ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಮೆಟ್ರೊ ನಿಲ್ದಾಣಗಳಲ್ಲಿ ‘ಮಳೆ ನೀರು ಸಂಗ್ರಹ‘ಕ್ಕೆ ತಯಾರಿ

120 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್‌ ಷರತ್ತು
Published 25 ಮಾರ್ಚ್ 2024, 23:44 IST
Last Updated 25 ಮಾರ್ಚ್ 2024, 23:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ 40 ನಿಲ್ದಾಣಗಳಲ್ಲಿ ಮಳೆ ನೀರು ಸಂಗ್ರಹಿಸುವ ಹಾಗೂ ಇಂಗಿಸುವ ವಿಧಾನ ಅಳವಡಿಸಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ.

ಸದ್ಯ ಮೆಟ್ರೊ ಮಾರ್ಗಗಳ ಕೆಲವು ಕಡೆಗಳಲ್ಲಷ್ಟೇ ಈ ವ್ಯವಸ್ಥೆ ಇದ್ದು, ಅದನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸಿದೆ.

ನಗರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾದಾಗಲೇ, ‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ನಿಲ್ದಾಣಗಳಲ್ಲಿ (ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ) ಮಳೆ ನೀರು ಸಂಗ್ರಹ ಮತ್ತು ಇಂಗಿಸುವ ಪದ್ಧತಿಯನ್ನು ಅಳವಡಿಸಲಾಗಿತ್ತು. ಈ ಮಾರ್ಗದಲ್ಲಿ ಹಳಿಗಳ ಮೇಲೆ ಸುರಿಯುವ ಮಳೆ ನೀರನ್ನು ಪೈಪ್ ಮೂಲಕ ಕೆಳಗಿರುವ 3 ಮೂರು ಸಾವಿರ ಲೀಟರ್‌ನ ಟ್ಯಾಂಕ್‌ಗಳಿಗೆ ತುಂಬಿಸಲಾಗುತ್ತದೆ. ಟ್ಯಾಂಕ್‌ ತುಂಬಿದ ಮೇಲೆ ಹೆಚ್ಚಾದ ನೀರನ್ನು 18 ಅಡಿ ಆಳದ ಇಂಗುಗುಂಡಿಗೆ ಹರಿಸಲಾಗುತ್ತದೆ.

ಇದೇ ರೀತಿ ಇನ್ನೂ ಕೆಲವು ಭಾಗಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಆರಂಭಿಸಿದ್ದರೂ, ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಈಗ ನೇರಳೆ ಮಾರ್ಗದ 20 ನಿಲ್ದಾಣಗಳು, ಹಸಿರು ಮಾರ್ಗದ 20 ನಿಲ್ದಾಣಗಳು ಮತ್ತು ವಯಾಡಕ್ಟ್‌ ಪ್ರದೇಶದಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಯೋಜನೆ ರೂಪಿಸಿದೆ. ಅದಕ್ಕಾಗಿ ಟೆಂಡರ್‌ ಆಹ್ವಾನಿಸಿದೆ.

ಯೋಜನೆ ವಿವರ : 

₹ 65.11 ಲಕ್ಷ ಅಂದಾಜು ವೆಚ್ಚದ ಈ ಯೋಜನೆಗೆ ಬಿಡ್ ಮಾಡಲು ಏ.15 ಕೊನೇ ದಿನಾಂಕ. ಏ.16 ರಂದು ತಾಂತ್ರಿಕ ಟೆಂಡರ್ ಹಾಗೂ ಏ.17ರಂದು ಹಣಕಾಸು ಟೆಂಡರ್‌ ತೆರೆಯಲಾಗುತ್ತದೆ. ಬಿಡ್‌ ಮಾಡಿದವರು 120 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತು ವಿಧಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಎತ್ತರಿಸಿದ ಮಾರ್ಗದಲ್ಲಿ:

ಮೆಟ್ರೊ ಸಂಚರಿಸುವ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಮಳೆ ನೀರು ಸಂಗ್ರಹ ಮತ್ತು ಇಂಗಿಸುವ ವಿಧಾನವನ್ನು ಅಳವಡಿಸಲಾಗುತ್ತಿದೆ. ಪಿಲ್ಲರ್‌ಗಳಿಗೆ ಪೈಪ್‌ಲೈನ್‌ ಜೋಡಿಸಲಾಗುತ್ತದೆ. ಹಳಿಯ ಭಾಗದಲ್ಲಿ ಸಂಗ್ರಹವಾಗುವ ಮಳೆ ನೀರು ಪೈಪ್‌ ಮೂಲಕ ಕೆಳಕ್ಕೆ ಇಳಿಯುತ್ತದೆ. ಕೆಳಕ್ಕೆ ಇಳಿದ ನೀರನ್ನು ನೇರವಾಗಿ ಇಂಗು ಗುಂಡಿಗೆ ಹರಿಸಲಾಗುತ್ತದೆ. ‘ನಿಲ್ದಾಣಗಳಿರುವ ಕಡೆ ಮಳೆ ನೀರನ್ನು ಸಂಗ್ರಹಿಸಿ, ಹೆಚ್ಚಾದ ನೀರನ್ನು ಭೂಮಿಗೆ ಇಂಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ನಗರದಲ್ಲಿ ಅಂತರ್ಜಲ ವೃದ್ಧಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರ್ವ ಬೆಂಗಳೂರು–ಪಶ್ಚಿಮ ಬೆಂಗಳೂರನ್ನು ಸಂಪರ್ಕಿಸುವ ವೈಟ್‌ಫೀಲ್ಡ್‌ (ಕಾಡುಗೋಡಿ)– ಚಲ್ಲಘಟ್ಟ ಮಾರ್ಗವು 43.49 ಕಿ.ಮೀ. ದೂರ ಹೊಂದಿದೆ. ಉತ್ತರ ಬೆಂಗಳೂರು–ದಕ್ಷಿಣ ಬೆಂಗಳೂರು ಸಂಪರ್ಕದ ನಾಗಸಂದ್ರ–ರೇಷ್ಮೆ ಸಂಸ್ಥೆ ಮಾರ್ಗ 30.32 ಕಿ.ಮೀ. ಹೊಂದಿದೆ. ಎರಡು ಮಾರ್ಗಗಳು ಒಟ್ಟು 73.81 ಕಿ.ಮೀ. ಉದ್ದವಿದ್ದು, ಅದರಲ್ಲಿ ಭೂಗತ ಮಾರ್ಗವನ್ನು ಹೊರತುಪಡಿಸಿ ಉಳಿದ 58 ಕಿ.ಮೀ. ಮಾರ್ಗದಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

‘ಕೆರೆ ನೀರು ಕುಡಿಯಲು ಬಳಸಬೇಡಿ’

ಬೆಂಗಳೂರು: ಅಂತರ್ಜಲ ವೃದ್ಧಿಸಲು ನಗರದಲ್ಲಿ 14 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು
ತುಂಬಿಸಲಾಗುತ್ತಿದೆ. ಈ ಕೆರೆಗಳ ನೀರನ್ನು ಕುಡಿಯಲು, ಗೃಹ ಬಳಕೆಗೆ ಬಳಸಬಾರದು ಎಂದು ಜಲಮಂಡಳಿ ತಿಳಿಸಿದೆ.

ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಎರಡನೇ ಹಂತದಲ್ಲಿ ಸಂಸ್ಕರಿಸಿ, ನಗರದ ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಕೆರೆಗಳಿಗೆ ತುಂಬಿಸಲಾಗುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಮಾನದಂಡಗಳ ಆಧಾರದ ಮೇಲೆ ನೀರು ಸಂಸ್ಕರಿಸಲಾಗುತ್ತಿದೆ. ಈ ನೀರನ್ನು ನೇರವಾಗಿ ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಕೆರೆಯ ನೀರನ್ನು ಬಳಸಬಾರದು ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಿಸಲು ಜಲಮಂಡಳಿ ಮುಂದಾಗಿದೆ. ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣ ಮಾಡಬೇಕಿದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮಗಳನ್ನು ಜಲಮಂಡಳಿ ಕೈಗೊಳ್ಳುತ್ತಿದೆ’ ಎಂದು ಹೇಳಿದ್ದಾರೆ.

ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ನಾಯಂಡಹಳ್ಳಿ ಕೆರೆ, ಕೆಂಗೇರಿ ಎಸ್‌ಟಿಪಿ ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಡಳಿ ವತಿಯಿಂದ ಸಂಸ್ಕರಿಸಿ ನೀರನ್ನು ದುಬಾಸಿಪಾಳ್ಯ, ಹೊಸಕೆರೆಹಳ್ಳಿ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ ತುಂಬಿಸಲಾಗುವುದು  ಎಂದು ರಾಮ್‌ಪ್ರಸಾತ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT