ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯೂಡಿ: ನಿಯಮ ಮೀರಿ ₹375 ಕೋಟಿ ಬಿಲ್ ಪಾವತಿ

ಆದೇಶ ಹೊರಡಿಸದೇ ಎಲ್‌ಒಸಿ ಕೊಟ್ಟ ಕಾರ್ಯದರ್ಶಿ– ಆರೋಪ
Last Updated 18 ಜುಲೈ 2020, 21:59 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಜ್ಯೇಷ್ಠತಾ ನಿಯಮ ಕಡೆಗಣಿಸಿ ₹375 ಕೋಟಿ ಮೊತ್ತದ ಕಾಮಗಾರಿಗಳ ಬಾಕಿ ಹಣವನ್ನು ಪಾವತಿಸಲಾಗಿದ್ದು, ಇದರಿಂದ ಮೊದಲು ಕಾಮಗಾರಿ ಮುಗಿಸಿದವರಿಗೆ ಅನ್ಯಾಯವಾಗಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ.

ಆರ್ಥಿಕ ಸಂಕಷ್ಟದ ಕಾರಣಕ್ಕೆ ಮೂರು ತಿಂಗಳಿನಿಂದ ಕಾಮಗಾರಿಗಳ ಹಣ ಬಿಡುಗಡೆಯಾಗಿರಲಿಲ್ಲ. ಜುಲೈನಲ್ಲಿ ದೊಡ್ಡ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ‘ಪ್ರಭಾವಿ’ಗಳಿಗೆ ಹಣ ಬಿಡುಗಡೆಯ ಪತ್ರ (ಎಲ್‌ಒಸಿ) ನೀಡಲಾಗಿದೆ ಎಂಬುದು ಗುತ್ತಿಗೆದಾರರ ಅಳಲು.

ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರದ ಟೆಂಡರ್‌ಗಳಲ್ಲಿ ಕಾಮಗಾರಿ ಮುಗಿದು ಆರೇಳು ತಿಂಗಳ ಬಳಿಕವೇ ಹಣ ಬಿಡುಗಡೆ ಮಾಡುವುದು ರೂಢಿ. ಸರ್ಕಾರ ಹಣ ಬಿಡುಗಡೆ ಮಾಡಿದಾಗ ಒಟ್ಟು ಮೊತ್ತದ ಶೇ 80ರಷ್ಟನ್ನು ಜ್ಯೇಷ್ಠತಾ ಪಟ್ಟಿಯಲ್ಲಿರುವ ಮೊದಲಿಗರಿಗೆ ಹಾಗೂ ಶೇ 20ರಷ್ಟನ್ನು ಆದ್ಯತಾ ಗುತ್ತಿಗೆದಾರರಿಗೆ (ಕುಟುಂಬದವರು ಅನಾರೋಗ್ಯಕ್ಕೆ ತುತ್ತಾಗಿದ್ದರೆ, ಮದುವೆಯಂತ ಕಾರ್ಯಕ್ರಮಗಳಿದ್ದರೆ) ನೀಡುವ ನಿಯಮ ಜಾರಿಯಲ್ಲಿದೆ. ಈ ಬಾರಿ ಎಲ್‌ಒಸಿ ನೀಡುವಾಗ ಇದು ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ಗುತ್ತಿಗೆದಾರರು ದೂರಿದ್ದಾರೆ.

ಸರ್ಕಾರದಿಂದ ಹಣ ಬಿಡುಗಡೆ ಮಾಡಿದಾಗ ರಾಜ್ಯದಲ್ಲಿರುವ ನಾಲ್ಕು ವಲಯಗಳ ಪೈಕಿ ಯಾವ ವಲಯಗಳಲ್ಲಿ ಹೆಚ್ಚು ಮೊತ್ತದ ಬಾಕಿ ಬಿಲ್‌ಗಳು ಇವೆ ಎಂಬುದನ್ನು ಗಮನಿಸಲಾಗುತ್ತದೆ. ಬೆಂಗಳೂರು(ದಕ್ಷಿಣ), ಧಾರವಾಡ(ಉತ್ತರ), ಕಲಬುರ್ಗಿ(ಈಶಾನ್ಯ) ಹಾಗೂ ಶಿವಮೊಗ್ಗ(ಕೇಂದ್ರ)ಗಳಲ್ಲಿ ನಾಲ್ಕು ವಲಯಗಳಿದ್ದು, ಇಲ್ಲಿ ಮುಖ್ಯ ಎಂಜಿನಿಯರ್ ಶ್ರೇಣಿಯ ಅಧಿಕಾರಿ ಮುಖ್ಯಸ್ಥರಾಗಿದ್ದಾರೆ. ಇಲಾಖೆಗೆ ಅನುದಾನ ಬಿಡುಗಡೆಯಾದ ಕೂಡಲೇ ಕಾರ್ಯದರ್ಶಿಯವರು, ಆಯಾ ವಲಯಕ್ಕೆ ಅನುದಾನ ಹಂಚಿಕೆ ಮಾಡಿ ಆದೇಶ ಹೊರಡಿಸುತ್ತಾರೆ. ಅನುದಾನ ವಿತರಣೆಯು ಆಯಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌(ಕಾಮಗಾರಿಯ ಅಂದಾಜು ಮತ್ತು ಬಿಲ್ ಮಾಡುವವರು) ಜವಾಬ್ದಾರಿಯಲ್ಲಿ ನಡೆಯುವುದು ನಿಯಮ. ಇದೇ ಮೊದಲ ಬಾರಿಗೆ ಈ ನಿಯಮ ಮುರಿಯಲಾಗಿದೆ ಎಂದಿದ್ದಾರೆ.

‘ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿರುವ ಬಿ. ಗುರುಪ್ರಸಾದ್ ಅವರು, ಈ ಬಾರಿ ಅನುದಾನ ಹಂಚಿಕೆಯ ಆದೇಶವನ್ನೂ ಹೊರಡಿಸಿಲ್ಲ ಹಾಗೂ ಮುಖ್ಯ ಎಂಜಿನಿಯರ್ ಅಥವಾ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಜವಾಬ್ದಾರಿಯನ್ನು ನೀಡಿಲ್ಲ. ತಾವೇ ಎಲ್‌ಒಸಿ ನೀಡಿದ್ದಾರೆ‘ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಗುತ್ತಿಗೆದಾರರೊಬ್ಬರು ದೂರಿದರು.

‘ಅವರೇ ಎಲ್‌ಒಸಿ ನೀಡುವಾಗಲಾದರೂ ಬಾಕಿ ಬಿಲ್‌ ಎಷ್ಟಿದೆ ಹಾಗೂ ಜ್ಯೇಷ್ಠತೆಯನ್ನಾದರೂ ಗಮನಿಸಬೇಕಾಗಿತ್ತು. ಜ್ಯೇಷ್ಠತೆಯನ್ನೂ ಉಲ್ಲಂಘಿಸಲಾಗಿದೆ. ದೊಡ್ಡ ಜಿಲ್ಲೆಯಾಗಿರುವ ಮೈಸೂರಿಗೆ ₹12 ಕೋಟಿ ಕೊಟ್ಟಿದ್ದರೆ, ಮಂಡ್ಯಕ್ಕೆ ₹22 ಕೋಟಿ, ಚನ್ನಪಟ್ಟಣ (ರಾಮನಗರ)ಕ್ಕೆ ₹26 ಕೋಟಿ ನೀಡಿ ತಾರತಮ್ಯ ಮಾಡಲಾಗಿದೆ‘ ಎಂದು ಆಪಾದಿಸಿದರು.

‘ಗುಂಡಿ ಮುಚ್ಚುವುದು, ಗಿಡ ಕಡಿಯುವುದು, ಡಾಂಬರ್ ಹಾಕುವುದು ಸೇರಿಕೊಂಡಂತೆ ನಿರ್ವಹಣೆಗಾಗಿ ವಾರ್ಷಿಕ ಪ್ರತಿ ಕಿ.ಮೀಗೆ ಜಿಲ್ಲಾ ಮುಖ್ಯರಸ್ತೆಗೆ ₹80 ಸಾವಿರ, ರಾಜ್ಯ ಹೆದ್ದಾರಿಗೆ ₹1.20 ಲಕ್ಷ ನೀಡಲಾಗುತ್ತದೆ. ಇದರ ಒಟ್ಟು ಮೊತ್ತದ ಎಲ್‌ಒಸಿ ನೀಡುವ ಹೊಣೆಯನ್ನೂ ಕಾರ್ಯದರ್ಶಿಯೇ ಉಳಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

ಪ್ರತಿಕ್ರಿಯೆಗೆ ಅಲಭ್ಯ: ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗುರುಪ್ರಸಾದ್ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT