ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ: 5 ತಿಂಗಳಲ್ಲಿ ₹2 ಸಾವಿರ ಕೋಟಿ ಸಂಗ್ರಹ

ಕೋವಿಡ್ 2ನೇ ಅಲೆ ನಡುವೆಯೂ ₹170 ಕೋಟಿ ಹೆಚ್ಚುವರಿ ಕರ ವಸೂಲಿ
Last Updated 2 ಸೆಪ್ಟೆಂಬರ್ 2021, 16:50 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಎರಡನೇ ಅಲೆ ನಡುವೆಯೂ ಕಳೆದ ಐದು ತಿಂಗಳಲ್ಲಿ ₹2,052 ಕೋಟಿ ಆಸ್ತಿ ತೆರಿಗೆಯನ್ನು ಬಿಬಿಎಂಪಿ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹170.77 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ.

ಲಾಕ್‌ಡೌನ್ ಇದ್ದರೂ ಆನ್‌ಲೈನ್ ಮೂಲಕ ಅಧಿಕ ಪ್ರಮಾಣದ ತೆರಿಗೆ ಪಾವತಿಯಾಗಿದೆ. ₹1,121 ಕೋಟಿ ಆನ್‌ಲೈನ್ ಮೂಲಕವೇ ಪಾವತಿಯಾಗಿದ್ದರೆ, ₹930 ಕೋಟಿ ಬ್ಯಾಂಕ್‌ ಖಾತೆಗೆ ಸಂದಾಯವಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಬೇಕು. ಅದಕ್ಕೂ ಜಗ್ಗದಿದ್ದರೆ ವಾರಂಟ್ ಜಾರಿ ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಕಂದಾಯ ವಿಭಾಗದ ಅಧಿಕಾರಿಗಳಿಗೆ ಈ ಹಿಂದೆ ತಾಕೀತು ಮಾಡಿದ್ದರು. ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಜಿಐಎಸ್ ಮತ್ತು ಡ್ರೋನ್ ಮೂಲಕ ಸರ್ವೆ ನಡೆಸುವಂತೆಯೂ ತಿಳಿಸಿದ್ದರು.

ಪ್ರತಿ ವಲಯದಲ್ಲೂ ಖಾತಾ ಮೇಳ ಏರ್ಪಡಿಸಿ ಆಸ್ತಿ ಮಾಲೀಕರಿಗೆ ನಿಗದಿತ ಸಮಯದಲ್ಲಿ ಖಾತಾ ದೊರೆಯುವಂತೆ ನೋಡಿಕೊಳ್ಳಬೇಕು. ಆಸ್ತಿ ತೆರಿಗೆ ಸಂಗ್ರಹ ಮಾಡುವ ವಿಷಯದಲ್ಲಿ ಯಾರೊಬ್ಬರೂ ಸಬೂಬು ಹೇಳದೆ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

‘ಆಸ್ತಿ ತೆರಿಗೆ ವಸೂಲಿ ಅಭಿಯಾನ ಆರಂಭಿಸಲಾಗಿದೆ.ಪ್ರತಿ ಬುಧವಾರ ಈ ಅಭಿಯಾನ ನಡೆಯುತ್ತಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ 3 ಲಕ್ಷಕ್ಕೂ ಹೆಚ್ಚು ಸುಸ್ತಿದಾರರ ಪೈಕಿ 1.41 ಲಕ್ಷ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅದರಿಂದಲೇ ₹120 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಎಸ್.ಬಸವರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮುಖ್ಯ ಆಯುಕ್ತರ ನಿರ್ದೇಶನದಂತೆ ಖಾತಾ ಮೇಳ ಮಾಡಿ 21 ಸಾವಿರ ಹೊಸ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಜೋಡಣೆ ಮಾಡಿಕೊಳ್ಳಲಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯದಲ್ಲಿ ಇನ್ನೂ ಹೆಚ್ಚಿನ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಬೇಕಿದೆ. ವಿಶೇಷ ಖಾತಾ ಮೇಳದ ಮೂಲಕ 1 ಲಕ್ಷದಷ್ಟು ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.

ಏಪ್ರಿಲ್ 1ರಿಂದ ಆ.31ರವರೆಗೆ ಸಂಗ್ರಹವಾಗಿರುವ ಆಸ್ತಿ ತೆರಿಗೆ (₹ ಕೋಟಿಗಳಲ್ಲಿ)

ವಲಯ; 2020–2021; 2021–2022

ಬೊಮ್ಮನಹಳ್ಳಿ; 186.94; 206.94

ದಾಸರಹಳ್ಳಿ; 51.98; 57.44

ಪೂರ್ವ; 361.19; 400.14

ಮಹದೇವಪುರ; 496.32; 516.69

ಆರ್‌.ಆರ್.ನಗರ; 127.99; 142.04

ದಕ್ಷಿಣ; 308.11; 331.71

ಪಶ್ಚಿಮ; 206.55; 219.87

ಯಲಹಂಕ; 141.68; 177.3

ಒಟ್ಟು; 1181.36; 2052.13

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT