ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಸಮಗ್ರ ಟೌನ್‌ಶಿಪ್‌ಗೆ ಮರುಜೀವ

ಬಿಡದಿ, ಸೋಲೂರು, ನಂದಗುಡಿಯಲ್ಲಿ ಸಮಗ್ರ ಟೌನ್‌ಶಿಪ್‌ ನಿರ್ಮಾಣಕ್ಕೆ ಚಿಂತನೆ
Published : 29 ಆಗಸ್ಟ್ 2024, 0:35 IST
Last Updated : 29 ಆಗಸ್ಟ್ 2024, 0:35 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಹೊರವಲಯದ ಬಿಡದಿ, ಸೋಲೂರು, ನಂದಗುಡಿಯಲ್ಲಿ ಮೂರು ಸಮಗ್ರ ಟೌನ್‌ಶಿಪ್‌ ನಿರ್ಮಿಸುವ ಯೋಜನೆಯನ್ನು ಪುನಃ ಕೈಗೆತ್ತಿಕೊಳ್ಳಲು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಮುಂದಾಗಿದೆ.

ಎರಡು ದಶಕಗಳ ಹಿಂದಿನ ಪ್ರಸ್ತಾವಕ್ಕೆ ಇದೀಗ ಮರುಜೀವ ನೀಡಿರುವ ಬಿಎಂಆರ್‌ಡಿಎ, ಪ್ರಾಯೋಗಿಕವಾಗಿ ಬಿಡದಿಯಲ್ಲಿ ಮೊದಲನೆ ಟೌನ್‌ಶಿಪ್‌ ನಿರ್ಮಿಸಲು ನಿರ್ಧರಿಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸೂಚನೆಯಂತೆ ಯೋಜನೆಗೆ ಚಾಲನೆ ನೀಡಲಾಗಿದ್ದು, ಮಾಗಡಿ ಸಮೀಪದ ಸೋಲೂರು ಮತ್ತು ಹೊಸಕೋಟೆ ಸಮೀಪದ ನಂದಗುಡಿಯಲ್ಲಿ ಎರಡನೇ ಹಂತದಲ್ಲಿ ಸಮಗ್ರ ಟೌನ್‌ಶಿಪ್‌ಗಳು ನಿರ್ಮಾಣವಾಗಲಿವೆ.

ಈ ಮೂರು ಟೌನ್‌ಶಿಪ್‌ಗಳ ವಲಯಗಳಿಗೆ ‘ನಮ್ಮ ಮೆಟ್ರೊ’ ಸಂಪರ್ಕ ಕಲ್ಪಿಸುವ ಬಗ್ಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಬಿಎಂಆರ್‌ಸಿಎಲ್‌ಗೆ ಬಿಎಂಆರ್‌ಡಿಎ ಪತ್ರ ಬರೆದಿದೆ. ಬೆಂಗಳೂರು ಜಲಮಂಡಳಿಗೂ ಪತ್ರ ಬರೆಯಲಾಗಿದ್ದು, ಕುಡಿಯುವ ನೀರಿನ ಪೂರೈಕೆಗೆ ಮೂಲಸೌಕರ್ಯ ಒದಗಿಸುವಂತೆ ಕೋರಲಾಗಿದೆ.

ಟೌನ್‌ಶಿಪ್‌ ನಿರ್ಮಾಣಕ್ಕೆ ಹಲವು ಪ್ರಕ್ರಿಯೆಗಳು ನಡೆಯಬೇಕಾಗಿವೆ. ಮೊದಲನೆಯದಾಗಿ, ರಾಜ್ಯ ಸರ್ಕಾರ ಬೃಹತ್‌ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲು ಸಮ್ಮತಿಸಬೇಕು. ಇದಾದ ನಂತರ, ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಬೇಕು. ಬೆಂಗಳೂರು ನಗರ ಜಿಲ್ಲಾಡಳಿತವು ಸಾಮಾಜಿಕ ಪರಿಣಾಮದ ಮೌಲ್ಯಮಾಪನ ಅಧ್ಯಯನ ನಡೆಸಬೇಕಿದೆ.

‘ಸ್ಯಾಟಲೈಟ್‌ ಟೌನ್‌ ವರ್ತುಲ ರಸ್ತೆಗೆ (ಎಸ್‌ಟಿಆರ್‌ಆರ್) ಸಂಪರ್ಕ ಸಾಧಿಸುವ ಮೂರೂ ಪ್ರದೇಶಗಳ ಬಗ್ಗೆ ನಾವು ಗಮನಹರಿಸಿದ್ದೇವೆ. ನಾಲ್ಕು ಹೆದ್ದಾರಿಗಳನ್ನು ಸುತ್ತಮುತ್ತ ಹೊಂದಿರುವ ಬಿಡದಿ ಟೌನ್‌ಶಿಪ್‌ ಪ್ರಥಮವಾಗಿ ಆರಂಭವಾಗಲಿದೆ. ಲಾಜಿಸ್ಟಿಕ್‌ ಪಾರ್ಕ್‌, ಡೇಟಾ ಸೆಂಟರ್‌ ಸೇರಿದಂತೆ ಅತಿ–ಎತ್ತರದ ವಸತಿ ಸಂಕೀರ್ಣಗಳನ್ನು ಒಳಗೊಂಡ ಮಿಶ್ರ ವಾಣಿಜ್ಯ ಚಟುವಟಿಕೆಗಳ ಸಮಗ್ರ ಟೌನ್‌ಶಿಪ್‌ನ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ’ ಎಂದು ಬಿಎಂಆರ್‌ಡಿಎ ಆಯುಕ್ತ ರಾಜೇಂದ್ರ ಪಿ. ಚೋಳನ್‌ ತಿಳಿಸಿದರು.

ಬೆಂಗಳೂರು– ಚೆನ್ನೈ ಎಕ್ಸ್‌ಪ್ರೆಸ್ ಹೈವೇಗೆ ಸಮೀಪವಿರುವ ನಂದಗುಡಿಯನ್ನು ಆಯ್ಕೆ ಮಾಡಲಾಗಿದೆ. ನೆಲಮಂಗಲ– ಬೆಂಗಳೂರಿಗೆ ಸಂಪರ್ಕ ಸಾಧಿಸುವ ಸೋಲೂರು ಅನ್ನು ಅಂತಿಮಗೊಳಿಸಲಾಗಿದೆ.

‘ಸರ್ಕಾರ ಈಗಾಗಲೇ ಮೂವರು ಭೂಸ್ವಾಧೀನ ಅಧಿಕಾರಿಗಳನ್ನು ನೇಮಿಸಿದೆ. ಎಂಜಿನಿಯರಿಂಗ್‌ ಕೋಶವನ್ನೂ ನಾವು ರಚಿಸುತ್ತಿದ್ದೇವೆ. ಆರ್ಥಿಕ ಇಲಾಖೆಯ ಸಮ್ಮತಿಗಾಗಿ ಕಾಯಲಾಗುತ್ತಿದೆ. ಅಲ್ಲದೆ, ಸಾಲ ಪಡೆಯಲು ಹಣಕಾಸು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಚೋಳನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT