ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗೆದಿದ್ದು ಆಯ್ತು, ದುರಸ್ತಿ ಯಾವಾಗ?

* ರಾಜಾರಾಜೇಶ್ವರಿನಗರ ವಾರ್ಡ್‌ ನಿವಾಸಿಗಳ ಗೋಳು * ಹದಗೆಟ್ಟ ರಸ್ತೆಯಲ್ಲಿ ಬೀಳೋದು ಏಳೋದು ಸಾಮಾನ್ಯ
Last Updated 1 ಅಕ್ಟೋಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳ ಹಿಂದಷ್ಟೇ ನಿರ್ಮಿಸಿದ್ದ ರಸ್ತೆಯಲ್ಲಿ ನಿವಾಸಿಗಳು ಖುಷಿಯಿಂದ ಓಡಾಡುತ್ತಿದ್ದರು. ವಾಹನಗಳ ಸಂಚಾರಕ್ಕೂ ಈ ರಸ್ತೆ ಹೇಳಿ ಮಾಡಿಸಿದಂತಿತ್ತು. ಈ ವರ್ಷದ ಆರಂಭದಲ್ಲಿ ಒಳಚರಂಡಿ ಪೈಪ್ ಅಳವಡಿಕೆ ಕಾಮಗಾರಿಗಾಗಿ ಇಡೀ ರಸ್ತೆಯನ್ನೇ ಅಗೆದು ಹಾಕಲಾಗಿದೆ. ಕೆಲಸ ಮುಗಿದು ತಿಂಗಳಾದರೂ ಈ ರಸ್ತೆಯ ದುರಸ್ತಿ ಮಾತ್ರ ಆಗಿಲ್ಲ.

ರಾಜರಾಜೇಶ್ವರಿನಗರ ವಿಧಾನಸಭಾ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿನಗರ ವಾರ್ಡ್‌– 160ರ ಕೆಲ ಪ್ರದೇಶಗಳ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ನಿವಾಸಿಗಳ ಖುಷಿಯನ್ನೇ ಕಿತ್ತುಕೊಂಡಿದೆ.

ಡಾಂಬರು ರಸ್ತೆ ಈಗ ಸಂಪೂರ್ಣವಾಗಿ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಆಯತಪ್ಪಿ ಬೀಳುವ ಭೀತಿಯಲ್ಲಿ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಅಕ್ಕ–ಪಕ್ಕದ ವಾರ್ಡ್‌ ನಿವಾಸಿಗಳು, ರಾಜರಾಜೇಶ್ವರಿನಗರ ವಾರ್ಡ್‌ ರಸ್ತೆಗಳ ಸಹವಾಸವೇ ಬೇಡವೆಂದು ದೂರವಾದರೂ ಪರ್ಯಾಯ ರಸ್ತೆಗಳನ್ನು ಬಳಸುತ್ತಿದ್ದಾರೆ.

ಬಿಇಎಂಎಲ್‌ ಬಡಾವಣೆ ಹಾಗೂ ಸುತ್ತಮುತ್ತ ಪ್ರದೇಶಗಳ ರಸ್ತೆಗಳಲ್ಲಿ ಸದ್ಯ ಯಾರೂ ಓಡಾಡದ ಸ್ಥಿತಿ ಇದೆ. ಈ ರಸ್ತೆಯಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಾರೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಯುವಿಹಾರಕ್ಕೆ ಹೋಗಲು ವೃದ್ಧರೂ ಹಿಂದೇಟು ಹಾಕುತ್ತಾರೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು, ಅಲ್ಲೆಲ್ಲ ಕೆಸರು ಇದೆ. ಆಕಸ್ಮಾತ್ ಆಯತಪ್ಪಿ ಬಿದ್ದು ಏನಾದರೂ ಅನಾಹುತ ಉಂಟಾದರೆ ಏನು ಮಾಡುವುದು ಎಂದು ಅವರೆಲ್ಲ ಚಿಂತಿತರಾಗಿದ್ದಾರೆ.

ರಾಜರಾಜೇಶ್ವರಿ ದೇವಸ್ಥಾನ ಸ್ಥಾಪನೆ ಬಳಿಕ ಈ ಪ್ರದೇಶದಲ್ಲಿ ಬಡಾವಣೆ ನಿರ್ಮಾಣವಾಯಿತು. ಅತೀ ವೇಗವಾಗಿ ಬೆಳೆಯುತ್ತಿರುವ ಈ ಬಡಾವಣೆಯಲ್ಲಿ ಬಿಇಎಂಎಲ್, ಬಿಎಚ್‌ಇಎಲ್ ಸೇರಿದಂತೆ ಪ್ರತಿಷ್ಠಿತ ಲೇಔಟ್‌ಗಳಿವೆ. ಜನಸಂಖ್ಯೆಗೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಒಳಚರಂಡಿ ಪೈಪ್‌ ಅಳವಡಿಕೆಗಾಗಿ ರಸ್ತೆಯನ್ನು ಅಗೆದು ವರ್ಷವೇ ಆಗಿದ್ದು, ಹಾಳಾಗಿರುವ ರಸ್ತೆಯ ದುರಸ್ತಿ ಯಾವಾಗ ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಆಸ್ಪತ್ರೆ ಸೇರುತ್ತಿರುವ ಜನ: ‘ಈ ಹಿಂದೆ ರಸ್ತೆ ಚೆನ್ನಾಗಿತ್ತು. ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ವೃದ್ಧರು ವಾಯುವಿಹಾರ ಮಾಡುತ್ತಿದ್ದರು. ಆದರೆ, ಈಗ ರಸ್ತೆ ಹಾಳಾಗಿದೆ. ಆಯತಪ್ಪಿ ಬಿದ್ದು ಗಾಯಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಅವರೆಲ್ಲ ಆಸ್ಪತ್ರೆಗೆ ಹೋಗಿ ಬರುವಂತಾಗಿದೆ’ ಎಂದುಬಿಇಎಂಎಲ್‌ ಬಡಾವಣೆಯ 10ನೇ ಮುಖ್ಯರಸ್ತೆಯ ನಿವಾಸಿ ಜಯರಾಮ್‌ ಹೇಳಿದರು.

‘ಆರಂಭದಿಂದ ಅಂತ್ಯದವರೆಗೂ ರಸ್ತೆಯನ್ನು ಅಗೆದು ಪೈಪ್ ಹಾಕಲಾಗಿದೆ. ಅವೈಜ್ಞಾನಿಕವಾಗಿ ರಸ್ತೆಯ ತಗ್ಗುಗಳನ್ನು ಮುಚ್ಚಿ, ರಸ್ತೆ ಮೇಲೆಯೇ ಮಣ್ಣು ಹರಡಿಕೊಳ್ಳುವಂತೆ ಮಾಡಲಾಗಿದೆ. ಈ ಮಣ್ಣು ರಸ್ತೆಯಲ್ಲೆಲ್ಲ ಚಿಲ್ಲಾಪಿಲ್ಲಿಯಾಗಿ ಬಿದ್ದಿದೆ. ತಗ್ಗುಗಳೂ ಹೆಚ್ಚಾಗಿವೆ’ ಎಂದರು.

ನಿವಾಸಿ ರಾಮಚಂದ್ರ, ‘ರಸ್ತೆಯಲ್ಲಿ ಸಂಚರಿಸುವ ವೇಳೆ ವಾಹನಗಳು ಆಯತಪ್ಪಿ ಬೀಳುತ್ತಿವೆ. ರಾತ್ರಿ ಹೊತ್ತು ಇಂಥ ಅವಘಡಗಳು ಸಾಮಾನ್ಯವಾಗಿಬಿಟ್ಟಿವೆ. ಸ್ಥಳೀಯ ನಿವಾಸಿಗಳೇ ವಾಹನ ಸವಾರರನ್ನು ಮೇಲಕ್ಕೆ ಎಬ್ಬಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ’ ಎಂದು ಹೇಳಿದರು.

ಸಮಸ್ಯೆ ಹೇಳಿ ಸಾಕಾಗಿದೆ: ‘ಬಡಾವಣೆಯಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಕಷ್ಟ ಗೊತ್ತಾಗುತ್ತದೆ. ತಮ್ಮ ಮನೆ ಮುಂದೆ ಉತ್ತಮ ರಸ್ತೆ ಮಾಡಿಕೊಂಡು ಓಡಾಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹೇಗೆ ತಾನೇ ತಿಳಿಯುತ್ತದೆ’ ಎಂದು ನಿವಾಸಿ ರಾಜೇಶ್ವರಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲಸ ಮುಗಿದ ಬಳಿಕ ವೈಜ್ಞಾನಿಕ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಕೋರಿದ್ದೆವು. ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳದಲ್ಲಿದ್ದ ಕೆಲಸಗಾರರು ಬೇಕಾಬಿಟ್ಟಿಯಾಗಿ ರಸ್ತೆ ಅಗೆದು ಮುಚ್ಚಿ ಹೋದರು’ ಎಂದು ಆರೋಪಿಸಿದರು.

‘ರಸ್ತೆ ದುರಸ್ತಿ ಮಾಡಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನಿರಂತರವಾಗಿ ಹೇಳುತ್ತಿದ್ದೇವೆ. ಹೇಳಿ ಹೇಳಿ ಸಾಕಾಗಿ ಹೋಗಿದೆ. ಯಾರೊಬ್ಬರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಒಬ್ಬರು ಇನ್ನೊಬ್ಬರ ಮೇಲೆ, ಇನ್ನೊಬ್ಬರು ಮತ್ತೊಬ್ಬರ ಮೇಲೆ ಜವಾಬ್ದಾರಿಯನ್ನು ಹಾಕಿ ನುಣುಚಿಕೊಳ್ಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಭೇಟಿಯನ್ನಾದರೂ ನೀಡಿ

‘ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು, ಒಮ್ಮೆಯಾದರೂ ನಮ್ಮ ರಸ್ತೆಗೆ ಭೇಟಿ ನೀಡಿ ವಾಸ್ತವ ಸ್ಥಿತಿ ತಿಳಿದುಕೊಳ್ಳಲಿ. ಅವಾಗಲೇ ಅವರಿಗೆ ನಮ್ಮ ಕಷ್ಟ ಏನು ಎಂಬುದು ತಿಳಿಯುತ್ತದೆ’ ಎಂದು ನಿವಾಸಿಗಳು ಹೇಳಿದರು.

‘ಮುನಿರತ್ನ ಅವರು ಈಗ ಅನರ್ಹ ಶಾಸಕ. ಅವರು ಅಧಿಕಾರದಲ್ಲಿದ್ದಾಗ ಸಮಸ್ಯೆ ಹೇಳಿದರೂ ಪರಿಹಾರ ಆಗಿರಲಿಲ್ಲ. ಪಾಲಿಕೆ ಸದಸ್ಯೆ ನಳಿನಿ ಮಂಜು ಅವರನ್ನು ಭೇಟಿಯಾಗಲು ನಾವೇ ಹೋಗಬೇಕು. ಅವರಿಂದಲೂ ಪರಿಹಾರ ಸಿಕ್ಕಿಲ್ಲ’ ಎಂದು ಆರೋಪಿಸಿದರು.

* ಮಾಡುವ ಕೆಲಸವನ್ನು ಚೆನ್ನಾಗಿ ಮಾಡಿದರೆ ರಸ್ತೆ ಹಾಳಾಗುತ್ತಿರಲಿಲ್ಲ. ಇಲಾಖೆಗಳ ನಡುವೆ ಸಮನ್ವಯ ಕೊರತೆ ಇದೆ. ಇದರಿಂದಲೇ ಯಾರೊಬ್ಬ ಅಧಿಕಾರಿಯೂ ರಸ್ತೆ ದುರಸ್ತಿಗೆ ಗಮನ ಹರಿಸುತ್ತಿಲ್ಲ

– ಎಂ. ಪ್ರಭಾಕರ್, ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT