ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
‘ಜೆಡಿಎಸ್–ಬಿಜೆಪಿ ಹಠಾವೋ, ಸಂವಿಧಾನ ಬಚಾವೋ’, ‘ಸಂವಿಧಾನ ವಿರೋಧಿ ರಾಜ್ಯಪಾಲರ ವಾಪಸ್ ಕರೆಸಿಕೊಳ್ಳಿ’, ‘ರಾಜ್ಯಪಾಲ ಹಠಾವೋ–ಕರ್ನಾಟಕ ಬಚಾವೋ’ ಎಂಬ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು.
‘ಶೋಷಿತ ಸಮುದಾಯ ಮತ್ತು ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರ ಏಳಿಗೆ ಸಹಿಸದೇ ಆರೋಪ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಯಾವುದೇ ಪ್ರಯತ್ನ ನಡೆಸಿದರೂ ಅವರನ್ನು ಅಧಿಕಾರದಿಂದ ಕೆಳಗಿಸಲು ಸಾಧ್ಯವಿಲ್ಲ’ ಎಂದು ಮುಖಂಡರು ಹೇಳಿದರು.
ಇದೇ ವೇಳೆ ವೇದಿಕೆ ಮೇಲೆ ಗಾಯನಕ್ಕೆ ಮಹಿಳೆಯರು ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕಿದರು. ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು ಹೆಗಲ ಮೇಲೆ ಕುರಿಮರಿ ಹೊತ್ತು ಕುಣಿದರು.
ರಾಜಭವನಕ್ಕೆ ಮುತ್ತಿಗೆ ಹಾಕಲು ಸ್ವಾತಂತ್ರ್ಯ ಉದ್ಯಾನದಿಂದ ಕಾಲ್ನಡಿಗೆಯಲ್ಲಿ ಹೊರಟ ಪ್ರತಿಭಟನಕಾರರನ್ನು ಮಾರ್ಗ ಮಧ್ಯದಲ್ಲಿಯೇ ಪೊಲೀಸರು ತಡೆದರು. ಬ್ಯಾರಿಕೇಡ್ ದಾಟಿ ಹೋಗಲು ಕೆಲವರು ಪ್ರಯತ್ನಿಸಿದರು. ಇನ್ನು ಕೆಲವರು ಬಸ್ ಚಾವಣಿ ಮೇಲೆ ಏರಿ ಕುಳಿತು ಘೋಷಣೆ ಕೂಗಿದರು. ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು. ಸ್ವಲ್ಪ ಹೊತ್ತಿನ ಬಳಿಕ ಬಿಡುಗಡೆ ಮಾಡಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ಮುಡಾ ಪ್ರಕರಣದಲ್ಲಿ ದೂರು ಬಂದ ತಕ್ಷಣವೇ ಪರಿಶೀಲನೆ ನಡೆಸದೆ ರಾಜ್ಯಪಾಲರು, ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದರು. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಅವರ ಪತ್ನಿ ಪಾರ್ವತಿ ಅವರಿಗೆ ಮುಡಾ ನಿವೇಶನ ಮಂಜೂರು ಮಾಡಿದೆ. ಪಾರ್ವತಿ ಅವರ ಮೇಲೆ ಆರೋಪ ಇರುವುದೇ ಹೊರತು ಸಿದ್ದರಾಮಯ್ಯ ಮೇಲೆ ಅಲ್ಲ. ಛಾಪಾ ಕಾಗದ ಹಗರಣದ ತೆಲಗಿ ತಪ್ಪು ಮಾಡಿದರೆ ಅವರ ಪತ್ನಿ ಮತ್ತು ಮಕ್ಕಳಿಗೆ ಶಿಕ್ಷೆ ನೀಡಲು ಸಾಧ್ಯವೆ’ ಎಂದು ಪ್ರಶ್ನಿಸಿದರು.
ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಸಂಚಾಲಕರಾದ ಮಾವಳ್ಳಿ ಶಂಕರ್, ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಆದರ್ಶ ಯಲ್ಲಪ್ಪ, ಅನಂತನಾಯ್ಕ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.