ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ಬಗೋಡಿ ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್

Published 25 ಮೇ 2024, 16:24 IST
Last Updated 25 ಮೇ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಗೋಡಿ ಬಳಿಯ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ತೆಲುಗು ಚಿತ್ರನಟಿ ಹೇಮಾ ಸೇರಿದಂತೆ ಎಂಟು ಮಂದಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.

‘ಸನ್‌ಸೆಟ್‌ ಟು ಸನ್‌ರೈಸ್ ವಿಕ್ಟರಿ’ ಹೆಸರಿನಲ್ಲಿ ಮೇ 19ರಂದು ಪಾರ್ಟಿ ಆಯೋಜಿಸಲಾಗಿತ್ತು. ನಟಿ–ನಟಿಯರು, ಉದ್ಯಮಿಗಳು, ಅವರ ಮಕ್ಕಳು ಹಾಗೂ ಗಣ್ಯ ವ್ಯಕ್ತಿಗಳು ಸೇರಿದಂತೆ ಆಂಧ್ರಪ್ರದೇಶದ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

‘ದಾಳಿ ಸಂದರ್ಭದಲ್ಲಿ ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವರು ತಪ್ಪಿಸಿಕೊಂಡು ಹೋಗಿದ್ದರು. ಇದೀಗ, ಎಲ್ಲರನ್ನೂ ವಿಚಾರಣೆ ನಡೆಸಲಾಗುತ್ತಿದೆ. ನಟಿ ಹೇಮಾ ಸೇರಿ ಎಂಟು ಮಂದಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಹಾಜರಾಗದಿದ್ದರೆ, ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಸಿಸಿಬಿ ಪೊಲೀಸ್ ಮೂಲಗಳು ಹೇಳಿವೆ.

‘ಫಾರ್ಮ್‌ಹೌಸ್‌ನಲ್ಲಿದ್ದ ಕಾರ್‌ವೊಂದರ ಮೇಲೆ, ಆಂಧ್ರಪ್ರದೇಶದ ಸಚಿವ ಕಾಕನಿ ಗೋವರ್ಧನ್ ರೆಡ್ಡಿ ಹೆಸರಿನ ಪಾಸ್ ಅಂಟಿಸಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆಹಾಕಿದಾಗ, ಸಚಿವರ ಆಪ್ತನೊಬ್ಬ ಪಾಸ್ ಪಡೆದಿದ್ದ ಸಂಗತಿ ತಿಳಿಯಿತು. ಆಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬನನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಬಂಧಿತರ ಖಾತೆಗಳಲ್ಲಿ ಹಣ: ‘ರೇವ್ ಪಾರ್ಟಿ ಪ್ರಕರಣದಲ್ಲಿ ಆರೋಪಿಗಳಾದ ವಿ. ರಣಧೀರ್‌ (43), ವೈ.ಎಂ. ಅರುಣ್‌ಕುಮಾರ್‌ (35), ಎಲ್‌. ವಾಸು (35), ನಾಗಬಾಬು (32) ಹಾಗೂ ಮಹಮ್ಮದ್‌ ಅಬೂಬಬ್ಕರ್‌ ಸಿದ್ದಿಕ್ಕಿಯನ್ನು (29) ಈಗಾಗಲೇ ಬಂಧಿಸಲಾಗಿದೆ. ಇವರ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಇರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ಪಾರ್ಟಿ ಆಯೋಜನೆಯಿಂದ ಆರೋಪಿಗಳು ಹಣ ಗಳಿಸಿದ್ದರೆಂಬ ಅನುಮಾನವಿದೆ. ಹಣದ ವಹಿವಾಟು ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT