ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇರಾ ಕಾರ್ಯದರ್ಶಿಗೆ ತನಿಖೆ ಅಧಿಕಾರ

ನೋಂದಣಿಯಾಗದ ಯೋಜನೆಗಳು
Last Updated 16 ಡಿಸೆಂಬರ್ 2020, 21:33 IST
ಅಕ್ಷರ ಗಾತ್ರ

ಬೆಂಗಳೂರು: ನೋಂದಣಿಯಾಗದ ಯೋಜನೆಗಳ ಡೆವಲಪರ್‌ಗಳ ವಿರುದ್ಧ ತನಿಖೆ ನಡೆಸುವ ಅಧಿಕಾರವನ್ನು ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಕಾರ್ಯದರ್ಶಿಗೆ ನೀಡಲಾಗಿದೆ. ಇದರೊಂದಿಗೆ, ಕೆಲವು ಯೋಜನೆಗಳಿಗೆ ವಿನಾಯಿತಿ ನೀಡುವ ಹೊಣೆಯನ್ನೂ ಪ್ರಾಧಿಕಾರವು ಕಾರ್ಯದರ್ಶಿಗೆ ನೀಡಿದೆ. ಈ ಅಧಿಕಾರ ಮೊದಲು ರೇರಾ ಅಧ್ಯಕ್ಷರಿಗೆ ಇತ್ತು.

ನೋಂದಾಯಿತ ಮತ್ತು ನೋಂದಣಿಯಾಗದ ಯೋಜನೆಗಳಿಗೆ ಸಂಬಂಧಿಸಿದ 2,232 ದೂರುಗಳು ಪ್ರಾಧಿಕಾರದಲ್ಲಿ ಬಾಕಿ ಇದ್ದು, ಈವರೆಗೆ ಇತ್ಯರ್ಥವಾಗಿಲ್ಲ. ಪ್ರಾಧಿಕಾರದ ವತಿಯಿಂದ ಈ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ವಿಳಂಬವಾಗುತ್ತಿದ್ದು, ಕಾರ್ಯದರ್ಶಿಯವರನ್ನೇ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

‘ನೋಂದಣಿಯಾಗಿಲ್ಲದ ಯೋಜನೆಗಳಿಗೆ ಸಂಬಂಧಿಸಿದ ದೂರುಗಳಿದ್ದರೆ ಅಂತಹ ಡೆವಲಪರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಕಷ್ಟವಾಗುತ್ತಿತ್ತು. ಸ್ಥಳ ಪರಿಶೀಲನೆ, ದಾಖಲೆ ಪರಿಶೀಲನೆ ಸೇರಿದಂತೆ ಹಲವು ಹಂತಗಳಲ್ಲಿ ತನಿಖೆ ನಡೆಸಬೇಕು. ತ್ವರಿತವಾಗಿ ಈ ಕಾರ್ಯಗಳನ್ನು ಕೈಗೊಳ್ಳಲು ಕಾರ್ಯದರ್ಶಿಯವರಿಗೆ ಹೊಣೆ ನೀಡಲಾಗಿದೆ’ ಎಂದು ರೇರಾ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ತಿಳಿಸಿದರು.

‘ರೇರಾ ಸ್ಥಾಪನೆಗೂ ಮುನ್ನ ಅಂದರೆ, 2017ಕ್ಕೂ ಮುನ್ನ ಯೋಜನೆ ಪ್ರಾರಂಭವಾಗಿದ್ದರೆ, ಕಟ್ಟಡಗಳ ನವೀಕರಣ ಅಥವಾ ದುರಸ್ತಿಗೆ ಸಂಬಂಧಿಸಿದ ಕಾರ್ಯಗಳಿದ್ದರೆ ನೋಂದಣಿ ಅಗತ್ಯವಿರುವುದಿಲ್ಲ. ಆದರೂ ಇಂತಹ ಪ್ರಕರಣಗಳ ಅಡಿಯೂ ಕೆಲವು ದೂರು ದಾಖಲಾಗಿರುತ್ತವೆ. ಇವುಗಳನ್ನು ಪರಿಶೀಲಿಸಿ, ನೋಂದಣಿಯಿಂದ ವಿನಾಯಿತಿ ನೀಡುವ ಅಧಿಕಾರವನ್ನೂ ಕಾರ್ಯದರ್ಶಿಗೆ ನೀಡಲಾಗಿದೆ’ ಎಂದು ಹೇಳಿದರು.

‘ರೇರಾ ಅಡಿ ನೋಂದಣಿ ಮಾಡಿಸದಿದ್ದರೆ, ಗಡುವಿನೊಳಗೆ ಮನೆಯನ್ನು ಗ್ರಾಹಕರಿಗೆ ನೀಡದಿದ್ದರೆ ಜೈಲು ಶಿಕ್ಷೆಯಂತಹ ಕ್ರಮಗಳನ್ನು ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT