ. ನನ್ನನ್ನೂ ನಿಮ್ಮ ಜೊತೆಗೆ ಸೇರಿಸಿಕೊಳ್ಳಿ. ತೆರಿಗೆ ಮತ್ತು ಶಕ್ತಿ ಯೋಜನೆಗೆ ಸಂಬಂಧಿಸಿದ ಬೇಡಿಕೆಯನ್ನು ಈಡೇರಿಸುವುದು ನನ್ನ ವ್ಯಾಪ್ತಿಯಲ್ಲಿ ಕಷ್ಟ. ಉಳಿದ ಬೇಡಿಕೆಗಳನ್ನು ಈಡೇರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಅಧಿಕ ದಂಡ ವಿಧಿಸುವ ನಿಯಮ ಮಾಡಿದಾಗ ನಾನೇ ನಿಮ್ಮ ನೆರವಿಗೆ ಬಂದು ಕಡಿಮೆ ಮಾಡಿಸಿದ್ದೆ. ಮುಖ್ಯಮಂತ್ರಿ ಜೊತೆಗೆ ಸಭೆ ನಡೆಸಿದಾಗ ನೀವು ಪಾಲ್ಗೊಂಡಿಲ್ಲ. ಚಾಲಕರ ಅಭಿವೃದ್ಧಿ ನಿಗಮ ರಚಿಸಲಾಗುವುದು. ಚಾಲಕರಿಗೆ ಕ್ಯಾಂಟೀನ್ ಮಾಡಲಾಗುವುದು. ತೆರಿಗೆ ಕಡಿಮೆ ಮಾಡುವುದು, ಮನ್ನಾ ಮಾಡುವುದೆಲ್ಲ ಸಾರಿಗೆ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೆ ವಿಸ್ತರಿಸುವುದು, ಪರಿಹಾರ ನೀಡುವುದು ಕೂಡ ಕಷ್ಟ. ಉಳಿದ ಬೇಡಿಕೆಗಳನ್ನು ಈಡೇರಿಸಲಾಗುವುದು’ ಎಂದು ತಿಳಿಸಿದರು.

‘ಆರ್ಥಿಕ ಇಲಾಖೆಗೆ ಸಂಬಂಧಿಸಿದ ಮೂರು ಬೇಡಿಕೆಗಳನ್ನು ಹೊರತುಪಡಿಸಿ ಉಳಿದ 27 ಬೇಡಿಕೆಗಳನ್ನು ಈಡೇರಿಸಲು ಮಂಗಳವಾರವೇ ಕ್ರಮ ಕೈಗೊಳ್ಳಬೇಕು ಎಂಬ ಷರತ್ತು ವಿಧಿಸಿ ಮುಷ್ಕರ ಹಿಂಪಡೆಯಲಾಯಿತು’ ಎಂದು ಒಕ್ಕೂಟದ ಅಧ್ಯಕ್ಷ ಎಸ್‌. ನಟರಾಜ್‌ ಶರ್ಮ ತಿಳಿಸಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಆಟೋಗಳನ್ನು ರಸ್ತೆಗಿಳಿಸದೆ ಸಾಲಿನಲ್ಲಿ ನಿಲ್ಲಿಸಲಾಗಿತ್ತು
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಆಟೋಗಳನ್ನು ರಸ್ತೆಗಿಳಿಸದೆ ಸಾಲಿನಲ್ಲಿ ನಿಲ್ಲಿಸಲಾಗಿತ್ತು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
30 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
30 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಸದಸ್ಯರು ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಅನಿಲ್‌ಕುಂಬ್ಳೆ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರ ಮನೆಗೆ ಬಿಎಂಟಿಸಿಯ ವಾಯುವಜ್ರ ಬಸ್‌ನಲ್ಲಿ ಪ್ರಯಾಣಿಸಿದರು.
ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಅನಿಲ್‌ಕುಂಬ್ಳೆ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರ ಮನೆಗೆ ಬಿಎಂಟಿಸಿಯ ವಾಯುವಜ್ರ ಬಸ್‌ನಲ್ಲಿ ಪ್ರಯಾಣಿಸಿದರು.

ಚಾಲಕರ ಮೇಲೆ ಹಲ್ಲೆ

ಸಂಗೊಳ್ಳಿ ರಾಯಣ್ಣ ಫ್ಲೈಓವರ್‌ ಸಹಿತ ಕೆಲವು ಕಡೆಗಳಲ್ಲಿ ರ‍್ಯಾಪಿಡೊ ಬೈಕ್‌– ಟ್ಯಾಕ್ಸಿ ಚಾಲಕರನ್ನು ತಡೆದು ಹಲ್ಲೆ ಮಾಡಿರುವುದು ವರದಿಯಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಕಾರಿಗೆ ಚಿಕ್ಕಜಾಲದಲ್ಲಿ ಕಲ್ಲೆಸೆದು ಹಾನಿ ಮಾಡಲಾಗಿದೆ. ಹೆಬ್ಬಾಳದಲ್ಲಿ ಕಾರಿಗೆ ಮತ್ತು ಕಾರು ಚಾಲಕನ ತಲೆಗೆ ಮೊಟ್ಟೆಯನ್ನು ಒಡೆಯಲಾಗಿದೆ. ಎಸ್‌.ಪಿ. ರಸ್ತೆಯಲ್ಲಿ ಬಾಡಿಗೆ ಮಾಡುತ್ತಿದ್ದ ಗೂಡ್ಸ್‌ ವಾಹನದ ಚಕ್ರದ ಗಾಳಿ ತೆಗೆಯಲಾಗಿದೆ. ಮೌರ್ಯ ಸರ್ಕಲ್‌ನಲ್ಲಿ ಕಾರು ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಹೀಗೆ ಹಲವು ಕಡೆಗಳಲ್ಲಿ ಹಲ್ಲೆ ಮತ್ತು ಹಾನಿ ಘಟನೆಗಳು ನಡೆದಿವೆ.

ಹಲವೆಡೆ ಪರದಾಡಿದ ಸಾರ್ವಜನಿಕರು

ಆಟೊ ಟ್ಯಾಕ್ಸಿಗಳನ್ನು ಅವಲಂಬಿಸಿದ್ದ ಅನೇಕರು ಸಮಸ್ಯೆಗಳನ್ನು ಎದುರಿಸಿದರು. ಮೆಟ್ರೊ ರೈಲು ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣದವರೆಗೆ ಆಟೊ ಟ್ಯಾಕ್ಸಿಗಳಲ್ಲಿ ಹೋಗುವವರು ಉದ್ಯೋಗ ಸ್ಥಳಗಳಿಗೆ ಕ್ಯಾಬ್‌ಗಳಲ್ಲಿ ತೆರಳುವವರು ಸೋಮವಾರ ಬೆಳಿಗ್ಗೆ ಪರದಾಡಿದರು. 

ರೈಲು ನಿಲ್ದಾಣಗಳಲ್ಲಿ ಆಟೊ ಕ್ಯಾಬ್‌ ಟ್ಯಾಕ್ಸಿ ಕಾರುಗಳಿಗೆ ಕಾಯುತ್ತಿರುವುದು ಕಂಡು ಬಂತು. ಕೊನೆಗೆ ಕೆಲವರು ಬಿಎಂಟಿಸಿ ಬಸ್‌ ನಿಲ್ದಾಣದ ಕಡೆಗೆ ತೆರಳಿದರೆ ಹಲವರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವೈಯಕ್ತಿಕ ಬಳಕೆಯ ವಾಹನಗಳಲ್ಲಿ ನಿಗದಿತ ಸ್ಥಳ ಸೇರಿದರು.

ಬೆಂಗಳೂರಿನ ಹಲವು ಶಾಲೆಗಳು ರಜೆ ನೀಡಿದ್ದರೆ ಕೆಲ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇತ್ತು. ಬಂದ್‌ ಬಗ್ಗೆ ಮಾಹಿತಿ ಇದ್ದರೂ ಶಾಲಾ ಆಡಳಿತ ಮಂಡಳಿಗಳು ಸರಿಯಾದ ಮಾಹಿತಿ ನೀಡದ ಕಾರಣ ಕೆಲ ಪೋಷಕರು ಸ್ವಂತ ವಾಹನದಲ್ಲಿ ಶಾಲೆಗೆ ಕರೆತಂದಿದ್ದರು. ಆಗ ಶಾಲೆಗಳಿಗೆ ರಜೆ ನೀಡಿದ ಪ್ರಸಂಗಗಳೂ ನಡೆದವು. 

‘ಸಾರಿಗೆ ಸೇವೆಗಳಿಗಾಗಿ ಖಾಸಗಿ ವಾಹನ ಅವಲಂಬಿಸಿರುವ ಕೆಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಹೆಚ್ಚಿನ ಶಾಲೆಗಳು ತೆರೆದಿದ್ದವು. ಶಾಲಾ ವಾಹನಗಳಿಗೆ ಯಾವುದೇ ಅಡ್ಡಿಯಾಗಿಲ್ಲ’ ಎಂದು ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಪ್ರತಿಕ್ರಿಯಿಸಿದರು.

ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ ಅನಿಲ್‌ ಕುಂಬ್ಳೆ

ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಅನಿಲ್‌ಕುಂಬ್ಳೆ ಅವರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರ ಮನೆಗೆ ಬಿಎಂಟಿಸಿಯ ವಾಯುವಜ್ರ ಬಸ್‌ನಲ್ಲಿ ಪ್ರಯಾಣಿಸಿದರು. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಸೆಲ್ಫಿ ಫೋಟೊ ತೆಗೆದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಹಳ ಜನರು ಅವರ ಫೋಟೊಗೆ ಪ್ರತಿಕ್ರಿಯಿಸಿದ್ದಾರೆ. ‘ಕುಂಬ್ಳೆ ಸರ್ಕಲ್‌ನಲ್ಲಿ ನೀವು ಇಳಿಯುವುದಾದರೆ ನನ್ನ ಸರ್ಕಲ್‌ಗೆ ಟಿಕೆಟ್‌ ಕೊಡಿ ಎಂದು ನಿರ್ವಾಹಕರನ್ನು ಕೇಳ್ತೀರಾ?’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ವಿಮಾನಯಾನಕ್ಕಿಂತ ದುಬಾರಿಯಾದ ಟ್ಯಾಕ್ಸಿ

ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಿಗೆ ಬೆಂಗಳೂರು ಬಂದ್‌ ಬಿಸಿ ತಟ್ಟಿತು. ಪ್ರಯಾಣಿಕರು ವಿಮಾನ ಟಿಕೆಟ್‌ಗಿಂತ ಹೆಚ್ಚು ಹಣ ಪಾವತಿಸಿ ತಮ್ಮ ಸ್ಥಳ ತಲುಪಿದರು.

ಲಭ್ಯವಾದ ಕೆಲ ಟ್ಯಾಕ್ಸಿಗಳಲ್ಲಿ ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ₹4,000 ಬಾಡಿಗೆ ತೆತ್ತು ಪ್ರಯಾಣಿಸ
ಬೇಕಾಯಿತು. ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ವಾಯುವಜ್ರ ಬಸ್‌ ಸೇವೆಯನ್ನು ಹೆಚ್ಚುವರಿಯಾಗಿ ಒದಗಿಸಲಾಯಿತು. ಕೆಲ ಪ್ರಯಾಣಿಕರು ಬಸ್‌ನಲ್ಲಿ ತೆರಳಲು ಇಚ್ಛಿಸದೇ ಖಾಸಗಿ ವೈಟ್‌ ಬೋರ್ಡ್‌ ಕಾರುಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಪ್ರಯಾಣಿಸಿದರು.

ಟ್ಯಾಕ್ಸಿ ದರ ಕೇಳಿ ಬೆಚ್ಚಿ ಬಿದ್ದ ಕೆಲ ಪ್ರಯಾಣಿಕರು ಬಿಎಂಟಿಸಿ ಬಸ್‌ನಲ್ಲಿ ಸಾಗಿದರು. ಮತ್ತೊಂದಷ್ಟು ಜನ ಅವರ ಸ್ವಂತ ವಾಹನ ಬರುವವರಿಗೂ ವಿಮಾನ ನಿಲ್ದಾಣದಲ್ಲೆ ಕಾದು ಕುಳಿತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು. ಹಣ ವಸೂಲಿಗೆ ಇಳಿಸಿದ್ದ ಕಾರು ಚಾಲಕರನ್ನು ನಿಯಂತ್ರಿಸಲು ವಿಮಾನ ನಿಲ್ಧಾಣದ ಪೊಲೀಸರಾಗಲಿ, ಟ್ಯಾಕ್ಸಿ ನಿರ್ವಹಣೆಯ ಹೊಣೆ ಹೊತ್ತ ವಿಮಾನದ ಲ್ಯಾಂಡ್‌ ಸೈಡ್‌ನ ವ್ಯವಸ್ಥಾಪಕರಾಗಲಿ ಗಮನ ಹರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT