ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬಿತ್ತನೆ ಮೊಟ್ಟೆಗೆ ಗಂಟುರೋಗ: ವಿ.ಬಾಲಸುಬ್ರಮಣ್ಯಂ

Last Updated 15 ಜೂನ್ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರವಾಗಿ ಹರಡುತ್ತಿರುವ ಗಂಟುರೋಗದ ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ವರ್ಷದೊಳಗೆರೇಷ್ಮೆ ಉದ್ಯಮ ಪೂರ್ತಿ ನಶಿಸಿ ಹೋಗುವ ಸಾಧ್ಯತೆಯಿದೆ ಎಂದು ಭಾರತೀಯ ರೇಷ್ಮೆ ಒಕ್ಕೂಟದ ಅಧ್ಯಕ್ಷವಿ.ಬಾಲಸುಬ್ರಮಣ್ಯಂ ಆತಂಕ ವ್ಯಕ್ತಪಡಿಸಿದ್ದಾರೆ.

ರೋಗವು ತೀವ್ರಗೊಂಡರೆ ರೇಷ್ಮೆ ಬೆಳೆಗಾರರು ಬೀದಿ ಪಾಲಾಗಲಿದ್ದಾರೆ. ವರ್ಷದ ಆರಂಭದಲ್ಲಿ ಮೊದಲಿಗೆ ಕಾಣಿಸಿಕೊಂಡ ತಾಯಿ ಚಿಟ್ಟೆಯಿಂದ ಬರುವ ಈ ಗಂಟುರೋಗವು ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಉಲ್ಬಣವಾಗಲಿದೆ ಎಂದು ರೇಷ್ಮೆ ತಜ್ಞರು ವರದಿ ನೀಡಿದ್ದಾರೆ.

ಹೀಗಾಗಿ, ಬಿತ್ತನೆ ಪ್ರದೇಶಗಳಲ್ಲಿ ಚಿಟ್ಟೆ ಪರೀಕ್ಷೆ, ಸೋಂಕು ನಿವಾರಣೆ, ಬಿತ್ತನೆ ಮಾರುಕಟ್ಟೆಯಲ್ಲಿ ನೂಲು ಬಿಚ್ಚಾಣಿಕೆಗೆ ಹೋಗುವ ಗೂಡಿಗೆ ಹಬೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಸೋಂಕಿತ ರೇಷ್ಮೆ ಮೊಟ್ಟೆ ಹಾಗೂ ಹುಳುಗಳನ್ನು ಸುಟ್ಟು ಹಾಕಬೇಕು. ವಿಜ್ಞಾನಿಗಳು ಹಾಗೂ ತಜ್ಞ ಸಿಬ್ಬಂದಿ ಯನ್ನು ಈ ಕೂಡಲೇ ಗಂಟುರೋಗ ಸೋಂಕಿತ ಪ್ರದೇಶಗಳಿಗೆ ನಿಯೋಜಿಸಿ, ಗುಣಮಟ್ಟ ಪರೀಕ್ಷೆ ಮಾಡಿಸಿ ಪೆಬ್ರಿನ್ ರೋಗವನ್ನು ನಿಯಂತ್ರಣಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ 46 ಬ್ಯಾಚ್‌ಗಳಲ್ಲಿ ಗಂಟು ರೋಗಾಣು ಕಂಡುಬಂದಿದೆ ಎಂಬುದನ್ನು ರೇಷ್ಮೆ ಇಲಾಖೆ ದೃಢ ಪಡಿಸಿದೆ. ಈ ಪೆಬ್ರಿನ್ ರೋಗಾಣು ಸೋಂಕಿತ ಸಂತತಿಯನ್ನು ಸಂಪೂರ್ಣ ನಾಶಪಡಿಸಬೇಕು. ರೈತರ ರೇಷ್ಮೆ ಹುಳು ಸಾಕಣೆ ಮನೆಗಳಲ್ಲಿ ಸೋಂಕು
ನಿವಾರಣೆ ಮಾಡಬೇಕು ಎಂದು ಹೇಳಿದ್ದಾರೆ.

ಸರ್ಕಾರವು ಪೆಬ್ರಿನ್ ರೋಗವನ್ನು ನಿರ್ಲಕ್ಷ್ಯ ತೋರಿದರೆ ರೇಷ್ಮೆ ಉದ್ಯಮ ನಶಿಸಿ ಹೋಗಲಿದೆ. ಗಂಟುರೋಗ ಸೋಂಕಿನಿಂದ ಇಟಲಿ ಮತ್ತು ಫ್ರಾನ್ಸ್‌ನಲ್ಲಿ ರೇಷ್ಮೆ ಉದ್ಯಮ ಸರ್ವನಾಶವಾಗಿರುವುದನ್ನು ಗಮನದಲ್ಲಿ ಇರಿಸಿಕೊಂಡು ತಕ್ಷಣವೇ ಕ್ರಮ ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರೇಷ್ಮೆ ಸಂಶೋಧನಾ ಸಂಸ್ಥೆಯನ್ನು ಬಲಪಡಿಸಬೇಕು ಹಾಗೂ ಸಮರ್ಥ ವಿಜ್ಞಾನಿಗಳನ್ನು ನೇಮಕಾತಿ ಮಾಡಬೇಕು ಎಂದೂ ವಿ.
ಬಾಲಸುಬ್ರಮಣ್ಯಂ ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT