ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಲು ಶಿಫಾರಸು

ನಗರ ಭೂಸಾರಿಗೆ ನಿರ್ದೇಶನಾಲಯದ ಶಿಫಾರಸು
Last Updated 6 ಸೆಪ್ಟೆಂಬರ್ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್ ಉದ್ಯಾನದೊಳಗೆ ಮೋಟಾರು ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ನಗರ ಭೂಸಾರಿಗೆ ನಿರ್ದೇಶನಾಲಯವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ ಅವರಿಗೆ ಪತ್ರ ಬರೆದಿರುವ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರಾದ ವಿ.ಮಂಜುಳಾ, ‘ಕಬ್ಬನ್‌ ಉದ್ಯಾನದಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಕಬ್ಬನ್‌ ಉದ್ಯಾನವನ್ನು ವಾಹನ ಸಂಚಾರ ರಹಿತ ವಲಯವನ್ನಾಗಿ ಮುಂದುವರಿಸುವಂತೆ ನಾಗರಿಕ ಸಂಘ ಸಂಸ್ಥೆಗಳು ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿವೆ’ ಎಂದು ತಿಳಿಸಿದ್ದಾರೆ.

ವಿಚಾರವನ್ನು ನಿರ್ದೇಶನಾಲಯವು ವಿಸ್ತೃತವಾಗಿ ಪರಿಶೀಲಿಸಿದೆ. ಕಬ್ಬನ್‌ ಉದ್ಯಾನ ನಗರದ ಹೃದಯ ಭಾಗದಲ್ಲಿರುವ ವಿಶಾಲ ಹಸಿರು ಪ್ರದೇಶವಾಗಿದೆ. ಈ ಅತ್ಯುನ್ನತ ಪರಿಸರವನ್ನು ಕಾಪಾಡಬೇಕಿದೆ. ಜಗತ್ತಿನ ಹಲವು ರಾಷ್ಟ್ರಗಳ ಪ್ರಮುಖ ನಗರಗಳಲ್ಲಿನ ಇಂತಹ ಪ್ರದೇಶಗಳನ್ನು ಪಾದಚಾರಿಗಳು ಮತ್ತು ಸೈಕಲ್‌ ಸವಾರರ ಬಳಕೆಗೆ ಮೀಸಲಿಡಲಾಗಿದೆ. ಕಬ್ಬನ್‌ ಉದ್ಯಾನವು ಬೆಂಗಳೂರಿನಲ್ಲಿ ಪಾದಚಾರಿಗಳು ಮತ್ತು ಸೈಕಲ್‌ ಬಳಕೆದಾರರಿಗೆ ಮೀಸಲಿಡಬಹುದಾದ ಪ್ರದೇಶವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಾದಚಾರಿಗಳು ಮತ್ತು ಸೈಕಲ್‌ ಬಳಕೆದಾರರು ತ್ವರಿತವಾಗಿ ಗಮ್ಯ ತಲುಪಲು ಕಬ್ಬನ್‌ ಉದ್ಯಾನದ ಮಾರ್ಗವಾಗಿ ಹಾದುಹೋಗಲು ಅವಕಾಶ ಕಲ್ಪಿಸಬಹುದು. ಮೋಟಾರು ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳಿವೆ. ಆದ್ದರಿಂದ ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ಯಾವುದೇ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಮಂಜುಳಾ ಪತ್ರದಲ್ಲಿ ತಿಳಿಸಿದ್ದಾರೆ.

ಕಬ್ಬನ್‌ ಉದ್ಯಾನವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದು ಉತ್ತಮ ನಿರ್ಧಾರವಾಗುವುದಿಲ್ಲ. ಅಲ್ಲಿ ವಾಹನಗಳ ನಿಲುಗಡೆಗೂ ಅನುಮತಿ ನೀಡಬಾರದು ಎಂಬ ಅಭಿಪ್ರಾಯವನ್ನು ನಗರ ಭೂಸಾರಿಗೆ ನಿರ್ದೇಶನಾಲಯ ಮಂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT