ಬೆಂಗಳೂರು: ಸಾಮಾನ್ಯವಾಗಿ ತೆಂಗಿನ ಮರ, ಆಲದ ಮರ, ಹಣ್ಣಿನ ಮರಗಳ ಮೇಲೆ ಬಾಲ ಕುಣಿಸಿಕೊಂಡು ಓಡಾಡುವ ಅಳಿಲೊಂದು 5ನೇ ತರಗತಿಯ ಬಾಲಕಿಯ ಸಂಗಾತಿಯಾಗಿದೆ. ಇಡೀ ದಿನ ಬಾಲಕಿಯ ಜತೆಯಲ್ಲಿರುತ್ತದೆ.
ವೇಗವಾಗಿ ಸರಸರನೆ ಓಡಾಡುವ ಮತ್ತು ತ್ವರಿತವಾಗಿ ಮರ ಹತ್ತಿ, ಕೊಂಬೆಗಳ ಮೇಲೆ ಸರಾಗವಾಗಿ ಓಡಾಡುವ ಅಳಿಲು ಸಾಮಾನ್ಯವಾಗಿ ಉದ್ಯಾನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಅಳಿಲು ಸೇವೆ ಪಡೆದ ಈ ‘ರಾಮ’ ದೀಕ್ಷಾಳೊಂದಿಗೆ 20 ದಿನಗಳಿಂದ ಇರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ತಿಲಕನಗರದ ಎಸ್.ಆರ್. ಕೃಷ್ಣಪ್ಪ ಗಾರ್ಡನ್ ಹತ್ತಿರದ ನಿವಾಸಿ ಹರೀಶ್ ಕುಮಾರ್ ಅವರ ಮಗಳು 5ನೇ ತರಗತಿಯಲ್ಲಿ ಓದುತ್ತಿರುವ ದೀಕ್ಷಾ ಜತೆ ಅಳಿಲೊಂದು ಸಲುಗೆಯಿಂದ ಆಟವಾಡಿಕೊಂಡಿದೆ. ಅದಕ್ಕೆ ರಾಮ ಎಂದು ಹೆಸರಿಡಲಾಗಿದೆ. 20 ದಿನಗಳ ಹಿಂದೆ ತೆಂಗಿನ ಮರದಿಂದ ಕೆಳಗೆ ಬಿದ್ದ ಈ ಅಳಿಲಿಗೆ ಆರೈಕೆ ಮಾಡಿದರು. ಅದಕ್ಕೆ ಬೇಕಾದ ಆಹಾರ ನೀಡಿ, ಎರಡು ಮೂರು ದಿನಗಳವರೆಗೂ ಅದರ ಆರೋಗ್ಯವನ್ನು ನೋಡಿಕೊಂಡಿದ್ದ ದೀಕ್ಷಾಳನ್ನು ಈ ಅಳಿಲು ಬಿಟ್ಟು ಹೋಗುತ್ತಿಲ್ಲ. ಅಳಿಲು ಚೇತರಿಸಿಕೊಂಡ 10–12 ದಿನಗಳು ಕಳೆದರೂ ದೀಕ್ಷಾಳನ್ನು ಬಿಟ್ಟು ತನ್ನ ಗೂಡಿಗೆ ತೆರಳದಿರುವುದು ಎಲ್ಲರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
‘ಮನೆಯ ಪಕ್ಕದಲ್ಲಿರುವ ತೆಂಗಿನ ಮರದ ಮೇಲಿಂದ ಕೆಳಗೆ ಬಿದ್ದ ಅಳಿಲು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಆ ಅಳಿಲನ್ನು ಮಗಳು ದೀಕ್ಷಾ ಮನೆಯೊಳಗೆ ತೆಗೆದುಕೊಂಡು ಬಂದು ಅದರ ಆರೈಕೆ ಮಾಡಿದ ನಂತರ ಸ್ವಲ್ಪ ಚೇತರಿಸಿಕೊಂಡಿತ್ತು. ನಂತರ ಅದಕ್ಕೆ ಹಾಲು ಕುಡಿಸಿ, ಕಾಳು ಕಡಿ ಹಾಕಿದ್ದಳು. ಈಗ ಆ ಅಳಿಲು ಅವಳನ್ನು ಬಿಟ್ಟು ಹೋಗುತ್ತಿಲ್ಲ. ಮನೆಯ ಕೋಣೆಯೊಂದರಲ್ಲಿ ಮಗಳ ಮೈಮೇಲೆ ಆಟವಾಡಿಕೊಂಡಿದೆ. ನಿತ್ಯ ಅದಕ್ಕೆ ಆಹಾರವನ್ನು ಅವಳೇ ಹಾಕುತ್ತಿದ್ದಾಳೆ. ಅವಳೊಟ್ಟಿಗೆ ಆಟವಾಡಿಕೊಂಡು ಮನೆಯಲ್ಲಿಯೇ ಇದೆ. ಬೇರೆಯವರ ಕಡೆ ಬರುವುದು ಕಡಿಮೆ. ಆದರೆ ದೀಕ್ಷಾ ಜತೆ ಹೆಚ್ಚು ಅನ್ಯೋನ್ಯವಾಗಿದೆ’ ಎಂದು ದೀಕ್ಷಾ ತಂದೆ ಹರೀಶ್‌ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ತೆಂಗಿನ ಮರದಿಂದ ಕೆಳಗೆ ಬಿದ್ದ ಅಳಿಲನ್ನು ಮನೆಗೆ ತಂದು ಆರೈಕೆ ಮಾಡಿದ್ದೆ. ಅದು ಈಗ ಚೇತರಿಸಿಕೊಂಡಿದ್ದು. ನನ್ನನ್ನು ಬಿಟ್ಟು ಹೋಗುತ್ತಿಲ್ಲ. ಹಾಲು, ಹಣ್ಣು–ಹಂಪಲನ್ನು ನೀಡುತ್ತೇನೆ. ಪ್ರಾಣಿ, ಪಕ್ಷಿಗಳೆಂದರೆ ನನಗೆ ಬಹಳ ಇಷ್ಟ. ಜತೆಗೆ ಕೋಳಿ, ಬೆಕ್ಕು ಸಹ ಮನೆಯಲ್ಲಿ ಸಾಕಿದ್ದು, ಅದರೊಂದಿಗೆ ರಾಮನನ್ನು(ಅಳಿಲು) ಸಾಕುತ್ತಿದ್ದೇನೆ’ ಎಂದು ದೀಕ್ಷಾ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.