ಶನಿವಾರ, ಜುಲೈ 24, 2021
27 °C
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ

‘ಆಸ್ತಿ ತೆರಿಗೆ: ಪ್ರತ್ಯೇಕ ಸ್ತರಗಳ ಘೋಷಣೆಗೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೈಗಾರಿಕೆಗಳಿಗೆ ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಯ ಪ್ರತ್ಯೇಕ ಸ್ತರಗಳ (ಸ್ಲ್ಯಾಬ್‌) ಘೋಷಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಗುರುವಾರ ಆಯೋಜಿಸಿದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಆಸ್ತಿ ತೆರಿಗೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಕೈಗಾರಿಕೋದ್ಯಮಿಗಳು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಈ ಬಗ್ಗೆ ನಗರಾಭಿವೃದ್ದಿ ಹಾಗೂ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಲವಾರು ಬಾರಿ ಸಭೆ ನಡೆಸಲಾಗಿದೆ. ಅಲ್ಲದೆ, ಈ ಬಾರಿಯ ಬಜೆಟ್ ಹಾಗೂ ನೂತನ ಕೈಗಾರಿಕಾ ನೀತಿಯಲ್ಲೂ ಪ್ರಸ್ತಾಪಿಸಲಾಗಿದೆ’ ಎಂದರು.

‘ಕೈಗಾರಿಕೆಗಳಿಗೆ ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಗೆ ನೂತನ ಸ್ಲ್ಯಾಬ್‌ ರಚಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ವಿಷಯದ ಬಗ್ಗೆ ನಗರಾಭಿವೃದ್ದಿ ಇಲಾಖೆ ವತಿಯಿಂದ ಸಚಿವ ಸಂಪುಟದ ಮುಂದೆ ಶೀಘ್ರದಲ್ಲೇ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಹೇಳಿದರು.

ವೈಜ್ಞಾನಿಕ ನಿರ್ಧಾರ ಅಗತ್ಯ: ‘ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಎಸ್‍ಎಸ್‍ಐಡಿಸಿ) ವತಿಯಿಂದ ಅಭಿವೃದ್ದಿಪಡಿಸಲಾದ ಕೈಗಾರಿಕಾ ಪ್ರದೇಶಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಮುನ್ನ ತೆರಿಗೆ ಸಂಗ್ರಹ ಮಾಡುವಂತಿಲ್ಲ. ಆದರೆ, ಕೆಲವು ಕಡೆ ಸ್ಥಳೀಯ ಸಂಸ್ಥೆಗಳು ತೆರಿಗೆ ಸಂಗ್ರಹಿಸುತ್ತಿವೆ. ಹಾಗಾಗಿ, ಹಳೆಯ ತೆರಿಗೆಯ ಬಗ್ಗೆ ಸ್ಪಷ್ಟವಾದ ವೈಜ್ಞಾನಿಕ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ’ ಎಂದು ಜಗದೀಶ್ ಶೆಟ್ಟರ್ ಅಭಿಮತ ವ್ಯಕ್ತಪಡಿಸಿದರು.

ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಮಾತನಾಡಿ, ‘ಕೈಗಾರಿಕೆಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾದ ಚರ್ಚೆ ನಡೆಸಲಾಗಿದೆ. ಟೌನ್‌ಶಿಪ್‌ ಹಾಗೂ ಕೈಗಾರಿಕೆಗಳ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲಾಗುವುದು’ ಎಂದು ಹೇಳಿದರು.

ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಅಜಯ್‌ ನಾಗಭೂಷಣ್‌, ನಿರ್ದೇಶಕಿ ಕಾವೇರಿ, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ. ಸುಂದರ್‌, ಹಿರಿಯ ಉಪಾಧ್ಯಕ್ಷ ಐ.ಎಸ್‌. ಪ್ರಸಾದ್‌ ಹಾಗೂ ಪದಾಧಿಕಾರಿಗಳು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.