ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ: ರೈತರ ವರ್ಷದ ಆದಾಯಕ್ಕೂ ಕುತ್ತು

Last Updated 24 ಮಾರ್ಚ್ 2022, 20:31 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಸೋಂಪುರ ಹೋಬಳಿಯುದ್ದಕ್ಕೂ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮಾವು, ಹುಣಸೆ, ಶೀಗೆ, ಹೊಂಗೆ ಫಸಲು ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಸೋಮವಾರ ರಾತ್ರಿ ಮಳೆ ಪ್ರಮಾಣ ಕಡಿಮೆ ಇತ್ತು. ಮಂಗಳವಾರ ಮೋಡ ಕವಿದ ವಾತಾವರಣ ಇತ್ತು. ಬುಧವಾರ ರಾತ್ರಿ ಆರಂಭವಾದ ಮಳೆ ರಾತ್ರಿಯೆಲ್ಲಾ ಸುರಿಯಿತು. ಗುರುವಾರ ಸಂಜೆ ಜಡಿ ಮಳೆಯಾಯಿತು.

ಮಳೆಯಿಂದ ಮಾವಿನ ಹೂ ಮತ್ತು ಪೀಚು, ಹುಣಸೆ ಹಣ್ಣುಗಳು ನೆಲಕ್ಕುರುಳಿವೆ. ಇದರಿಂದ ರೈತರ ಆದಾಯಕ್ಕೆ ಖೋತಾ ಆಗಿದೆ. ಒಕ್ಕಣೆ ಮಾಡಿದ ರಾಗಿ ಹುಲ್ಲಿನ ಮೆದೆಗಳು ನೀರು ತುಂಬಿಕೊಂಡು ಕೊಳೆತು ಹೋಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಕಳೆದ ವರ್ಷ ರೈತರು ರಾಗಿ, ಭತ್ತ, ತೊಗರಿ, ಹುರುಳಿ, ಇನ್ನಿತರಬೆಳೆಗಳ ಕೊಯ್ಲು ಮಾಡುವಾಗ, ಕೂಡಿಡುವಾಗ ಮತ್ತು ಒಕ್ಕಣೆ ಮಾಡುವಾಗ ಅಕಾಲಿಕ ಮಳೆ ಬಂದು ಫಸಲು ಹಾಳು ಮಾಡಿತ್ತು. ಹುಲ್ಲು, ರಾಗಿ ಕಪ್ಪಾದವು. ಇದೀಗ ಮತ್ತೆ ಮಳೆ
ಬಂದು ವರ್ಷದ ಆದಾಯದ ಮೂಲಗಳಾದ ಹುಣಸೆ, ಮಾವು, ಶೀಗೆಕಾಯಿ ಬೆಳೆಗಳನ್ನು ಹಾಳು ಮಾಡಿದೆ.

ಹೂವು, ಟೊಮೆಟೊ, ತರಕಾರಿ ಬೆಳೆಗಳಿಗೂ ಅಕಾಲಿಕ ಮಳೆಯಿಂದ ತೊಂದರೆಯಾಗಿದೆ. ಈ ಬಾರಿ ಮೊದಲೇ ಮಾವಿನ ಫಸಲು ಕಡಿಮೆ. ಈ ಮಧ್ಯೆ ಮಳೆ ಬಂದು ಇನ್ನಷ್ಟು ನಷ್ಟ ಉಂಟು ಮಾಡಿದೆ ಎನ್ನುತ್ತಾರೆ ರೈತರು.

ಶೀತ ಗಾಳಿ, ಮಳೆಯಿಂದಾಗಿ ಚಳಿಯ ವಾತಾವರಣ ಮೂಡಿದ್ದು, ಜನರು ಮನೆಯಿಂದ ಹೊರಬರಲು ಸಾಧ್ಯವಾಗದಂತಾಗಿದೆ. ಅಕಾಲಿಕ ಮಳೆಯಿಂದ ಶೀತ, ನೆಗಡಿ, ಕೆಮ್ಮು ಮೊದಲಾದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ ಅನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT