ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಆರ್‌ಆರ್‌ ಯೋಜನೆ ಸಂಪೂರ್ಣ ಖಾಸಗಿಗೆ: 50 ವರ್ಷ ಟೋಲ್‌ ಸಂಗ್ರಹ

50 ವರ್ಷ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡುವ ಪ್ರಸ್ತಾವ
Last Updated 16 ಸೆಪ್ಟೆಂಬರ್ 2021, 16:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶಿತ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ನಿರ್ಮಾಣ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಬಿಟ್ಟು ಸಂಪೂರ್ಣವಾಗಿ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತರುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಮುಖ್ಯಮಂತ್ರಿಯವರ ಪರವಾಗಿ ಉತ್ತರಿಸಿದ ಸಚಿವರು, ‘ಪಿಆರ್‌ಆರ್‌ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ₹ 6,000 ಕೋಟಿ ಅಗತ್ಯ. ರಸ್ತೆಗೆ ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಳ್ಳಲು ₹ 15,000 ಕೋಟಿ ಬೇಕಿದೆ. ಒಂದೇ ಯೋಜನೆಗೆ ₹ 21,000 ಕೋಟಿ ವೆಚ್ಚ ಮಾಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ’ ಎಂದರು.

ಬದಲಾದ ಪ್ರಸ್ತಾವದ ಪ್ರಕಾರ, ಭೂಸ್ವಾಧೀನ ಮತ್ತು ರಸ್ತೆ ನಿರ್ಮಾಣ ಎರಡಕ್ಕೂ ಖಾಸಗಿ ಕಂಪನಿಯೇ ಹೂಡಿಕೆ ಮಾಡಲಿದೆ. ವಿನ್ಯಾಸ, ನಿರ್ಮಾಣ, ಹೂಡಿಕೆ, ನಿರ್ವಹಣೆ ಮತ್ತು ಹಸ್ತಾಂತರ (ಡಿಬಿಎಫ್‌ಓಟಿ) ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯೋಚಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಹೂಡಿಕೆ ಮಾಡಿದ ಸಂಸ್ಥೆಗೆ 50 ವರ್ಷಗಳ ಅವಧಿಗೆ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡುವ ಪ್ರಸ್ತಾವ ಇದೆ ಎಂದು ತಿಳಿಸಿದರು.

ಪಿಆರ್‌ಆರ್‌ ಯೋಜನೆಗೆ ಜಾಗತಿಕ ಟೆಂಡರ್‌ ಆಹ್ವಾನಿಸಲಾಗಿತ್ತು. ಎರಡು ಸಂಸ್ಥೆಗಳು ಬಿಡ್‌ ಸಲ್ಲಿಸಿವೆ. ಪರಿಶೀಲನೆ ಮುಗಿದಿದ್ದು, ಕೊನೆಯ ಹಂತದ ಮಾತುಕತೆ ನಡೆದಿದೆ. ಎರಡರಿಂದ ನಾಲ್ಕು ತಿಂಗಳೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಖಾಸಗಿ ಕಂಪನಿಯು ಜಮೀನು ಮಾಲೀಕರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಪಾವತಿಸಲಿದ್ದು, ಕಾನೂನಿನ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾತ್ರ ಸರ್ಕಾರ ಮಾಡಲಿದೆ ಎಂದು ವಿವರಿಸಿದರು.

ಪಿಆರ್‌ಆರ್‌ ಭಾಗ–1ರ ನಿರ್ಮಾಣಕ್ಕೆ ಅಗತ್ಯವಿರುವ 1,810 ಎಕರೆ 18.5 ಗುಂಟೆ ವಿಸ್ತೀರ್ಣದ ಜಮೀನು ಸ್ವಾಧೀನಕ್ಕೆ 2007ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆ ಬಳಿ ನೈಸ್‌ ರಸ್ತೆಗೆ ಪೆರಿಫೆರಲ್‌ ವರ್ತುಲ ರಸ್ತೆಯನ್ನು ಜೋಡಿಸುವುದು, ಟೋಲ್ ಪ್ಲಾಜಾ ನಿರ್ಮಾಣ, ಕ್ಲೋವರ್‌ ಲೀಫ್‌, ಪೆಟ್ರೋನೆಟ್‌, ಸೀಗೆಹಳ್ಳಿ ಮಿಸ್ಸಿಂಗ್‌ ಲಿಂಕ್‌ ಸೇರಿದಂತೆ ಏಳು ಉದ್ದೇಶಗಳಿಗೆ 589 ಎಕರೆ 13.7 ಗುಂಟೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಅನುಮೋದನೆ ಬಾಕಿ: ಪಿಆರ್‌ಆರ್‌ ಯೋಜನೆಗೆ 2014ರಲ್ಲೇ ಪರಿಸರ ಇಲಾಖೆ ಅನುಮೋದನೆ ನೀಡಿತ್ತು. ಆದರೆ, ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಒಂದನೇ ಹಂತದ ಅರಣ್ಯ ಅನುಮೋದನೆಯನ್ನು ಪರಿಗಣಿಸದೆ ಅನುಮತಿ ನೀಡಲಾಗಿತ್ತು ಎಂಬ ಕಾರಣದಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪರಿಸರ ಅನುಮೋದನೆಯನ್ನು ರದ್ದುಗೊಳಿಸಿತ್ತು. ಹೊಸದಾಗಿ ಪರಿಸರ ಅನುಮೋದನೆ ಪಡೆಯುವಂತೆ ಸುಪ್ರೀಂಕೋರ್ಟ್‌ ಕೂಡ ಆದೇಶಿಸಿತ್ತು ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2020ರ ಆಗಸ್ಟ್‌ 18ರಂದು ನಡೆಸಿದ್ದ ಸಾರ್ವಜನಿಕ ಸಭೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಪುನಃ ವಿಚಾರಣೆ ನಡೆಸಿ, ಸಾರ್ವಜನಿಕ ಅಭಿಪ್ರಾಯ ಆಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಶೀಘ್ರದಲ್ಲಿ ಮತ್ತೊಮ್ಮೆ ದಿನಾಂಕ ನಿಗದಿಪಡಿಸಿ, ಅಹವಾಲು ಆಲಿಸಬೇಕಿದೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳೂ ಉದ್ದೇಶಿತ ರಸ್ತೆ ಮಾರ್ಗದಲ್ಲಿ ಬರುತ್ತವೆ. ಅಲ್ಲಿನ ಜಲಕಾಯಗಳಿಗೆ ಹಾನಿಯಾಗದಂತೆ ತಡೆಯಬೇಕಿದೆ. ಇದಕ್ಕಾಗಿ ಎತ್ತರಿಸಿದ ಮಾರ್ಗದಲ್ಲಿ ರಸ್ತೆ ನಿರ್ಮಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದರು.

ಡೀಮ್ಡ್‌ ಅರಣ್ಯ ಬಳಕೆ

ಡೀಮ್ಡ್‌ ಅರಣ್ಯದ ವ್ಯಾಪ್ತಿಯಲ್ಲಿರುವ 9 ಲಕ್ಷ ಎಕರೆ ಕಂದಾಯ ಜಮೀನಿನಲ್ಲಿ 6 ಲಕ್ಷ ಎಕರೆಯನ್ನು ಅರಣ್ಯದ ವ್ಯಾಪ್ತಿಯಿಂದ ಹೊರಗಿಡಲಾಗುತ್ತಿದೆ. ಅದರಲ್ಲಿ ಒಂದು ಲಕ್ಷ ಎಕರೆಯನ್ನು ಸರ್ಕಾರದ ಬಳಿಕ ಮೀಸಲು ಇರಿಸಿಕೊಳ್ಳಲಾಗುವುದು. ಸರ್ಕಾರಿ ಯೋಜನೆಗಳಿಗೆ ಅರಣ್ಯ ಜಮೀನು ಬಳಸಿಕೊಳ್ಳುವಾಗ ಡೀಮ್ಡ್‌ ಅರಣ್ಯದ ಜಮೀನನ್ನು ಪರ್ಯಾಯವಾಗಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT