ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮರೆಯಾಯಿತು ಕಸದ ರಾಶಿ, ಕಂಗೊಳಿಸಿತು ರಂಗೊಲಿ!

Last Updated 1 ನವೆಂಬರ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ಕಸದ ರಾಶಿಯಿಂದಾಗಿ ಸದಾ ಗಬ್ಬು ನಾರುತ್ತಿದ್ದ ಪ್ರದೇಶಗಳವು. ಅವುಗಳ ಬಳಿ ಸಾಗುವಾಗ ಜನ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಗುರುವಾರ ಈ ತಾಣಗಳ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಕಸ ಮಾಯವಾಗಿ ಅಲ್ಲಿ ಬಣ್ಣ ಬಣ್ಣದ ರಂಗೋಲಿ ಕಂಗೊಳಿಸುತ್ತಿತ್ತು.

ಇಂತಹ ಮ್ಯಾಜಿಕ್‌ ಮಾಡಿದ್ದು ರಾಜ್ಯೋತ್ಸವದ ಅಂಗವಾಗಿ ಬಿಬಿಎಂಪಿ ಹಮ್ಮಿಕೊಂಡಿದ್ದ ‘ರಂಗೋಲಿ ಹಬ್ಬ’. ಕಸದ ರಾಶಿ ನಿರ್ಮೂಲನೆಗಾಗಿ ಗುರುವಾರ ಆರಂಭವಾದ ಈ ಅಭಿಯಾನ ಭಾನುವಾರದವರೆಗೂ ಮುಂದುವರಿಯಲಿದೆ. ಈ ನಾಲ್ಕು ದಿನಗಳಲ್ಲಿ ನಗರದಲ್ಲಿ ಕಸದ ರಾಶಿ ನಿರ್ಮಾಣವಾಗುವುದನ್ನು ಶಾಶ್ವತವಾಗಿ ತಡೆಯಬೇಕು ಎಂಬುದು ಬಿಬಿಎಂಪಿ ಉದ್ದೇಶ. ಈ ಅಭಿಯಾನಕ್ಕೆ ‘ಅಗ್ಲಿ ಇಂಡಿಯನ್ಸ್‌’ ಸಂಘಟನೆಯೂ ಜತೆ ಕೈ ಜೋಡಿಸಿದೆ.

‘ಇದೊಂದು ಉತ್ತಮ ಪ್ರಯತ್ನ. ಹಳೆಯ ಸಮಸ್ಯೆ ನೀಗಿಸಲು ರಂಗೊಲಿ ಒಂದು ಹೊಸ ಅಸ್ತ್ರ. ಕಸದ ರಾಶಿಯನ್ನು ಪೌರ ಕಾರ್ಮಿಕರು ಎಷ್ಟೇ ಸಲ ತೆರವು ಮಾಡಿದರೂ ಜನ ಮತ್ತೆ ಅಲ್ಲಿ ಕಸ ಹಾಕುತ್ತಾರೆ. ಆದರೆ, ಅದೇ ಜಾಗದಲ್ಲಿ ರಂಗೋಲಿ ಇದ್ದರೆ ಕಸ ಹಾಕಲು ಯಾರಿಗೂ ಮನಸ್ಸು ಬರುವುದಿಲ್ಲ. ರಂಗೋಲಿ ನೋಡುವಾಗಲೇ ದೈವಿಕ ಭಾವ ಮೂಡುತ್ತದೆ. ಕೆಲವು ದಿನಗಳ ಕಾಲ ಈ ಪರಿಪಾಠ ಮುಂದುವರಿಸಿದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಉಂಟಾಗುವುದು ತಪ್ಪಲಿದೆ’ ಎನ್ನುತ್ತಾರೆ ಅಗ್ಲಿ ಇಂಡಿಯನ್‌ ಸಂಸ್ಥೆಯ ಸ್ವಯಂಸೇವಕರೊಬ್ಬರು.

‘ಬಿಬಿಎಂಪಿ ಕಸವನ್ನು ತೆರವುಗೊಳಿಸಬಹುದು. ಆದರೆ, ಸಾರ್ವಜನಿಕ ತಾಣಗಳಲ್ಲಿ ಕಸ ಹಾಕಬಾರದು ಎಂಬ ಪ್ರಜ್ಞೆ ಜನರಲ್ಲೇ ಮೂಡಬೇಕು. ಬಿಬಿಎಂಪಿ ಆರಂಭಿಸಿರುವ ಈ ಅಭಿಯಾನಕ್ಕೆ ಜನ ಕೈಜೋಡಿಸಿದರೆ ನಮ್ಮ ನಗರದಲ್ಲಿ ಕೊಳಕು ತಾಣಗಳು ಖಂಡಿತಾ ಮಾಯ ಆಗಲಿವೆ’ ಎಂದು ಆಶಾವಾದ ವ್ಯಕ್ತಪಡಿಸಿದರು.

‘ಒಂದು ವಾರದಿಂದ ಬಿಬಿಎಂಪಿ ಹಾಗೂ ನಮ್ಮ ಸಂಸ್ಥೆ ಸೇರಿ 15 ವಾರ್ಡ್‌ಗಳಲ್ಲಿ ಅನೇಕ ಕಡೆ ರಂಗೋಲಿ ಹಾಕುವ ಪ್ರಯೋಗ ನಡೆಸಿದ್ದೆವು. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸುಮಾರು25 ಕಡೆ ಕಸ ಹಾಕುವುದು ಸಂಪೂರ್ಣ ನಿಂತಿದೆ. ನಗರದ ಹೃದಯ ಭಾಗದಲ್ಲಿರುವ ಗಾಂಧಿನಗರದಲ್ಲಿ ಎರಡು ಮೂರು ಕಡೆ ಯಾವಗಲೂ ಭಾರಿ ಕಸದ ರಾಶಿ ಇರುತ್ತಿತ್ತು. ಅಲ್ಲಿನ ಪರಿಸರ ಈಗ ಸ್ವಚ್ಛವಾಗಿದೆ’ ಎಂದು ಅವರು ವಿವರಿಸಿದರು.

ಬಿಬಿಎಂಪಿ ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌, ‘ನಮ್ಮ ಪೌರಕಾರ್ಮಿಕರು ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ನಗರದ ಕೇಂದ್ರ ಪ್ರದೇಶದಲ್ಲಿರುವ ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳ ಬಹುತೇಕ ವಾರ್ಡ್‌ಗಳಲ್ಲಿ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದರು.

‘ಕೆಲವು ಕಡೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಹಾಗಾಗಿ ಜನರು ಸಾರ್ವಜನಿಕ ಜಾಗದಲ್ಲಿ ಕಸ ಬಿಸಾಡುತ್ತಾರೆ. ಕೆಲವೆಡೆ ಖಾಲಿ ನಿವೇಶನವನ್ನೂ ಇದಕ್ಕೆ ಬಳಸುತ್ತಾರೆ. ಈ ವ್ಯವಸ್ಥೆಯಲ್ಲಿರುವ ಲೋಪವನ್ನು ಬಿಬಿಎಂಪಿ ಮೊದಲು ಸರಿಪಡಿಸಬೇಕು’ ಎಂದು ಗಂಗೇನಹಳ್ಳಿ ನಿವಾಸಿ ನಾಗೇಶ್‌ ಒತ್ತಾಯಿಸಿದರು.

‘ಪೌರ ಕಾರ್ಮಿಕರು ದಿನದಲ್ಲಿ ಒಂದು ಪ್ರದೇಶಕ್ಕೆ ಒಂದಕ್ಕಿಂತ ಹೆಚ್ಚು ಸಲ ಹೋಗಲು ಸಾಧ್ಯವಿಲ್ಲ. ನಾವು ಕಸದ ರಾಶಿ ಇರುವ 120 ಕಡೆ ಸ್ಮಾರ್ಟ್‌ ಬಿನ್‌ ಇಟ್ಟಿದ್ದೇವೆ. ಅಲ್ಲೂ ಕೆಲವರು ವಾಹನದಲ್ಲಿ ಬಂದು ಬೇಕಾಬಿಟ್ಟಿ ಕಸ ಬಿಸಾಡುತ್ತಾರೆ’ ಎನ್ನುತ್ತಾರೆ ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌.

ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿಗಳಿರುವ ಬಗ್ಗೆ ಹೈಕೋರ್ಟ್‌ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ನಗರವು ಕಸದ ರಾಶಿಗಳಿಂದ ಮುಕ್ತವಾಗಿರುವ ಬಗ್ಗೆ ಬಿಬಿಎಂಪಿ ಶನಿವಾರದೊಳಗೆ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಬೇಕಿದೆ.

ಕಸ ಬಿಸಾಡಲು ಬಳಸಿದ 100 ವಾಹನ ವಶ’

ಸಾರ್ವಜನಿಕ ಜಾಗದಲ್ಲಿ ಕಸ ಬಿಸಾಡಲು ಬಳಸಿದ 100 ವಾಹನಗಳನ್ನು ಬಿಬಿಎಂಪಿ ವಶಪಡಿಸಿಕೊಂಡಿದೆ.

‘ಕಸ ಬಿಸಾಡುವವರ ಮೇಲೆ ನಾವು ವಿಶೇಷ ನಿಗಾ ಇಟ್ಟಿದ್ದೇವೆ. ಕಸ ಹಾಕುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ₹ 200ರಿಂದ ₹ 300 ದಂಡ ವಿಧಿಸಿದ್ದೇವೆ’ ಎಂದು ಸರ್ಫರಾಜ್‌ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದುವರೆಗೆ ದಕ್ಷಿಣ, ದಾಸರಹಳ್ಳಿ, ಯಲಹಂಕ ಹಾಗೂ ಮಹದೇವಪುರ ವಲಯಗಳಲ್ಲಿ ಮೂರು ಪ್ರಹಾರಿ ವಾಹನಗಳು ಗಸ್ತು ತಿರುಗುತ್ತಿದ್ದವು. ಗುರುವಾರದಿಂದ ಎಂಟು ಪ್ರಹಾರಿ ವಾಹನಗಳು ಸಂಚರಿಸಲಿವೆ. ಶುಕ್ರವಾರದಿಂದ ಮಾರ್ಷಲ್‌ಗಳ ತಂಡ ವಾರ್ಡ್‌ಗಳಲ್ಲಿ ಪರಿವೀಕ್ಷಣೆ ನಡೆಸಲಿದೆ. ಕಸ ರಾಶಿ ಕಂಡುಬಂದರೆ ಆ ಬಗ್ಗೆ ನಮಗೆ ವರದಿ ನೀಡಲಿದ್ದಾರೆ. ಪ್ರತಿ ತಂಡದಲ್ಲೂ ಒಬ್ಬ ಚಾಲಕ ಹಾಗೂ ನಾಲ್ವರು ಮಾರ್ಷಲ್‌ಗಳು ಇರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT