ಮಂಗಳವಾರ, ಜನವರಿ 31, 2023
27 °C
ನೀರಿನಲ್ಲಿ ತೇಲಿ ಹೋದ ಹಾಸಿಗೆ, ಹೊದಿಕೆ

ಬೆಂಗಳೂರಿನಲ್ಲಿ ತುಂಬಿ ಹರಿದ ಕೆರೆ: ಮನೆಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಚಿಕ್ಕಬಾಣಾವರ ಕೆರೆ ಕೋಡಿ ತುಂಬಿ ಹರಿದು ನೂರಾರು ಮನೆಗಳು ಜಲಾವೃತಗೊಂಡವು.

ಗ್ರಾಮದ ಕೆಂಪಾಪುರ ಮುಖ್ಯರಸ್ತೆಯಲ್ಲಿದ್ದ ರಾಜಕಾಲುವೆ ಮತ್ತು ಕೋಡಿಹಳ್ಳ ತುಂಬಿ ಮನೆಗಳಿಗೆ ನೀರು ಹರಿದು ಗ್ರಾಮಸ್ಥರು ಭಯದಿಂದ ರಸ್ತೆಗೆ ಓಡಿ ಬಂದ ನೆರೆಹೊರೆಯವರ ಸಹಾಯ ಯಾಚಿಸಿದರು. ನೆಲದಲ್ಲಿ ಇಟ್ಟಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋದವು.

ವಿದ್ಯುತ್ ಸಂಪರ್ಕ ಕೂಡ ಕೈಕೊಟ್ಟಿದ್ದರಿಂದ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವಸ್ತುಗಳನ್ನು ಹಿಡಿಯಲು ಗ್ರಾಮಸ್ಥರು ಪರದಾಡಿದರು. ಹಾಸಿಗೆ, ಹೊದಿಕೆ, ಪಾತ್ರೆಗಳು ನೀರಿನಲ್ಲಿ ತೇಲಿ ಹೋದವು.

ಬುಧವಾರ ಮಧ್ಯಾಹ್ನದ ತನಕ ನೀರಿನ ಮಟ್ಟ ಇಳಿಯದೆ ಪರಿಚಯಸ್ಥರ, ನೆಂಟರ ಮನೆಗಳ ಅಶ್ರಯ ಪಡೆದರು. ಊಟ–ತಿಂಡಿಗೂ ಪರದಾಡಿದರು.

‘ಮಳೆ ಬಂದಾಗ 5 ವರ್ಷದ ಮಗು ಎತ್ತಿಕೊಂಡು ಓಡಿ ಬಂದೆ. ಎಲ್ಲಿ ನೋಡಿದರೂ ಅಲ್ಲಿ ನೀರು, ಭಯವೇ ಅಗಿತ್ತು. ಪ್ರವಾಹ ಏನಾದರೂ ಬಂತೇ ಎಂದು ಜೋರಾಗಿ ಕಿರುಚಿಕೊಂಡೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದೊಳಕ್ಕೆ ಓಡಿ ಹೋಗಿ ಆಶ್ರಯ ಪಡೆದುಕೊಂಡೆವು’ ಎಂದು ಕಾರ್ಮಿಕರಾದ ಭಾಗ್ಯಮ್ಮ ಕಣ್ಣೀರಿಟ್ಟರು.

‘ಗ್ರಾಮದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಒತ್ತುವರಿ ತೆರವುಗೊಳಿಸಿ ರಾಜಕಾಲುವೆಗೆ ತಡೆಗೊಡೆ ನಿರ್ಮಿಸಿದರೆ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ,  ಹತ್ತು ವರ್ಷಗಳಿಂದ ಗ್ರಾಮಸ್ಥರ ಈ ಬೇಡಿಕೆ ಈಡೇರಿಲ್ಲ’ ಎಂದು ಸ್ಥಳೀಯ ನಿವಾಸಿ ಮುತ್ತಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಕೆಂಪಾಪುರ ಮುಖ್ಯರಸ್ತೆಯಿಂದ ದ್ವಾರಕಾನಗರಕ್ಕೆ ಹೋಗುವ ರಾಜಕಾಲುವೆ ಮೇಲೆ ಅನೇಕ ಮಂದಿ ಅಕ್ರಮವಾಗಿ ಶೆಡ್ ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ’ ಎಂದು ಆರೋಪಿಸಿದರು.

ಪಟಾಕಿ ಗೋದಾಮಿಗೆ ನುಗ್ಗಿದ ನೀರು

ಕೆ.ಆರ್.ಪುರ: ಹೊರಮಾವು ವಾರ್ಡ್ ವ್ಯಾಪ್ತಿಯ ವಡ್ಡರಪಾಳ್ಯದ ಕಾವೇರಿನಗರದ ಶ್ರೀಸಾಯಿ ಬಡಾವಣೆ, ಗೆದ್ದಲಹಳ್ಳಿಯ ಎಸ್‌ಟಿಪಿ ಪಕ್ಕದ ಟ್ರಿನಿಟಿ ಫಾರ್ಚ್ಯೂನ್ ಬಡಾವಣೆಯ ಮನೆಗಳು ಮತ್ತು ಟಿ.ಸಿ. ಪಾಳ್ಯದ ಪಟಾಕಿ ಗೋದಾಮು ಸಂಪೂರ್ಣ ಜಲಾವೃತಗೊಂಡಿತ್ತು.

ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಮನೆಯಿಂದ ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ನಿವಾಸಿಗಳು ಇಡೀ ರಾತ್ರಿ ನೀರು ಹೊರ ಹಾಕಲು ಹರಸಾಹಸಪಟ್ಟರು.

‘ಬಾಣಸವಾಡಿ ಮತ್ತು ಕಲ್ಯಾಣನಗರದಿಂದ ಹರಿದು ಬರುವ ಮಳೆ ನೀರು ರಾಜಕಾಲುವೆ ಸೇರಿ ವಡ್ಡರಪಾಳ್ಯದ ಮೂಲಕ ಕಲ್ಕೆರೆ ಕಡೆಗೆ ಹರಿಯುತ್ತದೆ. ಶ್ರೀಸಾಯಿ ಬಡಾವಣೆ ಹಾದುಹೋಗುವ ರಾಜಕಾಲುವೆ ಚಿಕ್ಕದಿರುವುದರಿಂದ ಚರಂಡಿಗಳಿಂದ ಮಳೆ ನೀರು ಮನೆ ಸೇರುತ್ತಿದೆ. ಮಳೆ ಬಂದಾಗಲೆಲ್ಲಾ ಸಮಸ್ಯೆ ಉಂಟಾಗುತ್ತದೆ’ ಎಂದು ಸ್ಥಳೀಯ ನಿವಾಸಿ ರಮಣ ದೂರಿದರು.

‘ಬಡಾವಣೆಯ ಸುತ್ತಮುತ್ತಲಿನ ಇನ್ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ರಸ್ತೆಯ ಮೇಲೆ ನಾಲ್ಕೈದು ಅಡಿಯವರೆಗೆ ನೀರು ನಿಂತಿದೆ. ಸಮಸ್ಯೆಯ ಬಗ್ಗೆ ಬೆಳಿಗ್ಗೆ ಆರು ಗಂಟೆಗೆ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದರೆ ಹನ್ನೆರಡು ಗಂಟೆಗೆ ಬಂದರು. ಸಮಸ್ಯೆ ಅಲಿಸಲು ಬಂದವರು ಸುಮ್ಮನೆ ವಾಪಸ್ ತೆರಳಿದ್ದಾರೆ. ಮನೆಯಿಂದ ನೀರು ಆಚೆ ಹಾಕಿದರೂ ಮತ್ತೆ ಮತ್ತೆ ನೀರು ಮನೆಯೊಳಗೆ ನುಗ್ಗುತ್ತಿದೆ’ ಎಂದು ನಿವಾಸಿ ರೇಣುಕಾ ಅಳಲು ತೋಡಿಕೊಂಡರು.

‘ಮಳೆ ನೀರು ಪಟಾಕಿ ಗೋದಾಮಿಗೆ ನುಗ್ಗಿ ಸುಮಾರು ₹25 ಲಕ್ಷ ಮೌಲ್ಯದ ಪಟಾಕಿಗಳು ನೀರುಪಾಲಾಗಿವೆ’ ಎಂದು ಪಟಾಕಿ ಅಂಗಡಿ ಮಾಲೀಕ ಮದನಕುಮಾರ್ ತಿಳಿಸಿದರು.

ರೋಸಿ ಹೋದ ಜನರಿಂದ ಪ್ರತಿಭಟನೆ

ಪೀಣ್ಯ ದಾಸರಹಳ್ಳಿ: ರಾಜಕಾಲುವೆ ಉಕ್ಕಿ ಹರಿದು ಚೊಕ್ಕಸಂದ್ರ ವಾರ್ಡಿನ ರುಕ್ಮಿಣಿನಗರ, ಅರ್ಜುನ್ ಬೆಲ್ಮಾರ್ ಬಡಾವಣೆ, ವಿದ್ಯಾನಗರ ಸುತ್ತಮುತ್ತಲ ಮನೆಗಳಿಗೆ ನೀರು ನುಗ್ಗಿದ್ದು, ಸಮಸ್ಯೆ ಪರಿಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿಫಲರಾಗಿದ್ದಾರೆ ಎಂದು ಆರೋಪಿಸಿ ನಿವಾಸಿಗಳು ನೆಲಗದರನಹಳ್ಳಿ ರಸ್ತೆಯಲ್ಲಿ ವಾಹನಗಳ ತಡೆದು ಪ್ರತಿಭಟನೆ ನಡೆಸಿದರು.

‘ವಾಣಿಜ್ಯ ಮಳಿಗೆಗಳ ಮುಂಭಾಗ ಹಾದು ಹೋಗಿರುವ ರಾಜಕಾಲುವೆಗಳನ್ನು ಮುಚ್ಚಿರುವುದರಿಂದ ಕೆಳಭಾಗದಲ್ಲಿ ತ್ಯಾಜ್ಯ ತುಂಬಿಕೊಂಡು ಕೊಳಚೆ ನೀರು ಮನೆಗಳಿಗೆ ನುಗ್ಗಿ ಹಾನಿ ಉಂಟಾಗಿದೆ’ ಎಂದು 
ರುಕ್ಮಿಣಿ ನಗರ ನಿವಾಸಿ ಗೋವಿಂದಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ಇಪ್ಪತ್ತು ವರ್ಷಗಳಿಂದಲೂ ಮಳೆ ಹಾನಿ ಸಮಸ್ಯೆ ಇದ್ದರೂ ಪರಿಹಾರ ಸಿಕ್ಕಿಲ್ಲ. ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಈಗಲಾದರೂ ಎಚ್ಚೆತ್ತು ತ್ಯಾಜ್ಯ ಹಾಗೂ ಸ್ಲಾಬ್ ತೆರವುಗೊಳಿಸಿ ರಾಜಕಾಲುವೆ ಎತ್ತರಿಸಬೇಕು. ಇಲ್ಲವಾದರೆ ಮುಂದೆ ಭಾರೀ ಅನಾಹುತ ಸಂಭವಿಸುತ್ತದೆ’ ಎಂದು ಎಚ್ಚರಿಸಿದರು.

‘ಮಳೆ ಬಂದಾಗಲೆಲ್ಲಾ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಮಳೆ ಹಾನಿ ಉಂಟಾದ ಸಮಯದಲ್ಲಿ ನಾಮಕಾವಸ್ಥೆಗಷ್ಟೇ ಪರಿಶೀಲನೆ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಲಕ್ಷಾಂತರ ರೂಪಾಯಿ ನಷ್ಟವಾದರೂ ಪರಿಹಾರವನ್ನು ಕೊಡುತ್ತಿಲ್ಲ’ ಎಂದು ಸ್ಥಳೀಯರಾದ ತಮ್ಮಯ್ಯ ಆಚಾರ್ ದೂರಿದರು.

ಕಲಾನಗರ ಬಿಟಿಎಸ್ ಬಡಾವಣೆ, ಬಸಪ್ಪನಕಟ್ಟೆ ಹೆಗ್ಗನಹಳ್ಳಿ, ದೊಡ್ಡಣ್ಣ ಕೈಗಾರಿಕಾ ಪ್ರದೇಶ ಸಿಡೇದಹಳ್ಳಿ, ಗುಂಡಪ್ಪ ಬಡಾವಣೆ, ಜೋಡಿ ಬಾವಿ ರಸ್ತೆಯ ನೂರಾರು ಮನೆಗಳಿಗೆ ನೀರು ನುಗ್ಗಿದೆ.

‘ಮನೆಗಳಲ್ಲಿದ್ದ ಟಿವಿ, ಧಾನ್ಯ, ಪೀಠೋಪಕರಣ, ಹಾಸಿಗೆ, ಹೊದಿಕೆ ನೀರಿನಲ್ಲಿ ಮುಳುಗಿ ದೈನಂದಿನ ಜೀವನಕ್ಕೂ ಪರದಾಡುವಂತಾಗಿದೆ. ಇಡೀ ರಾತ್ರಿ ಮನೆಯ ಮಹಡಿ ಮೇಲೆಯೇ ಕಾಲ ಕಳೆಯುವಂತಾಯಿತು’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ: ಬೈರತಿ ಬಸವರಾಜ್

ಹೊರಮಾವು ವಾರ್ಡಿನ ವಡ್ಡರಪಾಳ್ಯದ ಕಾವೇರಿನಗರದ ಶ್ರೀಸಾಯಿ ಬಡಾವಣೆ, ಗೆದ್ದಲಹಳ್ಳಿಯ ಟ್ರಿನಿಟಿ ಫಾರ್ಚ್ಯೂನ್ ಬಡಾವಣೆ, ಗೆದ್ದಲಹಳ್ಳಿಯ ನೀರು ಸಂಸ್ಕರಣಾ ಘಟಕದ ಪ್ರದೇಶಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮತ್ತು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೈರತಿ ಬಸವರಾಜ್ ಮಾತನಾಡಿ, ‘ಮುಖ್ಯಮಂತ್ರಿ ಸೂಚನೆ ಮೇರೆಗೆ ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ನಗರದ ಶೇ 50ರಷ್ಟು ನೀರು ಹೆಬ್ಬಾಳ ಮೂಲಕ ಈ ಪ್ರದೇಶಗಳಿಗೆ ಬರುತ್ತಿರುವುದರಿಂದ ತೊಂದರೆ ಆಗುತ್ತಿದೆ. ಸಮಸ್ಯೆ ಸರಿಪಡಿಸಲು ತುರ್ತಾಗಿ ಕ್ರಮ ವಹಿಸಲು ಸೂಚಿಸಲಾಗಿದೆ’ ಎಂದರು.

‘ಈ ಭಾಗದಲ್ಲಿ ರಾಜಾಕಾಲುವೆಗಳು ಒತ್ತುವರಿಯಾಗಿರುವ ಕಾರಣ ಸಮಸ್ಯೆ ಬಿಗಡಾಯಿಸಿದೆ. ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಶಾಶ್ವತ ಪರಿಹಾರ ಕಲ್ಪಿಸಿಕೊಡಲು ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದರು.

15 ವಾರ್ಡ್‌ಗಳಲ್ಲಿ ಹೆಚ್ಚು ಮಳೆ

‘ನಗರದ 15 ವಾರ್ಡ್‌ಗಳಲ್ಲಿ 100 ರಿಂದ 140 ಮಿಲಿ ಮೀಟರ್ ಮಳೆಯಾಗಿದೆ. 20 ವಾರ್ಡ್‌ಗಳಲ್ಲಿ 50 ರಿಂದ 100 ಮಿಲಿ ಮೀಟರ್ ಮಳೆಯಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಹೇಳಿದರು.

‘ಮಹದೇವಪುರ, ಪೂರ್ವ, ದಾಸರಹಳ್ಳಿ ಹಾಗೂ ಯಲಹಂಕ ವಲಯಗಳಲ್ಲಿ ಮಳೆಯಿಂದ ಹೆಚ್ಚಿನ ಸಮಸ್ಯೆಯಾಗಿದೆ’ ಎಂದರು.

ಹೆಚ್ಚು ಮಳೆ ಎಲ್ಲಿ

ಮಳೆಯಾಗಿರುವ ಪ್ರದೇಶ; ಮಳೆ ಪ್ರಮಾಣ(ಮಿಲಿ ಮೀಟರ್‌ಗಳಲ್ಲಿ)

ಕುಶಾಲನಗರ (ಪೂರ್ವ ವಲಯ); 136

ಚೊಕ್ಕಸಂದ್ರ (ದಾಸರಹಳ್ಳಿ); 132

ಯಶವಂತಪುರ; 129.5

ಕೆ.ಆರ್.ಪುರ (ಬೆಂಗಳೂರು ಪೂರ್ವ)128.5

ಬ್ಯಾಟರಾಯನಪುರ (ಯಲಹಂಕ ವಲಯ);125.5

ವಿಶ್ವನಾಥ ನಾಗೇನಹಳ್ಳಿ (ಪೂರ್ವ ವಲಯ); 125

ಬಾಗಲಕುಂಟೆ (ದಾಸರಹಳ್ಳಿ ವಲಯ); 117.5

ರಾಮಮೂರ್ತಿನಗರ (ಮಹದೇವಪುರ ವಲಯ); 116.5

ನಾಗಪುರ (ಪಶ್ಚಿಮ ವಲಯ); 115.5

ದೊಮ್ಮಸಂದ್ರ (ಯಲಹಂಕ ವಲಯ); 114.5

ಪೀಣ್ಯ ಕೈಗಾರಿಕಾ ಪ್ರದೇಶ (ದಾಸರಹಳ್ಳಿ ವಲಯ); 109.5

ನಂದಿನ ಲೇಔಟ್‌ (ಪಶ್ಚಿಮ ವಲಯ); 102.5

ಹೊರಮಾವು (ಮಹದೇವಪುರ ವಲಯ); 101.5

ಕಾಡುಗೋಡಿ (ಮಹದೇವಪುರ ವಲಯ); 100.5

ಜಕ್ಕೂರು (ಯಲಹಂಕ ವಲಯ); 100

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.