ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡರಾತ್ರಿ ಮಳೆ: ಮನೆಗಳಿಗೆ ನುಗ್ಗಿದ ನೀರು, ರಸ್ತೆ ಜಲಾವೃತ, ಸಂಚಾರ ಅಸ್ತವ್ಯಸ್ತ

ಹಲವೆಡೆ ಉರುಳಿಬಿದ್ದ ಮರಗಳು
Last Updated 18 ಆಗಸ್ಟ್ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು:ನಗರದಲ್ಲಿ ಶನಿವಾರ ತಡರಾತ್ರಿ ಗಾಳಿ ಸಹಿತ ಜೋರು ಮಳೆ ಸುರಿದಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಕೆಲವೆಡೆ, ರಸ್ತೆ ಮೇಲೆಯೇ ಮರಗಳು ಹಾಗೂ ಕೊಂಬೆಗಳು ಬಿದ್ದಿದ್ದವು.ಹಲವೆಡೆ ಭಾನುವಾರ ರಾತ್ರಿಯೂ ಮಳೆ ಸುರಿಯಿತು.

ಶನಿವಾರದಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಅದು ಭಾನುವಾರವೂ ಮುಂದುವರಿಯಿತು. ಮಧ್ಯಾಹ್ನವೇ ಕೆಲವೆಡೆ ತುಂತುರು ಮಳೆ ಸುರಿಯಿತು. ಸಂಜೆ ವೇಳೆ ಕೆಲವೆಡೆ ಜೋರಾದ ಮಳೆ ಆಯಿತು.

ಯಶವಂತಪುರ, ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ ಹಾಗೂ ತುಮಕೂರು ರಸ್ತೆಯ ಹಲವೆಡೆ ಹೆಚ್ಚಿನ ಮಳೆ ಆಯಿತು. ಅಲ್ಲೆಲ್ಲ ರಸ್ತೆ ಮೇಲೆಯೇ ನೀರು ಹರಿಯಿತು. ಹರಿಯುವ ನೀರಿನಲ್ಲೇ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದ್ದರಿಂದ, ದಟ್ಟಣೆಯೂ ಕಂಡುಬಂತು. ಮೈಸೂರು ರಸ್ತೆ, ಕನಕಪುರ ರಸ್ತೆಯಲ್ಲೂ ಅದೇ ಪರಿಸ್ಥಿತಿ ಇತ್ತು.

ಗಾಳಿ ಸಹಿತ ಜೋರು ಮಳೆ

ಶನಿವಾರ ತಡರಾತ್ರಿ ಗಾಳಿ ಸಹಿತ ಜೋರು ಮಳೆ ಸುರಿದಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿತ್ತು. ಕೆಲವೆಡೆ, ರಸ್ತೆ ಮೇಲೆಯೇ ಮರಗಳು ಹಾಗೂ ಕೊಂಬೆಗಳು ಬಿದ್ದಿದ್ದವು. ಭಾನುವಾರ ನಸುಕಿನಿಂದಲೇ ಕಾರ್ಯಾಚರಣೆ ಆರಂಭಿಸಿದ ಬಿಬಿಎಂಪಿ ಸಿಬ್ಬಂದಿ, ಮಧ್ಯಾಹ್ನದವರೆಗೂ ಮರಗಳನ್ನು ತೆರವುಗೊಳಿಸಿದರು.

ಬೊಮ್ಮನಹಳ್ಳಿ ಬಳಿ ಸಿಂಗಸಂದ್ರ ವಾರ್ಡ್‌ನ ಸುಭಾಷನಗರದಲ್ಲಿ 5ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ನಿವಾಸಿಗಳು, ರಾತ್ರಿಯಿಡೀ ನೀರನ್ನು ಹೊರಗೆ ಹಾಕುವುದರಲ್ಲೇ ನಿರತರಾಗಿದ್ದು ಕಂಡುಬಂತು. ನಸುಕಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಯಿತು.

‘ವಿಜಯನಗರದ ಪೈಪ್‌ಲೈನ್ ರಸ್ತೆ ಹಾಗೂ ಇಂದಿರಾನಗರದ ಕ್ಲಬ್‌ ಬಳಿ ಮರಗಳು ಉರುಳಿಬಿದ್ದಿದ್ದವು. ನಿವಾಸಿಗಳಿಂದ ದೂರು ಬರುತ್ತಿದ್ದಂತೆ ಸ್ಥಳಕ್ಕೆ ಹೋದ ಸಿಬ್ಬಂದಿ ಮರಗಳನ್ನು ತೆರವು ಮಾಡಿದ್ದಾರೆ’ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರ ಅಧಿಕಾರಿಯೊಬ್ಬರು ತಿಳಿಸಿದರು.

ಹವಾಮಾನ ಇಲಾಖೆ ಅಧಿಕಾರಿಯೊಬ್ಬರು, ‘ನಗರದಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ ಭಾನುವಾರ ಬೆಳಿಗ್ಗೆ 8ರವರೆಗೆ 7.5 ಮಿಲಿ ಮೀಟರ್‌ನಿಂದ 35.5 ಮಿಲಿ ಮೀಟರ್ ಮಳೆ ಆಗಿದೆ’ ಎಂದು ತಿಳಿಸಿದರು. ‘ನಗರದೆಲ್ಲೆಡೆ ಮಳೆ ಸುರಿದಿದೆ. ಅದರ ಪ್ರಮಾಣ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ’ ಎಂದು ಹೇಳಿದರು.

ಜೋರಾಗಿದ್ದ ಮಳೆ ಸದ್ದು: ಶನಿವಾರ ಸಂಜೆ ಸಾಧಾರಣ ಮಳೆ ಸುರಿಯ ಲಾರಂಭಿಸಿತ್ತು. ಮಳೆಯ ಸದ್ದು ತಡರಾತ್ರಿ ಜೋರಾಗಿತ್ತು.ಮೈಸೂರು ರಸ್ತೆ, ಜಯನಗರ, ಬಸವೇಶ್ವರನಗರ, ರಾಜಾಜಿನಗರ, ಹೊಯ್ಸಳ ನಗರ, ನಾಯಂಡಹಳ್ಳಿ, ಚಾಮ ರಾಜಪೇಟೆ, ಅಟ್ಟೂರು, ಯಲಹಂಕ, ವಿದ್ಯಾರಣ್ಯಪುರ, ಶೆಟ್ಟಿಹಳ್ಳಿ, ಬಾಗಲ ಕುಂಟೆ, ಬೊಮ್ಮನ ಹಳ್ಳಿ,ಬಸವನಗುಡಿ, ಗಿರಿನಗರ, ಬನಶಂಕರಿ, ಹನುಮಂತ ನಗರ, ಶಾಂತಿನಗರ, ಅಶೋಕ ನಗರ, ರಾಜರಾಜೇಶ್ವರಿ ನಗರ, ವಿವೇಕನಗರ, ಶಾಂತಿನಗರ, ಸಂಪಂಗಿರಾಮನಗರ, ಗವಿಪುರ, ಚಂದಾಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆರ್ಭಟ ಹೆಚ್ಚಿತ್ತು. ಈ ಭಾಗದ ಹಲವೆಡೆ ಮರಗಳು ಉರುಳಿಬಿದ್ದಿದ್ದು, ಸಾರ್ವಜನಿಕರೇ ತೆರವು ಮಾಡಿದರು.

ಪ್ರಮುಖ ರಸ್ತೆಗಳ ಮೇಲೆಯೇ ನೀರು ಹರಿಯಿತು. ನೀರಿನಲ್ಲೇ ಚಾಲಕರು ವಾಹನಗಳನ್ನು ಚಲಾಯಿಸಿಕೊಂಡು ಹೋದರು. ದ್ವಿಚಕ್ರ ವಾಹನಗಳು,` ನೀರಿನಲ್ಲೇ ಕೆಟ್ಟು ನಿಂತಾಗ, ಅವುಗಳನ್ನು ತಳ್ಳಿಕೊಂಡು ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT