ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿರುವ ಬಡವರಿಗೆ ಭೂಮಿ, ವಸತಿ ಹಕ್ಕು ಕಲ್ಪಿಸಿ: ಸಮಿತಿಯಿಂದ ಸತ್ಯಾಗ್ರಹ

ಬರಿಹೊಟ್ಟೆ ಸತ್ಯಾಗ್ರಹದಲ್ಲಿ ಬಡವರು, ಆದಿವಾಸಿಗಳು ಭಾಗಿ
Published 14 ಆಗಸ್ಟ್ 2023, 16:01 IST
Last Updated 14 ಆಗಸ್ಟ್ 2023, 16:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿರುವ ಬಡವರಿಗೆ, ಆದಿವಾಸಿಗಳಿಗೆ ಭೂಮಿ ಮತ್ತು ವಸತಿ ಹಕ್ಕು ಕಲ್ಪಿಸಬೇಕು ಎಂದು ಆಗ್ರಹಿಸಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಕಾರ್ಯಕರ್ತರು ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಬರಿಹೊಟ್ಟೆ ಸತ್ಯಾಗ್ರಹ ನಡೆಸಿದರು. 

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಬರಿಹೊಟ್ಟೆ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಲೇಖಕಿ ವಿಜಯಾ, ‘ಬಡ ಜನರಿಗೆ ಭೂಮಿ ಮತ್ತು ನಿವೇಶನದ ಹಕ್ಕು ದೊರೆಯುವವರೆಗೂ ಹೋರಾಟ ಮುಂದುವರಿಸಲಾಗುವುದು. ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ಸಭೆ ಕರೆಯುವರೆಗೂ ಸತ್ಯಾಗ್ರಹ ಮುಂದುವರಿಸುತ್ತೇವೆ’ ಎಂದರು.

ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ‘ಭೂ ವಂಚಿತರಿಗೆ ಭೂಮಿ ಹಾಗೂ ಬಡವರಿಗೆ ವಸತಿ ಸೌಲಭ್ಯ ದೊರೆಯುವವರೆಗೂ ಈ ದೇಶಕ್ಕೆ ಪೂರ್ಣ ಸ್ವಾತಂತ್ರ್ಯ ದೊರೆಯದು. ಸ್ವಾತಂತ್ರ್ಯದ ಅರ್ಥ ಪರಿಪೂರ್ಣಗೊಳ್ಳಬೇಕಿದ್ದರೆ ಎಲ್ಲ ಬಡವರಿಗೂ ಭೂಮಿ ದೊರೆಯಬೇಕು. ಈ ಹಿಂದೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿತ್ತು. ಬಡವರನ್ನು ಒಕ್ಕಲೆಬ್ಬಿಸಬಾರದು ಮತ್ತು ಅವರಿಗೆ ಭೂಮಿ ಹಕ್ಕು ನೀಡಲು ಅರ್ಜಿ ನಮೂನೆ 57 ಅನ್ನು ಸಿದ್ಧಪಡಿಸಿ, ಭರ್ತಿ ಮಾಡಿಸಿಕೊಂಡಿತ್ತು. ಆದರೆ, ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲಿಲ್ಲ’ ಎಂದು ದೂರಿದರು. 

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ‘ರಾಜ್ಯದಲ್ಲಿ ಬಡವರಿಗೆ ಭೂಮಿ ಹಂಚಲು ಸಾಕಷ್ಟು ಭೂಮಿ ಇದೆ. ಕೇವಲ ಒಂದು ವಾರದಲ್ಲಿ ಬಡವರ ಭೂಮಿ, ವಸತಿ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ, ಬಡವರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ವಂಚಿಸಲಾಗುತ್ತಿದೆ’ ಎಂದರು.

‘ಸಂಘ ಪರಿವಾರದವರು ಭೂಮಿಗಾಗಿ ಯಾವುದೇ ಅರ್ಜಿ ಹಾಕಿರಲಿಲ್ಲ. ಆದರೂ, ರಾಜ್ಯದ ಹಲವೆಡೆ ಸಂಘ ಪರಿವಾರಕ್ಕೆ ಭೂಮಿ ನೀಡಲಾಗಿದೆ. ಐದಾರು ದಶಕಗಳಿಂದ ಬಡವರು ಭೂಮಿ ಮತ್ತು ವಸತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದರೂ ಭೂಮಿ ನೀಡುತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT