ಮಂಗಳವಾರ, ನವೆಂಬರ್ 24, 2020
21 °C
5 ಸಾವಿರ ಬಿಎಂಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ

ಬಿಎಂಟಿಸಿ: ಮಹಿಳಾ ಪ್ರಯಾಣಿಕರಿಗೆ ‘ರಿಯಲ್‌ ಟೈಮ್ ಆ್ಯಪ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಟಿಸಿ ಬಸ್ಸುಗಳು–ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸುವ ಮಹಿಳೆಯರ ಸುರಕ್ಷತೆಗಾಗಿ ‘ರಿಯಲ್‌ ಟೈಮ್‌’ ಮಾಹಿತಿ ಒದಗಿಸುವ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರದ ‘ನಿರ್ಭಯಾ’ ನಿಧಿಯನ್ನು ಬಳಸಿಕೊಂಡು ಈ ಯೋಜನೆ ಜಾರಿ ಮಾಡುತ್ತಿದ್ದು, ಸುಮಾರು 5 ಸಾವಿರ ಬಿಎಂಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ನಿರ್ಭಯಾ ನಿಧಿಯಡಿ ₹56 ಕೋಟಿ ಇದ್ದು, ₹40 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದರಡಿ ಮಹಿಳೆಯರ ಸುರಕ್ಷತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಶೇ 60 ರಷ್ಟು ರಾಜ್ಯ ಸರ್ಕಾರ ಶೇ 40 ಹಣ ಒದಗಿಸುತ್ತವೆ ಎಂದು ಹೇಳಿದರು.

ನಗರದ ಉದ್ದಗಲಕ್ಕೂ ಸಂಚರಿಸುವ ಬಸ್‌ಗಳ ವಿವರ, ಸೀಟಿನ ಲಭ್ಯತೆ ಬಗ್ಗೆ ಮಾಹಿತಿ, ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಪ್ಯಾನಿಕ್ ಬಟನ್‌ ಕೂಡಾ ಇರುತ್ತದೆ. ಒಟ್ಟು 500 ಬಸ್‌ ನಿಲ್ದಾಣಗಳಲ್ಲಿ (ಪಿಐಎಸ್) ಪ್ರದರ್ಶಕ ವ್ಯವಸ್ಥೆ, 3 ಸಾವಿರ ಮಹಿಳೆಯರಿಗೆ ತರಬೇತಿ ಯೋಜನೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರಮುಖ ತೀರ್ಮಾನಗಳು:

* ಚರ್ಚ್‌ ಸ್ಟ್ರೀಟ್‌ನ ಸೊಬಗು ಇನ್ನಷ್ಟು ಹೆಚ್ಚಿಸುವ ಯೋಜನೆಗೆ ಒಪ್ಪಿಗೆ. ಅಂತಾರಾಷ್ಟ್ರೀಯ ಮಟ್ಟದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕಾಗಿ ₹18.72 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ

*ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನಗಳನ್ನು ಗುತ್ತಿಗೆ ಪಡೆದಿರುವ ವಿವಿಧ ಸಂಘ ಸಂಸ್ಥೆಗಳು ಬಾಕಿ ಪಾವತಿಸಲು ಮುಂದಾದರೆ ಶೇ 50 ರಷ್ಟು ಬಡ್ಡಿ ಮನ್ನಾ ಮಾಡಲು ತೀರ್ಮಾನ

*ಬಿಬಿಎಂಪಿ ವ್ಯಾಪ್ತಿಯಲ್ಲಿರುವ 12 ಅಧಿಕ ವಾಹನ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಬದಲು ಬಿಬಿಎಂಪಿಯೇ ನಿರ್ವಹಿಸಲು ಕುರಿತು ಚರ್ಚೆ. ಬಿಬಿಎಂಪಿ ಮಾವಳ್ಳಿಪುರ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 1,000 ಟನ್‌ ಸಿಎನ್‌ಜಿ ಗ್ಯಾಸ್‌ ಉತ್ಪಾದಿಸುವ ಘಟಕ ಖಾಸಗಿಯವರಿಗೆ ನೀಡಲು ತೀರ್ಮಾನ

* ಬೆಂಗಳೂರು ಉಪನಗರ ರೈಲು ಯೋಜನೆಗೆ ಯೋಜನಾ ವೆಚ್ಚ ಶೇ 60 ರಷ್ಟು ಅಂದರೆ ₹7438 ಕೋಟಿಯನ್ನು ಸಾಲವಾಗಿ ಪಡೆಯಲು ನಿರ್ಧಾರ.

*ಬೆಂಗಳೂರು ವಿಶ್ವವಿದ್ಯಾಲಯದ ಯುವಿಸಿಇ ಪುರುಷರ ಹಾಸ್ಟೆಲ್‌ ಮತ್ತು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ₹30.58 ಕೋಟಿ. ಇದಕ್ಕೆ ರಾಜ್ಯ ಸರ್ಕಾರ ₹10 ಕೋಟಿ ನೀಡಲು ಒಪ್ಪಿಗೆ

* ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾಮಗಾರಿಗಳಿಗೆ ₹155 ಕೋಟಿ ಅಂದಾಜಿಗೆ ಒಪ್ಪಿಗೆ ನೀಡಿದ್ದು, ಟೆಂಡರ್‌ ಆಹ್ವಾನಕ್ಕೆ ಅನುಮತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು