ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ಬಹುಶಿಸ್ತೀಯ ವ್ಯವಸ್ಥೆ ಪುನರ್‌ ಅಳವಡಿಕೆ: ಮಂಜುಲ್ ಭಾರ್ಗವ

Last Updated 20 ನವೆಂಬರ್ 2022, 1:41 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳು ಅನುಸರಿಸುತ್ತಿದ್ದ ಬಹು ಹಾಗೂ ಅಂತರ್‌ಶಿಸ್ತೀಯ ವ್ಯವಸ್ಥೆಯನ್ನು ಭಾರತೀಯ ಶಿಕ್ಷಣದಲ್ಲಿ ಅಳವಡಿಸಿ ಕೊಳ್ಳಬೇಕಿದೆ ಎಂದು ಅಮೆರಿಕ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಪ್ರಾಧ್ಯಾಪಕ ಮಂಜುಲ್ ಭಾರ್ಗವ ಸಲಹೆ ನೀಡಿದರು.

ಎನ್‌ಇಪಿ ಶಿಫಾರಸಿನಂತೆ ಬೆಂಗಳೂರಿನಲ್ಲಿ ಸ್ಥಾಪಿಸಲಾದ ಚಾಣಕ್ಯ ವಿಶ್ವವಿದ್ಯಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಭಾರತೀಯರಾದ ಪಾಣಿನಿ, ವಾಸವದತ್ತ, ಆರ್ಯಭಟ, ಬ್ರಹ್ಮಗುಪ್ತ ಮತ್ತಿತರರು ಬಹುಶಿಸ್ತೀಯ ವ್ಯವಸ್ಥೆಯ ಮೂಲಕ ಶ್ರೇಷ್ಠ ಆವಿಷ್ಕಾರಗಳನ್ನು ಮಾಡಿದರು. ಧ್ಯಾನ, ಸಂಗೀತ, ಸಾಹಿತ್ಯ, ಅಂತರಿಕ್ಷ ಜ್ಞಾನ ಹಾಗೂ ಕೊನೆಗೆ ಸೊನ್ನೆಯ ಆವಿಷ್ಕಾರದ ಗಣಿತ ಪ್ರವೇಶವು ಅಂತರ್‌ಶಿಸ್ತೀಯ ವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದವು. ಇಂದು ಜಾಗತಿಕ ಮಟ್ಟದಲ್ಲಿ ಬಹುಶಿಸ್ತೀಯ ಮತ್ತು ಅಂತರಶಿಸ್ತೀಯ ಕೋರ್ಸ್‌ಗಳು ಪ್ರಾಮುಖ್ಯ ಪಡೆದಿವೆ. ಹೊಸ ಜ್ಞಾನದ ಆವಿಷ್ಕಾರಕ್ಕೆ ನಾಂದಿ ಹಾಡಿದೆ ಎಂದರು.

ಹೊಸ ಜ್ಞಾನದ ಸೃಷ್ಟಿಗೆ ಭಾರತೀಯ ಶಿಕ್ಷಣ ಸಾಕಷ್ಟು ಕೊಡುಗೆ ನೀಡಿದೆ. ದೇಶವು ಅಭಿವೃದ್ಧಿಗೆ ಜ್ಞಾನ ಉತ್ತಮ ಮಾರ್ಗವಾಗಿದೆ. ಸ್ವಾತಂತ್ರ್ಯಾ ನಂತರ ಭಾರತದ ಶಿಕ್ಷಣವು ಒಂದೇ ವ್ಯವಸ್ಥೆಯ ಕೊಂಡಿಯಾಗಿತ್ತು. ಇದರಿಂದ ವಿದ್ಯಾರ್ಥಿಗಳು ಸೂಕ್ತ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ, ಅಮೆರಿಕದ ವಿಶ್ವವಿದ್ಯಾಲಯಗಳು ಬಹುಶಿಸ್ತೀಯ ಮಾದರಿ ಅನುಸರಿಸುತ್ತವೆ. ಒಂದು ವ್ಯವಸ್ಥೆಯಿಂದ ಪಡೆದ ವಿಷಯಗಳನ್ನು ಬೇರೆಡೆ ವಿಭಿನ್ನವಾಗಿ ಬಳಸಿದರೆ ಅದು ನಾವೀನ್ಯವಾಗುತ್ತದೆ. ಸ್ಟೀವ್ ಜಾಬ್ಸ್ ಅವರ ಕಂಪನಿಗಳು ಬಹುಶಿಸ್ತೀಯ ಕಾರ್ಯವಿಧಾನಕ್ಕೆ ಆದ್ಯತೆ ನೀಡುತ್ತವೆ. ಭಾರತದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಂತಹ ಆಶಯಗಳನ್ನು ಸಾಕಾರಗೊಳಿಸುತ್ತಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನಾ ಸಮಿತಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್‌, ‘ವಿಶ್ವವಿದ್ಯಾಲಯ ಸಂಶೋಧನೆಗಳಿಗೆ ಒತ್ತು ನೀಡಲಿದೆ. ಸಂಶೋಧಕರು ಮಾಡುವ ತಪ್ಪುಗಳನ್ನೂ ಪ್ರೋತ್ಸಾಹಿಸುವ ಮನೋಭಾವ ಇರಬೇಕು’ ಎಂದರು.

ತಂತ್ರಜ್ಞಾನ ಕ್ರಾಂತಿಯ ಫಲವಾಗಿ ಭಾರತ ಐದು ವರ್ಷಗಳಲ್ಲಿ ವಿಶ್ವದ ಮೂರನೇ ಬಲಿಷ್ಠ ಆರ್ಥಿಕ ವ್ಯವಸ್ಥೆ ಹೊಂದಲಿದೆ. ಇದಕ್ಕೆ ಪೂರಕವಾಗಿ ಯುವ ಜನರು ಆಧುನಿಕ ಕೌಶಲಗಳನ್ನು ಹೊಂದಬೇಕು. ಚಾಣಕ್ಯ ವಿಶ್ವವಿದ್ಯಾಲಯ ಅಂತಹ ಆಶಯಗಳನ್ನು ಪೂರೈಸಲಿದೆ ಎಂದು ಆಶಿಸಿದರು.

ಇನ್ಫೊಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ, ಕರ್ನಾಟಕ ಸರ್ಕಾರದ ಐ.ಟಿ. ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಬಯೋಕಾನ್ ಲಿಮಿಟೆಡ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಜಿಂದಾಲ್‌ನ ಸೀತಾರಾಮ್ ಜಿಂದಾಲ್, ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವೀಸ್‌ನ ಮೋಹನ್‌ದಾಸ್ ಪೈ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಆಶ್ವತ್ಥನಾರಾಯಣ, ಕುಲಾಧಿಪತಿ ಎಂ.ಕೆ.ಶ್ರೀಧರ್, ಕುಲಪತಿ ಯಶವಂತ ಡೋಂಗ್ರೆ ಉಪಸ್ಥಿತರಿದ್ದರು.

ದೇಣಿಗೆ ಮೂಲಕ ಆರ್ಥಿಕ ನಿಧಿ
ವಿಶ್ವವಿದ್ಯಾಲಯ ದೇಣಿಗೆ ಮೂಲಕ ಆರ್ಥಿಕ ನಿಧಿಯನ್ನು ಸ್ಥಾಪಿಸುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಮಧ್ಯಮ ವರ್ಗದವರಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸುತ್ತಿದೆ. ಸಾಕಷ್ಟು ಉದ್ಯಮಿಗಳು, ದಾನಿಗಳು ಉದಾರವಾಗಿ ನೆರವು ನೀಡುತ್ತಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಸಹ ಕುಲಪತಿ ಎಂ.ಪಿ.ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT