ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 10 ಲಕ್ಷ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ

ಮೊದಲ ಬಾರಿ ಕೊಲೆಗೆ ಯತ್ನಿಸಿ ವಿಫಲ: ವಿಷದ ಚುಚ್ಚುಮದ್ದು ನೀಡಿ ಕೊಲೆ
Last Updated 8 ಆಗಸ್ಟ್ 2020, 16:51 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯ ಜವಾಬ್ದಾರಿ ಹಾಗೂ ಹಣಕಾಸಿನ ವ್ಯವಹಾರವನ್ನು ತನಗೆ ವಹಿಸಲಿಲ್ಲವೆಂಬ ಕಾರಣಕ್ಕೆ ಸಿಟ್ಟಾದ ಮಗನೊಬ್ಬ, ₹ 10 ಲಕ್ಷ ಸುಪಾರಿ ಕೊಟ್ಟು ತನ್ನ ತಂದೆಯನ್ನೇ ಕೊಲೆ ಮಾಡಿಸಿರುವ ಪ್ರಕರಣವನ್ನು ನಗರದ ಪೊಲೀಸರು ಭೇದಿಸಿದ್ದಾರೆ.

ಎಂ.ವಿ. ನಗರದ ನಿವಾಸಿ ಪನ್ನೀರ್ ಸೆಲ್ವಂ (52) ಎಂಬುವರನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ, ಅವರ ಮಗ ಪಿ. ರಾಜೇಶ್‌ ಕುಮಾರ್ (26) ಹಾಗೂ ಮೂವರು ಸುಪಾರಿ ಹಂತಕರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

‘ಶುಕ್ರವಾರ ಬೆಳಿಗ್ಗೆ 6.30ರ ಸುಮಾರಿಗೆ ಪನ್ನೀರ್ ಸೆಲ್ವಂ ಅವರು ವಿಜಿನಾಪುರದ ಸುಬ್ರಮಣಿ ದೇವಸ್ಥಾನಕ್ಕೆ ಬೈಕ್‌ನಲ್ಲಿ ಹೊರಟಿದ್ದರು. ಅವರನ್ನು ಅಡ್ಡಗಟ್ಟಿ ಕಾರಿನಲ್ಲಿ ಅಪಹರಿಸಿದ್ದ ದುಷ್ಕರ್ಮಿಗಳು, ಮಾರ್ಗಮಧ್ಯೆಯೇ ವಿಷದ ಚುಚ್ಚುಮದ್ದು ನೀಡಿ ಕೊಂದಿದ್ದರು. ನಂತರ, ಮೃತದೇಹವನ್ನು ಕೋಲಾರ ಜಿಲ್ಲೆಯ ವೇಮ್‌ಗಲ್ ಬಳಿಯ ನೀಲಗಿರಿ ತೋಪಿನಲ್ಲಿ ಎಸೆದಿದ್ದರು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ತಿಳಿಸಿದರು.

‘ಅಪಹರಣ ಸಂಬಂಧ ಪತ್ನಿ ಪಿ. ರಾಣಿ ದೂರು ನೀಡಿದ್ದರು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಕೆ.ಜಿ. ಸತೀಶ್ ನೇತೃತ್ವದ ತಂಡ, 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

‘ರಾಜೇಶ್‌ಕುಮಾರ್ ಜೊತೆಯಲ್ಲೇ, ಆತನಿಂದ ಸುಪಾರಿ ಪಡೆದಿದ್ದ ಪಾರ್ಥಿಬನ್ (29) ಹಾಗೂ ಸಹಚರರಾದ ಸ್ಟ್ಯಾನ್ಲಿ (25), ಆನಂದ್ (21) ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಕೆಲವರು ತಲೆಮರೆಸಿಕೊಂಡಿದ್ದಾರೆ’ ಎಂದೂ ಶರಣಪ್ಪ ಹೇಳಿದರು.

ಮುಂಗಡವಾಗಿ ₹ 3 ಲಕ್ಷ ಪಾವತಿ: ‘ತಮಿಳುನಾಡಿನ ತಿರುಪತ್ತೂರಿನ ಪನ್ನೀರ್, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಸ್ವಂತ ಉದ್ಯಮ ಆರಂಭಿಸಿದ್ದರು. ಇತ್ತೀಚೆಗೆ ಮಗ ರಾಜೇಶ್, ನಿವೇಶನ ಖರೀದಿಗೆ ಹಣ ಕೇಳಿದ್ದ. ಆದರೆ, ತಂದೆ ಕೊಟ್ಟಿರಲಿಲ್ಲ. ಮನೆ ಜವಾಬ್ದಾರಿಯನ್ನು ತನಗೆ ವಹಿಸುವಂತೆ ಮಗ ಪಟ್ಟು ಹಿಡಿದಿದ್ದ. ಈ ಸಂಬಂಧ ಜಗಳ ನಡೆದಿತ್ತು’ ಎಂದು ಪೊಲೀಸರು ಹೇಳಿದರು.

‘ತನ್ನ ತಂದೆ ಬೇರೆ ಮಹಿಳೆ ಜೊತೆ ಸಲುಗೆ ಹೊಂದಿದ್ದು, ಆಕೆಗೆ ಹಣ ಹಾಗೂ ಆಭರಣ ನೀಡುತ್ತಿದ್ದಾನೆಂದು ತಿಳಿದ ಮಗ ಕೊಲೆಗೆ ಸಂಚು ರೂಪಿಸಿದ್ದ. ಆರೋಪಿ ಪಾರ್ಥಿಬನ್‌ನನ್ನು ಸಂಪರ್ಕಿಸಿ, ತಂದೆಯನ್ನು ಕೊಲ್ಲಲು ₹10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ₹ 3 ಲಕ್ಷವನ್ನು ಮುಂಗಡವಾಗಿ ಪಾವತಿಸಿದ್ದ’ ಎಂದು ಪೊಲೀಸರು ತಿಳಿಸಿದರು.

ಮೊದಲ ಬಾರಿ ಕೊಲೆಗೆ ಯತ್ನಿಸಿ ವಿಫಲ: ‘ಮಾರ್ಚ್‌ 16ರಂದು ಜಯಂತಿ ಮುಖ್ಯರಸ್ತೆಯಲ್ಲಿ ಪನ್ನೀರ್‌ ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದರು. ಸ್ಥಳೀಯರು ಪನ್ನೀರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಿದ್ದರು. ಈ ಸಂಬಂಧ ಪ್ರಕರಣ ಸಹ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಕೊಲೆ ಯತ್ನ ವಿಫಲವಾಗಿದ್ದರಿಂದಾಗಿ ರಾಜೇಶ್, ‘ಮಾರಕಾಸ್ತ್ರಗಳಿಂದ ಹೊಡೆಯಬೇಡಿ. ಯಾರಿಗೂ ಅನುಮಾನ ಬಾರದಂತೆ ವಿಷದ ಚುಚ್ಚುಮದ್ದು ನೀಡಿ ಕೊಲೆ ಮಾಡಿ ಅರಣ್ಯದಲ್ಲಿ ಮೃತದೇಹ ಎಸೆದು ಬನ್ನಿ’ ಎಂದು ಆರೋಪಿಗಳಿಗೆ ಹೇಳಿದ್ದ.’

‘ತಮಿಳುನಾಡಿನ ಜಾಕ್‌ ಎಂಬಾತನಿಂದ ವಿಷದ ಮಾತ್ರೆ ತರಿಸಿಕೊಂಡಿದ್ದ ಆರೋಪಿಗಳು, ಅದನ್ನು ಕರಗಿಸಿ ಚುಚ್ಚುಮದ್ದು ಟ್ಯೂಬ್‌ನಲ್ಲಿ ತುಂಬಿದ್ದರು. ಅಪಹರಣಕ್ಕೆಂದು ಕಮ್ಮನಹಳ್ಳಿಯಲ್ಲಿರುವ ವೇಣು ಟ್ರಾವೆಲ್ಸ್‌ನಲ್ಲಿ ಕಾರು ಬಾಡಿಗೆ ಪಡೆದಿದ್ದರು. ದೇವಸ್ಥಾನಕ್ಕೆ ಹೊರಟಿದ್ದ ಮಾಹಿತಿಯನ್ನು ಮಗನಿಂದ ತಿಳಿದುಕೊಂಡ ಆರೋಪಿಗಳು, ಪನ್ನೀರ್ ಅವರನ್ನು ಅಡ್ಡಗಟ್ಟಿ ಅಪಹರಿಸಿ ಕೊಂದಿದ್ದರು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT