ನೆಲಮಂಗಲ: ಪಟ್ಟಣದ ನೆಲಮಂಗಲ ನ್ಯೂ ಟೌನ್ ಮುಖ್ಯ ರಸ್ತೆ ಮತ್ತು ಎಂ.ಜಿ. ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ದಿನನಿತ್ಯ ಸಂಕಷ್ಟದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯೂಟೌನ್‌ನ ದ್ವಾರದಿಂದ ಜನಪ್ರಿಯ ಅಪಾರ್ಟ್‌ಮೆಂಟ್, ಬಾಲಾಜಿ ಗ್ರೀನ್ಸ್ ಹಾಗೂ ಮಾರಪ್ಪನ ಪಾಳ್ಯಕ್ಕೆ ಹೋಗುವ ಈ ಮುಖ್ಯರಸ್ತೆಯಲ್ಲಿ ನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಬೆಳಿಗ್ಗೆ ಕಚೇರಿ, ಶಾಲೆಗಳ ಸಮಯದಲ್ಲಿ ದಟ್ಟಣೆ ಹೆಚ್ಚಿರುತ್ತದೆ. ರಸ್ತೆ ಹಾಳಾಗಿರುವುದರಿಂದ ಆಗಾಗ್ಗೆ ಲಘು ಅಪಘಾತಗಳು ಸಂಭವಿಸುತ್ತಿವೆ.
ಬೆತ್ತನಗೆರೆ, ವಾಜರಹಳ್ಳಿ, ಭಕ್ತನಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ಎಂ.ಜಿ.ರಸ್ತೆ ಕಿರಿದಾಗಿದ್ದು, ಗುಂಡಿಗಳಿಂದ ಕೂಡಿದೆ. ಈ ಬಡಾವಣೆಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿರುವುದರಿಂದ, ಕಟ್ಟಡ ಸಾಮಗ್ರಿಗಳನ್ನು ಕೊಂಡೊಯ್ಯುವ ಬೃಹತ್ ಲಾರಿಗಳ ಓಡಾಟ ಅಧಿಕವಾಗಿದೆ. ಈಗಾಗಲೇ ರಸ್ತೆಯಲ್ಲಿರುವ ಗುಂಡಿಗಳು, ಲಾರಿಗಳ ಸಂಚಾರದಿಂದ ಸಣ್ಣ ಹೊಂಡಗಳಂತಾಗಿವೆ. ಮಳೆ ಬಂದರೆ ಮಂಡಿಯುದ್ದ ನೀರು ನಿಲ್ಲುತ್ತದೆ. ನ್ಯೂಟೌನ್ ಮುಖ್ಯರಸ್ತೆ ಮತ್ತು ಎಂ.ಜಿ.ರಸ್ತೆಯ ಕೆಲವು ಭಾಗಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ, ಮಳೆ ನೀರು ರಸ್ತೆಯ ಮೇಲೆ ಹರಿಯುತ್ತದೆ.
ಮಳೆ ಬಂದಾಗ ರಸ್ತೆಗಳು ಕೆಸರಿನಿಂದ ತುಂಬಿರುತ್ತವೆ, ಬಿಸಿಲು ಇದ್ದಾಗ ದೂಳಿನಿಂದ ಕೂಡಿರುತ್ತವೆ. ದ್ವಿಚಕ್ರ ವಾಹನದಲ್ಲಿ ಓಡಾಡುವ ನಮ್ಮಂತಹ ಹಿರಿಯರಿಗೆ ತೀವ್ರ ತೊಂದರೆಯಾಗಿದೆ. ಶೀಘ್ರವೇ ರಸ್ತೆ ದುರಸ್ತಿ ಮಾಡಿಸಿ, ಚರಂಡಿ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದು ಗಜಾರಿಯ ಬಡಾವಣೆಯ 73ರ ಹರೆಯದ ವಿ.ಎಸ್.ರಾಮಣ್ಣ ಆಗ್ರಹಿಸಿದ್ದಾರೆ.
‘ಚರಂಡಿಗಳಲ್ಲಿ ಹೂಳು ತುಂಬಿದ್ದು, ನೀರು ಮುಂದಕ್ಕೆ ಹರಿಯುವುದಿಲ್ಲ. ಮಳೆ ಬಂದಾಗ ಚರಂಡಿ ನೀರು ರಸ್ತೆಗೆ ಹರಿಯುತ್ತದೆ. ಕೊಳಚೆ ನೀರಿನಿಂದ ಡೆಂಗಿಯಂತಹ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಎಂ.ಜಿ.ರಸ್ತೆಯಲ್ಲಿ ಗುಂಡಿಗಳಾದಾಗ, ಅವುಗಳಿಗೆ ತೇಪೆ ಹಚ್ಚಲಾಗುತ್ತದೆ. ಎರಡು ದಿನ ಮಳೆ ಬಂದರೆ ರಸ್ತೆ ಕಿತ್ತುಹೋಗಿ, ಮತ್ತೆ ಗುಂಡಿಗಳು ತೆರೆದುಕೊಳ್ಳುತ್ತವೆ. ಪೂರ್ಣ ಪ್ರಮಾಣದಲ್ಲಿ ಡಾಂಬರು ರಸ್ತೆ ಮಾಡಿದರೆ, ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದು ರಾಮಣ್ಣ ಹೇಳಿದರು.
ರಸ್ತೆಗಳ ಸಮಸ್ಯೆಯನ್ನು ಪರಿಹರಿಸವಂತೆ ಬಡಾವಣೆಯ ನಿವಾಸಿಗಳು ನಗರಸಭೆ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಸ್ಥಳೀಯರೆಲ್ಲ ಸೇರಿ ನಗರಸಭೆ ಕಚೇರಿಯ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
* ಮುಖ್ಯರಸ್ತೆಯಲ್ಲಿ ಗುಂಡಿ–ಹೊಂಡಗಳು * ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯ * ಚರಂಡಿಗಳಿಲ್ಲದೇ ರಸ್ತೆಯಲ್ಲಿ ಹರಿಯುವ ಮಳೆ ನೀರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.