ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಆಧಾರಿತ ಪೌರತ್ವ ಪರಿಕಲ್ಪನೆ ಅಪಾಯಕಾರಿ

ಸಿಎಎ – ಕರಾಳ ಮುಖ ಬಿಚ್ಚಿಟ್ಟ ‘ಭಾರತೀಯ ಪ್ರಜೆ ಯಾರು?’ ಗೋಷ್ಠಿ
Last Updated 23 ಫೆಬ್ರುವರಿ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಧರ್ಮಆಧಾರಿತ ಪೌರತ್ವ ಪರಿಕಲ್ಪನೆಯೇ ಅಪಾಯಕಾರಿ. ಈಗಾಗಲೇ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಪ್ರಜೆಗಳನ್ನು ನಡೆಸಿಕೊಂಡ ರೀತಿಯಲ್ಲೇ ಅದರ ದುಷ್ಪರಿಣಾಮ ಕಾಣಿಸಿದೆ. ಇನ್ನಷ್ಟು ತೀವ್ರಗೊಳ್ಳುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ’ ಎಂಬ ಅಭಿಪ್ರಾಯ ಬಿಐಸಿ ಹಬ್ಬದಲ್ಲಿ ವ್ಯಕ್ತವಾಯಿತು.

ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತೀಯ ಪ್ರಜೆ ಯಾರು?’ ಎಂಬ ವಿಷಯದ ಮೇಲೆ ನಡೆದ ಸಂವಾದದಲ್ಲಿ ಪಾಲ್ಗೊಂಡ ವಕೀಲರಾದ ಅಶ್ವಿನಿ ಓಬಳೇಶ್‌, ಮಾಳವಿಕಾ ಪ್ರಸಾದ್‌ ಹಾಗೂ ಪತ್ರಕರ್ತ ಸುದೀಪ್ತೊ ಮೊಂಡಲ್‌ ಅವರು ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಇನ್ನೊಂದು ಬದಿಯ ಕರಾಳ ಮುಖವನ್ನು ತೋರಿಸುವ ಪ್ರಯತ್ನ ಮಾಡಿದರು.

‘ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನಗಳಲ್ಲಿನ ಮುಸ್ಲಿಮರು ಧಾರ್ಮಿಕ, ಆರ್ಥಿಕ ಕಾರಣಕ್ಕೆ ಅಲ್ಲಿ ನೆಲೆಸಲು ಸಾಧ್ಯವಿಲ್ಲದೆ ಭಾರತಕ್ಕೆ ನಿರಾಶ್ರಿತರಾಗಿ ಬಂದರೂ ಅವರಿಗೆ ಇಲ್ಲಿ ಪೌರತ್ವ ಸಿಗುವುದೇ ಇಲ್ಲ. ಅವರು 12 ವರ್ಷದ ಬಳಿಕವೂ ಅರ್ಜಿ ಸಲ್ಲಿಸಿ ಪೌರತ್ವ ಹೊಂದುವಂತಿಲ್ಲ. ಇದೇ ಸ್ಥಿತಿ ಪರಿಸ್ಥಿತಿ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್‌ನಿಂದ ಬಂದಂತಹ ನಿರಾಶ್ರಿತರಿಗೂ ಇದೆ. ಟಿಬೆಟ್‌ ವಿಷಯುದಲ್ಲೂ ನಮಗೆ ಸ್ಪಷ್ಟ ನೀತಿಯೇ ಇಲ್ಲ’ ಎಂದು ಮಾಳವಿಕಾ ಪ್ರಸಾದ್‌ ಹೇಳಿದರು.

‘ಬಾಂಗ್ಲಾದಅಕ್ರಮ ವಲಸಿಗರು ಎಂದು ಹೇಳಿ ಈಚೆಗೆ ಬೆಂಗಳೂರಿನಲ್ಲಿ ಗುಡಿಸಲುಗಳನ್ನು ಧ್ವಂಸಗೊಳಿಸಿದ್ದು ಸಿಎಎ ಜಾರಿಗೆ ಬರುತ್ತಿರುವುದರ ಲಕ್ಷಣ. ಪಶ್ಚಿಮ ಬಂಗಾಳದ ಬಾಂಗ್ಲಾ ಗಡಿಯಲ್ಲೂ ಪ್ರತಿ ದಿನ ಇಂತಹದೇ ದೃಶ್ಯ ಕಾಣಿಸುತ್ತಿದೆ. ನಿರಾಶ್ರಿತರು ಗಡಿಯಾಚೆಗೆ ಸುರಕ್ಷಿತವಾಗಿ ಹೋದರೇ, ಇಲ್ಲವೇ ಎಂಬುದನ್ನು ಗಮನಿಸುವವರೂ ಯಾರೂ ಇಲ್ಲವಾಗಿದೆ’ ಎಂದು ಪತ್ರಕರ್ತ ಸುದೀಪ್ತೊ ಮೊಂಡಲ್‌ ಅವರು ಹೇಳಿದರು.

‘ಸಂವಿಧಾನದ ಮೂಲ ಆಶಯವೇ ಜಾತ್ಯತೀತ ತತ್ವ. ಆದರೆ ಸಿಎಎ ಮೂಲಕ ಇಲ್ಲಿ ಅದನ್ನೇ ಕಡೆಗಣಿಸಲಾಗಿದೆ. ಎನ್‌ಆರ್‌ಸಿ ವಿಚಾರದಲ್ಲೂ ಅಷ್ಟೇ; ಯಾವ ದಾಖಲೆ ನೀಡಬೇಕು ಎಂಬ ಸ್ಪಷ್ಟತೆಯೇ ಇಲ್ಲ’ ಎಂದು ವಕೀಲರಾದ ಅಶ್ವಿನಿ ಓಬಳೇಶ್‌ ಹೇಳಿದರು.

‘ಪೌರತ್ವ ಸಾಬೀತಿಗೆ ಮತದಾರರ ಚೀಟಿ ಅಸ್ಸಾಂ ಹೈಕೋರ್ಟ್‌ ಪ್ರಕಾರ ಸಮ್ಮತವಲ್ಲ. ಆದರೆ, ಬಾಂಬೈ ಹೈಕೋರ್ಟ್‌ ಪ್ರಕಾರ ಸಮ್ಮತ. ಇಂತಹ ವೈರುಧ್ಯಗಳ ಸ್ಥಿತಿಯಲ್ಲಿ ನಾವು ಜೀವನ ಸಾಗಿಸಬೇಕಾಗಿದೆ’ ಎಂದು ಸಂವಾದ ನಡೆಸಿಕೊಟ್ಟ ಅಲೋಕ್ ಪ್ರಸನ್ನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT