ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಅಪರಾಧ ನಿಯಂತ್ರಣಕ್ಕೆ ಜನಜಾಗೃತಿಯೇ ಮದ್ದು

Published 30 ನವೆಂಬರ್ 2023, 23:17 IST
Last Updated 30 ನವೆಂಬರ್ 2023, 23:17 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಾದಂತೆಯೇ ಪ್ರತಿದಿನವೂ, ಪ್ರತಿಕ್ಷಣವೂ ಸೈಬರ್ ಅಪರಾಧದ ಅಪಾಯವೂ ಬೆಳೆಯುತ್ತಿದೆ. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆಯ ಕುರಿತು ಕಾರ್ಪೊರೇಟ್ ಕಂಪನಿಗಳು, ಸಾಂಸ್ಥಿಕ ಮಟ್ಟದಲ್ಲಿ ಮಾತ್ರವಲ್ಲ; ಮನೆಯಲ್ಲಿರುವ ಮಕ್ಕಳು, ಹಿರಿಯರು ಸೇರಿದಂತೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕಾಳಜಿ ವ್ಯಕ್ತವಾಯಿತು.

ಬೆಂಗಳೂರು ಟೆಕ್ ಸಮಿಟ್ 2023 ಇದರ 2ನೇ ದಿನವಾದ ಗುರುವಾರ ನಡೆದ ‘ನ್ಯಾವಿಗೇಟಿಂಗ್ ದ ಡಿಜಿಟಲ್ ಫ್ರಾಂಟಿಯರ್: ಇಂಟರ್ನೆಟ್ ಗವರ್ನೆನ್ಸ್, ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ವಾರ್‌ಫೇರ್’ ವಿಷಯ ಕುರಿತ ಗೋಷ್ಠಿಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಲಾಯಿತು.

ಇಂದು ಎಟಿಎಂ, ಕ್ರೆಡಿಟ್ ಕಾರ್ಡ್, ಟಿಕೆಟ್ ಕಾಯ್ದಿರಿಸುವಿಕೆ, ಇ-ಕಾಮರ್ಸ್ ಮುಂತಾದೆಡೆ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ ಮತ್ತು ಜನಸಾಮಾನ್ಯರೂ ಇದಕ್ಕೆ ತೆರೆದುಕೊಂಡಿದ್ದಾರೆ. ಪ್ರತಿದಿನವೂ ಹೊಸ ಬಳಕೆದಾರರು ಸೇರಿಕೊಳ್ಳುತ್ತಿದ್ದಾರೆ. ಜೊತೆಗೆ ಸೈಬರ್‌ವಾರ್ (ಅಪರಾಧಿ ಚಟುವಟಿಕೆ) ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಈ ಸೈಬರ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಇನ್‌ಮೊಬಿ ಕಂಪನಿಯ ಜಾಗತಿಕ ಹಿರಿಯ ಉಪಾಧ್ಯಕ್ಷೆ ಡಾ. ಸುಬಿ ಚತುರ್ವೇದಿ ಹೇಳಿದರು.

ಅಂತರ್ಜಾಲ ವ್ಯವಸ್ಥೆಯನ್ನು ಯಾರು ನಿಯಂತ್ರಿಸಬೇಕು ಎಂಬುದರ ಕುರಿತು ಜಾಗತಿಕ ಮಟ್ಟದಲ್ಲಿ ನೀತಿ ನಿರ್ಣಯವಾಗಬೇಕಿದೆ ಎಂದ ಅವರು, ಸೈಬರ್ ಅಪರಾಧದ ಪರಿಧಿ ಏನು ಎಂಬುದರ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಖಚಿತವಾಗಿ ನಿರ್ಣಯವಾಗಿಲ್ಲ. ಬುಡಾಪೆಸ್ಟ್ ಶೃಂಗದ ಬಳಿಕ ಈ ಕುರಿತು ಯಾವುದೇ ಜಾಗತಿಕ ಶೃಂಗ ನಡೆದಿಲ್ಲ ಎಂದು ಗಮನ ಸೆಳೆದರು.

‘ತಂತ್ರಜ್ಞಾನ ಅಭಿವೃದ್ಧಿ ಮತ್ತು ಬಳಕೆ ಹೆಚ್ಚಾದಂತೆ ಅಪಾಯದ ವಲಯವೂ ವಿಸ್ತರಣೆಯಾಗುತ್ತಿದೆ. ಅದಕ್ಕೆ ಪರಿಹಾರವೂ ನಮ್ಮಲ್ಲಿದೆ. ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸೈಬರ್ ಬೆದರಿಕೆಗಳಿಗಿರುವ ಪರಿಹಾರ ಜೊತೆ ಜೊತೆಯಾಗಿ ಸಾಗಬೇಕಿದೆ’ ಎಂದು ಹೇಳಿದ ಇಸ್ರೋದ ಮುಖ್ಯ ಮಾಹಿತಿ ಮತ್ತು ಭದ್ರತಾ ಅಧಿಕಾರಿ ರಾಜೀವ್ ಚೇತ್ವಾನಿ, ‘ಸೈಬರ್ ದಾಳಿಗಳ ನಿಯಂತ್ರಣಕ್ಕೆ ಅಂತರರಾಷ್ಟ್ರೀಯ ಮಟ್ಟದ ಸಹಯೋಗದ ಅಗತ್ಯವಿದೆ’ ಎಂದರು.

'ಗ್ಲೋಬಲ್ಸ್ ಇಂಕ್' ಸಿಇಒ ಸುಹಾಸ್ ಗೋಪಿನಾಥ್ ಮಾತನಾಡಿ, ಏಮ್ಸ್‌ನಂತಹ ಆಸ್ಪತ್ರೆಗಳಿಂದಲೇ ದತ್ತಾಂಶ ಕದಿಯಲಾಗುತ್ತಿದೆ, ವಿಮಾನಗಳ ಹಾರಾಟ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ಮಾಡಿ ವಿಮಾನಗಳ ದಿಕ್ಕನ್ನೇ ಬದಲಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ನೆಲದ ಮೇಲಿನ ಯುದ್ಧದಂತೆಯೇ ಸೈಬರ್ ಸಮರ ಕ್ಷೇತ್ರಕ್ಕೂ ಪ್ರಾಮುಖ್ಯತೆ ನೀಡಬೇಕಿದೆ’ ಎಂದರು.

ಭಾರತವು ತಂತ್ರಜ್ಞಾನ ಪರಿಣಿತರನ್ನು ಮಾತ್ರವೇ ಸೃಷ್ಟಿ ಮಾಡುತ್ತಿಲ್ಲ. ಬದಲಾಗಿ, ಭಾರತದಲ್ಲೇ ಗರಿಷ್ಠ ಸಂಖ್ಯೆಯ ಸೈಬರ್ ಕ್ರಿಮಿನಲ್‌ಗಳು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಸೈಬರ್‌ಏಜ್ ನಿರ್ದೇಶಕ, ನಿವೃತ್ತ ಗ್ರೂಪ್ ಕ್ಯಾಪ್ಟನ್ ಆನಂದ್ ನಾಯ್ಡು ಬೆಳಕು ಚೆಲ್ಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT