ಗುರುವಾರ , ಜನವರಿ 30, 2020
22 °C
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ

ಎಲ್ಲೆಡೆಯೂ ನವೋದ್ಯಮಕ್ಕೆ ಉತ್ತೇಜನ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರ್ಕಾರ ಜಾರಿಗೆ ತರುತ್ತಿರುವ ಹೊಸ ಐಟಿ-ಬಿಟಿ ನೀತಿಯಲ್ಲಿ ರಾಜ್ಯದ ದ್ವಿತೀಯ ಹಾಗೂ ತೃತೀಯ ಹಂತದ ನಗರಗಳಲ್ಲೂ ನವೋದ್ಯಮ ಆರಂಭಕ್ಕೆ ಹೆಚ್ಚಿನ ಉತ್ತೇಜನ ನೀಡಲಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. 

ರಾಜ್ಯ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಐಟಿ ಬಿಟಿ) ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ನವೋದ್ಯಮ, ಉದ್ಯಮಗಳ ಜತೆ ಸಂವಾದ ಮತ್ತು ಪ್ರದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

‘ಶೈಕ್ಷಣಿಕ ಸಂಸ್ಥೆಗಳನ್ನು ಬಲಗೊಳಿಸುವ ಮೂಲಕ ಕಾಲೇಜು ಹಂತದಲ್ಲಿಯೇ ನವೋದ್ಯಮಗಳ ಆರಂಭಕ್ಕೆ ಅಗತ್ಯ ಬೆಂಬಲ ನೀಡಲಿದ್ದೇವೆ. ಐಟಿ– ಬಿಟಿ ಕ್ಷೇತ್ರದ ಪ್ರಮುಖರೊಂದಿಗೆ ಚರ್ಚಿಸಿ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಒಂದು ಕಾಯ್ದೆಯಡಿ ತರುವ ನಿಟ್ಟಿನಲ್ಲಿ ನಾವೀನ್ಯಕ್ಕಾಗಿ ಕಾನೂನಿನ ಚೌಕಟ್ಟನ್ನು ಜಾರಿಗೊಳಿಸುವ ಸಿದ್ಧತೆ ನಡೆದಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರೂಪುಗೊಂಡಿರುವ ಹೊಸ ಪರಿಕಲ್ಪನೆಗಳು ರಾಜ್ಯದ ಆರ್ಥಿಕತೆಗೆ ಪೂರಕವಾದ ಪ್ರಮುಖ ಶಕ್ತಿ’ ಎಂದು ಹೇಳಿದರು. 

ಡೀಪ್ ತಂತ್ರಜ್ಞಾನಕ್ಕೆ ಬೆಂಬಲ: ಉಪಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ಎಲಿವೆಟ್‌ ಯೋಜನೆಯಡಿ ನವೋದ್ಯಮಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬರಮಾಡಿಕೊಳ್ಳುವ ಜತೆಗೆ ಪ್ರೋತ್ಸಾಹಿಸಬೇಕಾಗಿದೆ. ಹಾಗಾಗಿ ಎಲಿವೇಟ್ ಮಾದರಿಯಲ್ಲಿಯೇ ಡೀಪ್ ತಂತ್ರಜ್ಞಾನವನ್ನು ಬೆಂಬಲಿಸಲಾಗುವುದು. ಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ಪ್ರಾರಂಭಿಸಿರುವುದರಿಂದ ಕಾನೂನು ತೊಡಕುಗಳು ದೂರವಾಗಿವೆ’ ಎಂದು ತಿಳಿಸಿದರು. 

‘ನಮ್ಮ ಶಿಕ್ಷಣ ಪದ್ಧತಿ ಹಳೆಯ ಮಾದರಿಯಲ್ಲೇ ಮುಂದುವರೆದಿದೆ. ಜಾಗತಿಕ ಬದಲಾವಣೆಗೆ ತಕ್ಕಂತೆ ಇದನ್ನೂ ಬದಲಾವಣೆ ಮಾಡುವ ಅಗತ್ಯವಿದೆ. ಅದಕ್ಕಾಗಿಯೇ ವಿಷನ್ ಗ್ರೂಪ್ ರಚಿಸಲಾಗಿದೆ’ ಎಂದರು.

‘ಭಾಷೆ ಬೆಳವಣಿಗೆಗೆ ತಂತ್ರಜ್ಞಾನ’

‘ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಮತ್ತು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಭೆಗೆ ತಕ್ಕಂತೆ ಕನ್ನಡಿಗರಿಗೆ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸುವ ಬಗ್ಗೆ ಗಮನಹರಿಸಲಾಗುವುದು. ಕನ್ನಡ ಭಾಷೆ ಬೆಳವಣಿಗೆಗೂ ತಂತ್ರಜ್ಞಾನಗಳ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಯೂರೋಪಿನ ಕೆಲ ದೇಶಗಳು ತಂತ್ರಜ್ಞಾನದ ಮೂಲಕವೇ ಭಾಷೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿವೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು. 

ಡಿಜಿಟಲ್ ವಹಿವಾಟಿನಲ್ಲಿ ನಗರಕ್ಕೆ ಅಗ್ರಸ್ಥಾನ

ಬೆಂಗಳೂರು: ಡಿಜಿಟಲ್ ವಹಿವಾಟಿನಲ್ಲಿ ದೇಶದಲ್ಲಿಯೇ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಪ್ರತಿ ವ್ಯಕ್ತಿ ತಿಂಗಳಿಗೆ ಡಿಜಿಟಲ್ ರೂಪದಲ್ಲಿ ಸರಾಸರಿ ₹ 8,600 ಪಾವತಿಸುತ್ತಿದ್ದಾನೆ.

ರಾಜ್ಯ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಐಟಿ ಬಿಟಿ) ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ನವೋದ್ಯಮ, ಉದ್ಯಮಗಳ ಜತೆಗ ಸಂವಾದ ಮತ್ತು ಪ್ರದರ್ಶನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‘ಬೆಂಗಳೂರು ಆವಿಷ್ಕಾರ ವರದಿ’ ಬಿಡುಗಡೆ ಮಾಡಿದರು. 

ಸ್ಟಾರ್ಟ್‌ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ಡಿಜಿಟಲ್ ವಹಿವಾಟಿಗೆ ಬೆಂಗಳೂರಿಗರು ಹೆಚ್ಚು ಒಲವು ತೋರಿದ್ದು, ಅಧಿಕ ವಹಿವಾಟಿಗೆ ಕಾರಣರಾಗಿದ್ದಾರೆ. ದೇಶದಲ್ಲಿ ನಡೆದಿರುವ ಒಟ್ಟು ಡಿಜಿಟಲ್ ವಹಿವಾಟಿನಲ್ಲಿ ಬೆಂಗಳೂರಿನಲ್ಲಿ ಶೇ 38.10 ರಷ್ಟು ನಡೆದಿದೆ. ಹೈದರಾಬಾದ್‌ (ಶೇ 12.50), ದೆಹಲಿ (ಶೇ 10.22), ಪುಣೆ (ಶೇ 9.50), ಮುಂಬೈ (ಶೇ 6.78) ನಂತರದ ಸ್ಥಾನದಲ್ಲಿವೆ. ನವೋದ್ಯಮದಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಅತೀ ಹೆಚ್ಚು ಉದ್ಯೋಗ ಅರ್ಹತೆ ದರವಿದ್ದು, ಈ ನಗರ ಉದ್ಯೋಗ ಆಯ್ಕೆಗೆ ಮಹಿಳೆಯರಿಗೆ ಪ್ರಥಮ ಆಯ್ಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಆನ್‌ಲೈನ್‌ ಶಾಪಿಂಗ್‌ನಲ್ಲಿಯೂ ನಗರ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಶೇ 69 ರಷ್ಟು ಆನ್‌ಲೈನ್ ಖರೀದಿ ನಡೆದಿದೆ. ಈ ಪಟ್ಟಿಯಲ್ಲಿ ಮುಂಬೈ (ಶೇ 65) ಮತ್ತು ದೆಹಲಿ (ಶೇ 61) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ. ನಗರದ ಶೇ 44 ರಷ್ಟು ಮಂದಿ ತಂತ್ರಜ್ಞಾನ ಕೌಶಲ ಹೊಂದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು