ಶುಕ್ರವಾರ, ನವೆಂಬರ್ 27, 2020
19 °C

ಹೊಸಕೆರೆಹಳ್ಳಿಯಲ್ಲಿ ಪ್ರವಾಹ ಸ್ಥಿತಿ; ಜೀವನ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಹೊಸಕೆರೆಹಳ್ಳಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಬಹುತೇಕ ನಿವಾಸಿಗಳ ಜೀವನ ತತ್ತರವಾಗಿದೆ. ಈ ಪ್ರದೇಶಗಳಿಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದಾಗ ನಿರಾಶ್ರಿತರ ಸಂಖ್ಯೆಯೇ ಹೆಚ್ಚಾಗಿ ಕಂಡಿತು.

ರಾಜಕಾಲುವೆ ಹರಿದು ಹೋಗಿರುವ ಪ್ರದೇಶದಲ್ಲಿರುವ ದತ್ತಾತ್ರೇಯ ಬಡಾವಣೆ, ಗುರುದತ್ತ ಬಡಾವಣೆ ಕೆಲ ಭಾಗ, ಪುಷ್ಪಗಿರಿ ಬಡಾವಣೆ ಹಾಗೂ ರಾಜರಾಜೇಶ್ವರಿ ನಗರದ ಕೆಲ ಭಾಗದಲ್ಲಿ ನಿನ್ನೆ ರಾತ್ರಿ ನೀರು ಹೊಳೆಯಂತೆ ನಿಂತುಕೊಂಡಿತ್ತು.

ತಡರಾತ್ರಿ ಮಳೆ ಕಡಿಮೆಯಾದ ಬಳಿಕವೇ ನೀರು ಸ್ವಲ್ಪ ಖಾಲಿ ಆಗಿದೆ. ಆದರೆ, ನೀರಿನ ಅವಶೇಷ ಹಾಗೇ ಉಳಿದಿದೆ. ನೀರಿನೊಂದಿಗೆ ಬಂದ ತ್ಯಾಜ್ಯ ಹಾಗೂ ಗಲೀಜು,ರಸ್ತೆ ಮತ್ತು ಮನೆಗಳಲ್ಲಿ ದುರ್ವಾಸನೆ ಬರುವಂತೆ ಮಾಡಿದೆ. ಈ ಭಾಗದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮನೆಗಳ ನಿವಾಸಿಗಳೆಲ್ಲರೂ ಇದೀಗ ಕಂಗಾಲಾಗಿದ್ದಾರೆ.

ಶನಿವಾರ ಸಂಜೆಯೂ ಮಳೆಯಾದರೆ, ಅವರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಈ ಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಆದರೆ, ಈ ಬಾರಿ ಮಳೆಗಾಲದಲ್ಲೇ ರಾಜಕಾಲುವೆ ಕಾಮಗಾರಿ ಆರಂಭಿಸಲಾಗಿದ್ದು, ಈ ಅವೈಜ್ಞಾನಿಕ ಕಾಮಗಾರಿಯಿಂದ ತಡೆಗೋಡೆ ಕುಸಿದು ಬಿದ್ದಿದೆ. ಇದರಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ದೂರಿದರು.

ದತ್ತಪೀಠ ಮಠ ಸಂಪೂರ್ಣ ನೀರಿನಿಂದ ಆವೃತ್ತಗೊಂಡಿದ್ದು, 9 ಅಡಿಯಷ್ಟು ನೀರು ನಿಂತಿದೆ. ಸುಮಾರು ನೂರಕ್ಕೂ ಹೆಚ್ಚು ಮನೆಗಳ ವಸ್ತುಗಳು ನೀರಿನಲ್ಲಿ ಮುಳುಗಿವೆ.  ಬಟ್ಟೆ, ದಿನಸಿ ಸಾಮಗ್ರಿ, ಟಿ.ವಿ, ಫ್ರಿಡ್ಜ್ ಸೇರಿ ಮನೆಯ ವಸ್ತುಗಳೆಲ್ಲವೂ ನೀರಿನಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣವಾಯಿತು. ಮಕ್ಕಳು ಹಾಗೂ ವೃದ್ಧರು ಇದ್ದ ಮನೆಗಳಲ್ಲಿ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸಿದರು.

ಮುಖ್ಯಮಂತ್ರಿ, ಸಚಿವರ ಭೇಟಿ: ದತ್ತಾತ್ರೇಯ ದೇವಸ್ಥಾನ ರಸ್ತೆ ಹಾಗೂ ಸುತ್ತಮುತ್ತಲ ಹಾನಿ ಪ್ರದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಆರ್. ಅಶೋಕ, ಶನಿವಾರ ಮಧ್ಯಾಹ್ನ ಭೇಟಿ ನೀಡಿದರು.

ಬಿಬಿಎಂಪಿ ಅಧಿಕಾರಿಗಳ ಜೊತೆಯಲ್ಲಿ ಓಡಾಡಿ ಮಾಹಿತಿ ಪಡೆದುಕೊಂಡರು. ಭೇಟಿಗೂ ಮುನ್ನ ಹಾನಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಕೆಲ ಸೂಚನೆಗಳು ನೀಡಿದರು.

ಆರ್. ಅಶೋಕ್, ‘ಆರು ತಿಂಗಳ ಹಿಂದೆಯೇ ರಾಜಕಾಲುವೆ ಕಾಮಗಾರಿ ಪ್ರಾರಂಭವಾಗಿತ್ತು. ಇದರಿಂದಲೇ ಈ ಸಮಸ್ಯೆ ಆಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ’ ಎಂದರು.

‘ಹಾನಿಗೊಳಗಾದವರಿಗೆ ಪರಿಹಾರ ನೀಡಲು ಚರ್ಚೆ ನಡೆದಿದೆ. ನೀರು ನುಗ್ಗಿರುವ ಮನೆಗಳ ನಿವಾಸಿಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು