ಶನಿವಾರ, ಜುಲೈ 31, 2021
27 °C
ಗಂಟಲು ದ್ರವ ಪರೀಕ್ಷಾ ವರದಿ ಬರುವ ಮುನ್ನವೇ ಕ್ವಾರಂಟೈನ್ ಮುಕ್ತಾಯ

ಕೊರೊನಾ: ರಾಗಿಗುಡ್ಡ ಕೊಳೆಗೇರಿಯಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜೆ.ಪಿ. ನಗರದ ರಾಗಿಗುಡ್ಡ ಕೊಳೆಗೇರಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದ್ದು, ಈ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ.

ದೆಹಲಿಯಿಂದ ರೈಲಿನಲ್ಲಿ ಬಂದಿದ್ದ ಒಂದೇ ಕುಟುಂಬದ ನಾಲ್ವರು ಏಳು ದಿನಗಳ ಕಾಲ ಹೆಬ್ಬಾಳದ ವಿದ್ಯಾರ್ಥಿ ನಿಲಯವೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇದ್ದರು. ಏಳು ದಿನಗಳ ನಂತರ ಮನೆಗೆ ಕಳುಹಿಸಬೇಕು ಎಂಬ ನಿಯಮದ ಪ್ರಕಾರ ಎಲ್ಲರನ್ನೂ ಬುಧವಾರ ಮನೆಗೆ ಕಳುಹಿಸಲಾಗಿದೆ. ತಾಯಿ ಮತ್ತು ಮಗ ರಾಗಿಗುಡ್ಡದ ಮನೆಯಲ್ಲಿ ಇದ್ದರೆ, ಮಗಳು ಪುಟ್ಟೇನಹಳ್ಳಿಯಲ್ಲಿ, ಮಹಿಳೆಯ ತಮ್ಮನ ಮಗಳು ಟ್ಯಾನರಿ ರಸ್ತೆಯಲ್ಲಿ ವಾಸವಿದ್ದರು. 

ಗಂಟಲು ದ್ರವದ ಪರೀಕ್ಷೆಯ ವರದಿ ಬರುವ ಮುನ್ನವೇ ಅವರನ್ನು ಮನೆಗೆ ಕಳುಹಿಸಲಾಗಿದೆ. ಮನೆಗೆ ಹೋಗಿ ಒಂದು ದಿನದ ನಂತರ ವರದಿ ಬಂದಿದ್ದು, ಸೋಂಕಿರುವುದು ದೃಢಪಟ್ಟಿದೆ. ನಾಲ್ಕೂ ಜನರನ್ನು ಈಗ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. 

ರಾಗಿಗುಡ್ಡ ಕೊಳೆಗೇರಿಯಲ್ಲಿ ಸಾವಿರಾರು ಮನೆಗಳಿದ್ದು, ಈ ಪ್ರದೇಶದಲ್ಲೂ ಕೊರೊನಾ ಸೋಂಕು ದೃಢಪ‍ಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

‘ಗಂಟಲು ದ್ರವದ ಪರೀಕ್ಷಾ ವರದಿ ಬರುವ ತನಕ ಕ್ವಾರಂಟೈನ್‌ನಲ್ಲೇ ಇಟ್ಟುಕೊಂಡಿದ್ದರೆ ಇಡೀ ಬಡಾವಣೆಯ ಜನ ಆತಂಕಪಡುವ ಸ್ಥಿತಿ ಬರುತ್ತಿರಲಿಲ್ಲ. ಅಧಿಕಾರಿಗಳು ಮಾಡುವ ತಪ್ಪಿಗೆ ಜನ ತೊಂದರೆಗೆ ಸಿಲುಕಬೇಕಾಗುತ್ತದೆ’ ಎಂಬುದು ಸ್ಥಳೀಯರ ಆಕ್ರೋಶ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಸೋಂಕಿತರಿಬ್ಬರು ಒಂದೇ ದಿನ ಮನೆಯಲ್ಲಿ ಇದ್ದು ಪ್ರಾಥಮಿಕ ಸಂಪರ್ಕಿತರು ಯಾರೂ ಇಲ್ಲ. ಇಡೀ ಪ್ರದೇಶಕ್ಕೆ ಹರಡಿರುವ ಸಾಧ್ಯತೆ ಇಲ್ಲ.

‘ರೈಲಿನಲ್ಲಿ ಬರುವಾಗ ಅವರಿಗೆ ಸೋಂಕು ಅಂಟಿದೆಯೋ ಅಥವಾ ಇವರಿಂದ ರೈಲಿನಲ್ಲಿ ಇದ್ದ ಇತರೆ ಪ್ರಯಾಣಿಕರಿಗೆ ಅಂಟಿದೆಯೋ ಗೊತ್ತಿಲ್ಲ. ಅವರೆಲ್ಲರನ್ನು ಹುಡುಕುವುದು ಹೇಗೆ’ ಎಂಬುದು ಅಧಿಕಾರಿಗಳ ಪ್ರಶ್ನೆ.

’ಬೆಂಗಳೂರಿಗೆ ಬಂದ ಬಳಿಕ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇದ್ದರು. ಅಲ್ಲಿ ಯಾರಿಗೆ ಹರಡಿದೆಯೋ ಗೊತ್ತಿಲ್ಲ. ರೈಲು ಮತ್ತು ವಿದ್ಯಾರ್ಥಿ ನಿಲಯದಲ್ಲಿ ಇವರ ಪ್ರಾಥಮಿಕ ಸಂಪರ್ಕಿತರು ಸಿಗಬಹುದು. ರಾಗಿಗುಡ್ಡದಲ್ಲಿ ಯಾರಿಗೂ ಸೋಂಕು ಹರಡುವ ಸಾಧ್ಯತೆ ಇಲ್ಲ’ ಎಂಬುದು ಅವರ ವಿಶ್ವಾಸ.

ಇಡೀ ಪ್ರದೇಶ ಸೀಲ್‌ಡೌನ್ ಇಲ್ಲ
‘ಕೊಳೆಗೇರಿಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಯಾರೂ ಇಲ್ಲ. ಹೀಗಾಗಿ, ಯಾರನ್ನೂ ಕ್ವಾರಂಟೈನ್ ಮಾಡುವುದಿಲ್ಲ ಮತ್ತು ಇಡೀ ಪ್ರದೇಶವನ್ನು ಸೀಲ್‌ಡೌನ್ ಮಾಡುವುದಿಲ್ಲ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

‘ಸೋಂಕಿತರು ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದರು. ಮನೆಗೆ ಬಂದ ಒಂದೇ ದಿನದಲ್ಲಿ ವರದಿ ಬಂದಿದೆ. ಹೀಗಾಗಿ, ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮನೆಯಿಂದ ಅವರು ಹೊರಗಡೆಯೂ ಹೋಗಿಲ್ಲ. ಇಡೀ ಪ್ರದೇಶಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪರಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಇಡೀ ಪ್ರದೇಶವನ್ನು ಸೀಲ್‌ಡೌನ್ ಮಾಡುವುದಿಲ್ಲ. ಅವರು ವಾಸವಿದ್ದ ಅಪಾರ್ಟ್‌ಮೆಂಟ್‌ ಮಾತ್ರ ಕಂಟೈನ್‌ಮೆಂಟ್ ಪ್ರದೇಶ. ಆ ಅಪಾರ್ಟ್‌ಮೆಂಟ್‌ನಿಂದ ಜನರು ಹೊರಬರದಂತೆ ಸೂಚನೆ ನೀಡಲಾಗಿದೆ. ಹೀಗಾಗಿ, ಇಡೀ ಕೊಳೆಗೇರಿಯ ನಿವಾಸಿಗಳು ಆತಂಕಪಡುವ ಅಗತ್ಯ ಇಲ್ಲ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು