ಶುಕ್ರವಾರ, ಜುಲೈ 1, 2022
24 °C
ಕೊರೊನಾ ನಡುವೆಯೂ ಆ.18ರಂದು ಸಾರ್ವಜನಿಕ ಸಭೆ ನಿಗದಿ

ರಸ್ತೆಗೆ ಮರಗಳ ಬಲಿ: ಆನ್‌ಲೈನ್‌ನಲ್ಲೇ ಸಭೆ ನಡೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ರಸ್ತೆ ಮತ್ತು ಮರಗಳು–ಸಾಂದರ್ಭಿಕ ಚಿತ್ರ

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕಾಗಿ 33 ಸಾವಿರ ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕರೆದಿರುವ ಸಾರ್ವಜನಿಕರ ಸಭೆಯನ್ನು ಆನ್‌ಲೈನ್‌ನಲ್ಲಿಯೇ ನಡೆಸಬೇಕು ಎಂದು ಆಗ್ರಹಿಸಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. 

ಮರಗಳನ್ನು ಕಡಿಯುವುದಕ್ಕೆ ಹಾಗೂ 25 ಎಕರೆ ಮೀಸಲು ಅರಣ್ಯಪ್ರದೇಶವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅಥವಾ ಸಲಹೆ ನೀಡಲು ಸಾರ್ವಜನಿಕ ವಿಚಾರಣೆ ನಡೆಸಲು ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸುತ್ತೋಲೆ ಹೊರಡಿಸಿದ್ದು, ಸಭೆಗೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು.

ಅವಲಹಳ್ಳಿ ಗ್ರಾಮದ ಸಮೀಪದ ಸಂಗನಾಯಕನಹಳ್ಳಿರುವ ನಿತ್ಯೋತ್ಸವ ಕಲ್ಯಾಣಮಂಟಪದಲ್ಲಿ ಆ.18ರಂದು ಬೆಳಿಗ್ಗೆ 11ಕ್ಕೆ ಸಭೆ ನಿಗದಿ ಮಾಡಲಾಗಿದೆ. 

‘ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆ ನಡೆಸುವುದು ಸೂಕ್ತವಲ್ಲ. ಆದರೆ, ಮರಗಳನ್ನು ಕಡಿಯುವುದು ಮತ್ತು ಅರಣ್ಯಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯದಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯಲೇಬೇಕು. ಆನ್‌ಲೈನ್‌ ಮೂಲಕ ಅಭಿಪ್ರಾಯ ದಾಖಲಿಸಲು ವ್ಯವಸ್ಥೆ ಮಾಡಬೇಕು’ ಎಂದು ರಾಜೀವ್‌ ಚಂದ್ರಶೇಖರ್‌ ಪತ್ರದಲ್ಲಿ ತಿಳಿಸಿದ್ದಾರೆ. 

‘ಸಭೆಯ ಕುರಿತು ಸಾರ್ವಜನಿಕರಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಬೇಕು. ಸಭೆಯಲ್ಲಿ ಪಾಲ್ಗೊಳ್ಳಬಯಸುವವರಿಗೆ ಪೂರ್ವ ನೋಂದಣಿಗೆ ಅವಕಾಶ ಕೊಡಬೇಕು’ ಎಂದು ಅವರು ಕೋರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್‌ಪಿಸಿಬಿ ಅಧಿಕಾರಿಗಳು, ‘ಸಭೆಯ ದಿನಾಂಕವನ್ನು ನಿರ್ಧರಿಸುವುದು ಜಿಲ್ಲಾಧಿಕಾರಿ. ಸಭೆಯ ದಿನಾಂಕವನ್ನು ಬದಲಾಯಿಸುವ ಅಧಿಕಾರವೂ ಅವರಿಗೆ ಇದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು