ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಪಿಎ, ಎನ್‌ಐಎ ರದ್ದತಿಗೆ ಸಮಾನ ಮನಸ್ಕರ ವೇದಿಕೆ ಆಗ್ರಹ

ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಶ್ರದ್ಧಾಂಜಲಿ
Last Updated 14 ಜುಲೈ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರದ್ದಾಗಬೇಕು’ ಎಂದು ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆಯ ಸದಸ್ಯರು ನಗರದ ಮೌರ್ಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಫಾದರ್‌ ಸ್ಟ್ಯಾನ್ ಸ್ವಾಮಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಹಿರಿಯ ವಕೀಲ ಕೆ. ಬಾಲನ್‌, ‘ಯುಎಪಿಎಯು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಕಾಯ್ದೆಯಾಗಿ ಜಾರಿಗೆ ಬಂದಿತು. ಈ ಕಾಯ್ದೆಗೆ ಜಗತ್ತಿನಲ್ಲೆಲ್ಲೂ ಇಲ್ಲದಂಥ ಅತಿ ಕ್ರೂರವೂ, ಮಾನವೀಯತೆಗೆ ತದ್ವಿರುದ್ಧವೂ ಆದಂಥ ಮತ್ತಷ್ಟು ಕಲಂಗಳನ್ನು ಕಾಲಕಾಲಕ್ಕೆ ಸೇರಿಸಲಾಗಿದ್ದು, ಅದರ ನಿರಾತಂಕ ಜಾರಿಗಾಗಿ ಎನ್‌ಐಎ ಸಂಸ್ಥೆ
ಯನ್ನು ಸ್ಥಾಪಿಸಲಾಯಿತು’ ಎಂದು ಹೇಳಿದರು.

‘ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇವುಗಳ ವ್ಯಾಪ್ತಿ ಮತ್ತು ಅಧಿಕಾರಗಳನ್ನು ಮತ್ತಷ್ಟು ಹಿಗ್ಗಿಸಿ ಇವತ್ತಿನ ತೀವ್ರ ಸ್ವರೂಪಕ್ಕೆ ತಂದಿಟ್ಟಿದೆ. ದೇಶದ ಸಕಲ ಸಂಪತ್ತನ್ನೂ ದೊಡ್ಡ ಬಂಡವಾಳಶಾಹಿ, ಕಾರ್ಪೊರೇಟ್ ಶಕ್ತಿಗಳಿಗೆ ಬಿಡಿಗಾಸಿಗೆ ಧಾರೆ ಎರೆಯಲಾಗುತ್ತಿದೆ ಹಾಗೂ ಅದನ್ನು ವಿರೋಧಿಸುವ ಆದಿವಾಸಿ, ದಲಿತ, ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಪ್ರಜಾತಾಂತ್ರಿಕ ಸಂಘಟನೆ
ಗಳನ್ನು ಬಗ್ಗುಬಡಿಯುವುದಕ್ಕಾಗಿ ಈ ಕಾನೂನುಗಳನ್ನು ಬಳಸಿಕೊಳ್ಳಲಾಗು
ತ್ತಿದೆ’ ಎಂದು ದೂರಿದರು.

ಚಿಂತಕಿ ಬಿ.ಟಿ.ಲಲಿತಾ ನಾಯಕ್, ‘ಸ್ಟ್ಯಾನ್ ಸ್ವಾಮಿಯಂಥ ಧೀಮಂತ ಸಂತನ ಕೊಲೆಗೆ ಶ್ರದ್ಧಾಂಜಲಿ ಸಲ್ಲಿಸು
ವುದು ಮತ್ತು ಇಂತಹ ಕಾಯ್ದೆಗಳ ವಿರುದ್ಧ ಮಾತನಾಡುವುದು ಕೂಡ ದೇಶದ್ರೋಹ ಎಂಬಂಥ ಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಯುಎಪಿಎಯನ್ನು ಕೂಡಲೇ ರದ್ದು ಮಾಡುವಂತೆ ನಾವೆಲ್ಲರೂ ನಿರಂತರ ಹೋರಾಟ ಮಾಡದಿದ್ದರೆ ಈ ದೇಶದಲ್ಲಿ ಜನಸಾಮಾನ್ಯರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ’ ಎಂದರು.

ಚಿಂತಕ ಪ್ರೊ. ವೈ.ಜೆ.ರಾಜೇಂದ್ರ, ‘ವಿಚಾರಣೆಯಾಗಲಿ, ಜಾಮೀನಾಗಲಿ ಇಲ್ಲದೆ, ಚಿಕಿತ್ಸೆಗೆ ಅವಕಾಶವನ್ನೂ ನೀಡದೆ, ಸ್ವಾಮಿ ಅವರನ್ನು ಅಮಾನುಷ ಹಿಂಸೆಗೆ ಈಡುಮಾಡಿ ಕೊಂದಿದ್ದರಲ್ಲಿ ಎನ್‌ಐಎ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಕುರಿತು ಉನ್ನತ ವಿಚಾರಣೆ ನಡೆದು ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

‘ಈ ಹಕ್ಕೊತ್ತಾಯಗಳು ಈಡೇರುವವರೆಗೂ ರಾಜ್ಯದಾದ್ಯಂತಹೋರಾಟ ನಡೆಯಬೇಕಿದೆ. ಅದಕ್ಕಾಗಿ ಇನ್ನೂ ವಿಸ್ತೃತವಾದ ಸಮಾಲೋಚನಾ ಸಭೆ ನಡೆಸಿ, ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಸಮಾನ ಮನಸ್ಕ ಸಂಘಟನೆಗಳೂ ಒಗ್ಗೂಡಬೇಕಿದೆ’ ಎಂದು ವೇದಿಕೆಯ ಸಿರಿಮನೆ ನಾಗರಾಜ್ ಮನವಿ ಮಾಡಿದರು.

ಎಸ್. ಗೋಪಾಲ್, ಪ್ರೊ. ಎನ್.ವಿ. ನರಸಿಂಹಯ್ಯ ಮಾತನಾಡಿದರು. ಯುಎಪಿಎ ಅಡಿ ಬಂಧಿತರಾಗಿರುವ ಹೋರಾಟಗಾರರ ಬಿಡುಗಡೆಗೆ
ಒತ್ತಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT