ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ದೋಷಾರೋಪ ಪಟ್ಟಿ ಇದೆ 4,500 ಪುಟ! ದರ್ಶನ್‌ A1?

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಪರಿಶೀಲನೆ: ‘‍ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ದೃಢ’
Published : 3 ಸೆಪ್ಟೆಂಬರ್ 2024, 23:30 IST
Last Updated : 3 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಅಧಿಕಾರಿಗಳು, ದೋಷಾರೋಪ ಪಟ್ಟಿ ಸಲ್ಲಿಸುವ ಕೊನೆಯ ಹಂತದ ತಯಾರಿ ನಡೆಸಿದ್ದಾರೆ.

ನ್ಯಾಯಾಲಯಕ್ಕೆ ಬುಧವಾರ ಅಥವಾ ಗುರುವಾರ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ.

ಪಟ್ಟಣಗೆರೆಯ ಶೆಡ್‌ನಲ್ಲಿ ಜೂನ್‌ 9ರಂದು ರೇಣುಕಸ್ವಾಮಿ ಕೊಲೆ ನಡೆದಿತ್ತು. ಜೂನ್‌ 11ರಂದು ಚಿತ್ರನಟ ದರ್ಶನ್‌ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು. ಅಪರಾಧ ಪ್ರಕ್ರಿಯಾ ಸಂಹಿತೆಯ ಪ್ರಕಾರ, ಆರೋಪಿಗಳನ್ನು ಬಂಧಿಸಿದ 90 ದಿನಗಳೊಳಗೆ ಆರೋಪಪಟ್ಟಿ ಸಲ್ಲಿಸಬೇಕು. ಇಲ್ಲವಾದರೆ ಆರೋಪಿಗಳು ಜಾಮೀನು ಪಡೆಯಲು ಅರ್ಹರಾಗುತ್ತಾರೆ. ಈ ಕಾರಣದಿಂದ ಒಂದೆರಡು ದಿನಗಳೊಳಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಭರದ ಸಿದ್ಧತೆ ನಡೆದಿದೆ.

ಕೊಲೆ ಆರೋಪದಡಿ ದರ್ಶನ್‌ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ 17 ಮಂದಿಯನ್ನು ಬಂಧಿಸಲಾಗಿತ್ತು. ತನಿಖೆ ಹಂತದಲ್ಲಿ ಲಭಿಸಿದ ಎಲ್ಲ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ್ದ ತನಿಖಾಧಿಕಾರಿಗಳು ಬೆಂಗಳೂರು ಹಾಗೂ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ (ಎಫ್‌ಎಸ್ಎಲ್‌) ರವಾನಿಸಿದ್ದರು. ಈ ಪೈಕಿ ಬೆಂಗಳೂರು ಎಫ್‌ಎಸ್ಎಲ್‌ ಪರೀಕ್ಷಾ ವರದಿ ಕೈ ಸೇರಿದ್ದು, ಹೈದರಾಬಾದ್ ಪ್ರಯೋಗಾಲಯದ ವರದಿ ಬರುವುದು ಮಾತ್ರ ಬಾಕಿ ಇದೆ. 

ತನಿಖಾಧಿಕಾರಿಗಳು 4,500ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಿದ್ಧಮಾಡಿಕೊಂಡಿದ್ದಾರೆ. 240ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಘಟನೆ ನಡೆದ ದಿನ ಹೋಟೆಲ್‌ನಲ್ಲಿ ದರ್ಶನ್‌ ಜತೆ ಸೇರಿ ಪಾರ್ಟಿ ಮಾಡಿದ್ದ ನಟ ಚಿಕ್ಕಣ್ಣ ಅವರನ್ನು ಸಾಕ್ಷಿದಾರನಾಗಿ ಮಾಡಲಾಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರನ್ನು ಮೊದಲ ಆರೋಪಿಯಾಗಿ ಹೆಸರಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. 

ನಟ ದರ್ಶನ್ ಈವರೆಗೂ ಜಾಮೀನು ಕೋರಿ ಅರ್ಜಿ ಸಲ್ಲಿಸಿಲ್ಲ. ಆದರೆ ಅವರ ಆಪ್ತೆ ಪವಿತ್ರಾ ಗೌಡ ಹಾಗೂ ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ನಗರ ಸಿವಿಲ್ ನ್ಯಾಯಾಲಯವು ವಜಾಗೊಳಿಸಿದೆ. ಆರೋಪಪಟ್ಟಿ ಸಲ್ಲಿಕೆಯಾದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್‌ ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ. 

‘ಹೈದರಾಬಾದ್‌ ವಿಧಿವಿಜ್ಞಾನ ಪ್ರಯೋಗಾಲಯದಿಂದ ಕೆಲ ಪರೀಕ್ಷಾ ವರದಿಗಳು ಬರುವುದು ಬಾಕಿ ಇದೆ. ವರದಿ ಬಾಕಿ ಇಟ್ಟುಕೊಂಡು ಇನ್ನೆರಡು ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಪವಿತ್ರಾಗೌಡ
ಪವಿತ್ರಾಗೌಡ

ದರ್ಶನ್‌ಗೆ ವಿಶೇಷ ಆತಿಥ್ಯ: ತನಿಖೆ ಆರಂಭ

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಹಾಗೂ ಸಹಚರರಿಗೆ ವಿಶೇಷ ಆತಿಥ್ಯ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಜಂಟಿ ಪೊಲೀಸ್ ಕಮಿಷನರ್‌ ಡಾ. ಚಂದ್ರಗುಪ್ತ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ರೌಡಿಶೀಟರ್‌ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್ ಕುಳ್ಳ ಸೀನಾ ಸೇರಿದಂತೆ 20 ರೌಡಿಗಳನ್ನು ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಕಾರಾಗೃಹಗಳ ಇಲಾಖೆಯ ಡಿಜಿಪಿಗೂ ಪತ್ರ ಬರೆಯಲಾಗಿದೆ ಎಂದು ಕಮಿಷನರ್‌ ಬಿ. ದಯಾನಂದ ತಿಳಿಸಿದರು. ಜೈಲಿನಲ್ಲಿ ದರ್ಶನ್ ವಿಡಿಯೊ ಕರೆ ಮಾಡಿ ಮಾತನಾಡಿರುವುದು ಸಿಗರೇಟು ಸೇದಿರುವುದು ಹಾಗೂ ಜೈಲು ಸಿಬ್ಬಂದಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಯುತ್ತಿದೆ. ಸಿಬ್ಬಂದಿ ಕಣ್ತಪ್ಪಿಸಿ ನಿಷೇಧಿತ ವಸ್ತುಗಳು ಹೇಗೆ ಬಂದವು? ಇದರ ಹಿಂದೆ ಜೈಲು ಸಿಬ್ಬಂದಿ ಕೈವಾಡವಿದೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಗೊತ್ತಾಗಿದೆ.

‘‍ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ದೃಢ’

‘ಕೊಲೆಯಾದ ರೇಣುಕಸ್ವಾಮಿ ಅವರು ನಟ ದರ್ಶನ್ ಅವರ ಆಪ್ತೆ ಪವಿತ್ರಾಗೌಡ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶ ಹಾಗೂ ಫೋಟೊಗಳನ್ನು ಕಳುಹಿಸುತ್ತಿದ್ದರು’ ಎಂಬುದು ತನಿಖೆಯಿಂದ ದೃಢಪಟ್ಟಿದೆ. ಆರೋಪಿಗಳು ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಪಟ್ಟಣಗೆರೆಯ ಶೆಡ್‌ಗೆ ಕರೆದೊಯ್ದು ಕೊಲೆ ನಡೆಸಿರುವುದಕ್ಕೆ ಇದೇ ಕಾರಣ ಎಂಬುದು ತನಿಖೆಯಿಂದ ಬಯಲಾಗಿದ್ದು ನ್ಯಾಯಾಲಯಕ್ಕೆ ಸಲ್ಲಿಸುವ ಆರೋಪಪಟ್ಟಿಯಲ್ಲಿ ಈ ಅಂಶವನ್ನೂ ಉಲ್ಲೇಖಿಸಲಾಗುವುದು ಎಂದು ಮೂಲಗಳು ಹೇಳಿವೆ.‌ ಕೃತ್ಯ ಎಸಗಿದ ಬಳಿಕ ರೇಣುಕಸ್ವಾಮಿ ಮೊಬೈಲ್‌ ಸಿಮ್‌ ಅನ್ನು ಆರೋಪಿಗಳು ರಾಜಕಾಲುವೆಗೆ ಎಸೆದು ಸಾಕ್ಷ್ಯನಾಶ ಮಾಡಿದ್ದರು. ತನಿಖಾಧಿಕಾರಿಗಳು ರೇಣುಕಸ್ವಾಮಿ ಅವರ ಹೆಸರಿನಲ್ಲಿದ್ದ ಮೊಬೈಲ್‌ ಸಂಖ್ಯೆಯ ಸಿಮ್‌ ಮತ್ತೊಮ್ಮೆ ಪಡೆದುಕೊಂಡು ಇನ್‌ಸ್ಟಾಗ್ರಾಂ ಖಾತೆಯನ್ನು ಮರು ಚಾಲನೆಗೊಳಿಸಿದ್ದರು. ನಂತರ ಇನ್‌ಸ್ಟಾಗ್ರಾಂ ಪ್ರವರ್ತಕರಾದ ‘ಮೆಟಾ’ ಕಂಪನಿಗೆ ಪತ್ರ ಬರೆದು ರೇಣುಕಸ್ವಾಮಿ ಅವರು ಪವಿತ್ರಾ ಅವರ ಖಾತೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರೇ ಎಂಬುದರ ಕುರಿತು ಮಾಹಿತಿ ಕೇಳಿದ್ದರು. ‘ಮೆಟಾ’ ಕಂಪನಿಯವರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ‘ರೆಡ್ಡಿ’ ಎಂಬ ಹೆಸರಿನ ಖಾತೆಯಿಂದ ಅಶ್ಲೀಲ ಸಂದೇಶಗಳು ಬಂದಿದ್ದವು ಎಂಬುದಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ ಪೂರಕ ದಾಖಲೆಗಳನ್ನು ಒದಗಿಸಿದ್ಧಾರೆ ಎಂದು ಮೂಲಗಳು ತಿಳಿಸಿವೆ. ರೇಣುಕಸ್ವಾಮಿ ‘ರೆಡ್ಡಿ’ ಹೆಸರಿನ ಖಾತೆಯಿಂದ ಸಂದೇಶ ಕಳುಹಿಸುತ್ತಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT