ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ರಾಗಿ ಬೆಳೆ ಹಾಳಾಗುವ ಸಂಭವ

ದಾಬಸ್‌ಪೇಟೆ: ರೈತರಿಗೆ ಹುಲ್ಲು ಕೊಳೆಯುವ ಆತಂಕ
Last Updated 14 ನವೆಂಬರ್ 2020, 20:58 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಶುಕ್ರವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಸೋಂಪುರ ಹಾಗೂ ಸುತ್ತಮುತ್ತ ಸುರಿದ ಭಾರಿ ಮಳೆಯಿಂದ ಸಾವಿರಾರು ಹೆಕ್ಟೇರ್‌ ರಾಗಿ ಬೆಳೆ ಹಾಳಾಗುವ ಸಂಭವ ಹೆಚ್ಚಾಗಿದೆ. ಇದರಿಂದ ರಾಗಿ ಇಳುವರಿ ಕುಸಿಯುವ, ರೈತರಿಗೆ ಹುಲ್ಲು ಕೊಳೆಯುವ ಆತಂಕ ಮೂಡಿಸಿದೆ.

ಸೋಂಪುರ ಹೋಬಳಿಯಲ್ಲಿ ಈ ಬಾರಿ ನಾಲ್ಕು ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ರಾಗಿ ಬಿತ್ತನೆಯಾಗಿದೆ. ಸಕಾಲಕ್ಕೆ ಬಂದ ಮಳೆಯಿಂದ ಉತ್ತಮವಾಗಿಯೇ ಬೆಳೆ ಬಂದಿತ್ತು. ಕೊಯ್ಲಿಗೆ ಬಂದಿರುವ ಈ ಹಂತದಲ್ಲಿ ಮಳೆ ಸುರಿದಿರುವುದರಿಂದ ರೈತ ವರ್ಗಕ್ಕೆ ತೊಂದರೆಯಾಗಿದೆ.

ಈಗಾಗಲೇ ನೂರಾರು ಹೆಕ್ಟೇರ್‌ಗಳಲ್ಲಿ ರಾಗಿ ಕೊಯ್ಲು ಆಗಿದ್ದು, ಮಳೆಯಿಂದ ನೆನೆದು ಹೋಗಿದೆ. ಹುಲ್ಲು ಕೊಳೆಯುವ ಹಾಗೂ ರಾಗಿ ಕಪ್ಪಾಗುವ ಆತಂಕ ರೈತರದು.

ಕೃಷಿ ಕಾರ್ಮಿಕರ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ರಾಗಿ ಪೈರು ಕೊಯ್ಲಿಗೆ ಯಂತ್ರ ಬಳಸಲಾಗುತ್ತಿದೆ. ಮಳೆ ಬಂದು ರಾಗಿ ಪೈರಿನ ದಿಂಡು ನೆನೆದು ಹೋಗಿರುವುದರಿಂದ ಅದನ್ನು ತಿರುವಿ ಹಾಕಲು ಮತ್ತೆ ಕಾರ್ಮಿಕರು ಹೆಚ್ಚು ಬೇಕು. ಇದು ರೈತರಿಗೆ ಹೊರೆಯಾಗಲಿದೆ.

ಕೊಯ್ಲಿಗೆ ಯಂತ್ರಗಳು ಇದ್ದರೂ ಅದನ್ನು ಬಣವೆಗೆ ಹಾಕಲು ಹಾಗೂ ಇನ್ನಿತರ ಕೆಲಸಗಳಿಗೆ ಕಾರ್ಮಿಕರು ಬೇಕು. ಈಗಾಗಲೇ ಕೂಲಿ ಕೂಡ ಹೆಚ್ಚು ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ನಿಡವಂದದ ಸೂರ್ಯಕುಮಾರ್‌.

ಈ ವರ್ಷ ಉತ್ತಮ ಮಳೆ ಬಂದು, ಬೆಳೆಯು ಚೆನ್ನಾಗಿಯೇ ಬಂದಿತ್ತು. ಆದರೆ ಕೊಯಿಲು ಮಾಡಿ ಕೂಡಿಟ್ಟುಕೊಳ್ಳುವವರೆಗೆ ಮಳೆ ಬೇಡವಾಗಿತ್ತು. ಜೋರಾಗಿ ಸುರಿದ ಮಳೆಯಿಂದ ರಾಗಿ, ಮೇವು ಎರಡೂ ಸಹ ಮನೆ ಸೇರುವ ನಂಬಿಕೆ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡರು ಮಾಕೇನಹಳ್ಳಿ ರೈತ ಗೋಪಾಲ್.

ಉತ್ತಮ ಮಳೆ: ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆ ಮಳೆಗಿಂಗ 99 ಮಿ.ಮೀ. ಅಧಿಕ ಮಳೆಯಾಗಿದೆ. ಬೆಳವಣಿಗೆಯ ವಿವಿಧ ಹಂತಗಳಾದ ಬಿತ್ತನೆ, ಬೆಳವಣಿಗೆ, ಕಾಳು ಕಟ್ಟುವುದು ಈ ಮೂರು ಹಂತಗಳಲ್ಲಿಯೂ ಮಳೆಯು ಸಮಸ್ಯೆ ಇಲ್ಲದೇ ಉತ್ತಮವಾಗಿ ಬಿದ್ದದ್ದರಿಂದ ರೈತರು ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿದ್ದರು. ತಾಲ್ಲೂಕಿನಾದ್ಯಂತ 12,003 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. 11,249 ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿತ್ತು. ಈ ಪೈಕಿ ನೆಲಮಂಗಲ ಕಸಬಾದಲ್ಲಿ 3900 ಹೆಕ್ಟೇರ್‌, ಸೋಂಪುರದಲ್ಲಿ 4010 ಹೆಕ್ಟೇರ್‌ ಹಾಗೂ ತ್ಯಾಮಗೊಂಡ್ಲುವಿನಲ್ಲಿ 3822 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT