ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾತ್ರಿ ವೇಳೆ ಪುಂಡರ ಹಾವಳಿ: ಸಂಚಾರಕ್ಕೆ ಆತಂಕ

ಒಂದು ವಾಹನ ಇನ್ನೊಂದು ವಾಹನಕ್ಕೆ ತಾಗಿದ ವಿಚಾರಕ್ಕೆ ರಸ್ತೆ ಮಧ್ಯದಲ್ಲೇ ಗಲಾಟೆ
Published 22 ಆಗಸ್ಟ್ 2024, 0:02 IST
Last Updated 22 ಆಗಸ್ಟ್ 2024, 0:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರವಲಯದ ರಸ್ತೆಗಳು, ಕೆಲವು ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ರಾತ್ರಿ ವೇಳೆ ಪುಂಡರ ಹಾವಳಿ ಮಿತಿಮೀರಿದ್ದು, ರಾತ್ರಿಪಾಳಿಯ ಉದ್ಯೋಗಸ್ಥರು, ವ್ಯಾಪಾರಿಗಳು, ಫುಡ್‌ ಡೆಲಿವರಿ ಹುಡುಗರು, ಹೊರ ಊರುಗಳಿಂದ ರಾತ್ರಿ ವೇಳೆ ನಗರಕ್ಕೆ ಬರುವ ಪ್ರಯಾಣಿಕರಿಗೆ ಆತಂಕ ತಂದೊಡ್ಡಿದೆ.

ದಿಢೀರ್ ಎದುರಾಗುವ ಕಿಡಿಗೇಡಿಗಳ ಗುಂಪು ವಾಹನ ಚಾಲಕರು ಹಾಗೂ ಬೈಕ್‌ ಸವಾರರನ್ನು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್‌ ಸುಲಿಗೆ ಮಾಡುವ ಜತಗೆ ಸವಾರರನ್ನು ಭೀತಿಗೆ ಒಳಪಡಿಸುವ ಘಟನೆಗಳೂ ನಗರದಲ್ಲಿ ನಡೆಯುತ್ತಿವೆ.

ಒಂದು ವಾಹನವು ಮತ್ತೊಂದು ವಾಹನಕ್ಕೆ ತಾಗಿದ ವಿಚಾರಕ್ಕೆ ರಸ್ತೆಯಲ್ಲಿಯೇ ಸವಾರರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚು ವರದಿ ಆಗುತ್ತಿವೆ. ಪ್ರಶ್ನಿಸಿದರೆ ವಾಹನಗಳ ಗಾಜು ಪುಡಿ ಮಾಡುವುದು, ವಾಹನಕ್ಕೆ ಹಾನಿ ಮಾಡುತ್ತಿರುವ ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿದ್ದು ಸಂಚಾರದ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ.

ಹಲವು ಮೇಲ್ಸೇತುವೆಗಳಲ್ಲಿ ವ್ಹೀಲಿ ನಡೆಸಿ ಕಿರಿಕಿರಿ ಉಂಟು ಮಾಡುತ್ತಿರುವ ಪ್ರಕರಣಗಳೂ ಕಡಿಮೆ ಆಗಿಲ್ಲ. ವ್ಹೀಲಿಯಿಂದ ಅಪಘಾತ ಸಂಭವಿಸಿ ಮತ್ತೊಬ್ಬರ ಜೀವಕ್ಕೂ ಹಾನಿ ಆಗುತ್ತಿದ್ದು, ಪುಂಡರ ಹಾವಳಿಗೆ ಕಡಿವಾಣ ಬಿದ್ದಿಲ್ಲ ಎಂದು ನಿವಾಸಿಗಳು ಹೇಳಿದರು.

ಕಿಡಿಗೇಡಿಗಳ ಹಾವಳಿ ತಡೆಗಟ್ಟಲು ನಗರ ಪೊಲೀಸರು ಮುಂದಾಗಿದ್ದು, ಈ ರೀತಿ ಕೃತ್ಯ ಎಸಗಿದ್ದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಪುಂಡರನ್ನು ಪತ್ತೆಹಚ್ಚಿ ಜೈಲಿಗೆ ಕಳುಹಿಸಲು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ರಸ್ತೆಯಲ್ಲಿ ಕರ್ಕಶ ಹಾರ್ನ್‌ ಮಾಡಿಕೊಂಡು ವಾಹನಗಳನ್ನು ಹಿಂದಿಕ್ಕುವುದು, ಮುಂದೆ ಚಲಿಸುತ್ತಿದ್ದ ವಾಹನದ ಸವಾರರು ಜಾಗ ಬಿಡದಿದ್ದರೆ ಅಂತಹ ವಾಹನವನ್ನು ಅಡ್ಡಗಟ್ಟಿ ಸವಾರರ ಮೇಲೆ ಹಲ್ಲೆ ಮಾಡುವುದು, ವಾಹನಕ್ಕೆ ಹಾನಿ ಮಾಡುವ ಪ್ರಕರಣಗಳು ನಡೆಯುತ್ತಿವೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ರಾತ್ರಿ ಪಾಳಿಯ ಕೆಲಸಕ್ಕೆ ತೆರಳುವುದಕ್ಕೆ ಭಯ: ‘ಕಂಪನಿಗಳಲ್ಲಿ ಮನೆಯಿಂದ ಕೆಲಸ ಮಾಡುವುದಕ್ಕೆ ಬಹುತೇಕ ವಿರಾಮ ಬಿದ್ದಿದೆ. ಹೀಗಾಗಿ ಕೆಲವೊಮ್ಮೆ ರಾತ್ರಿ ಪಾಳಿ ಇರುತ್ತದೆ. ಕೆಲಸ ಮುಗಿಸಿಕೊಂಡು ಮುಂಜಾನೆ ಕಂಪನಿಯಿಂದ ಮನೆಗೆ ಹೋಗಲು ಭಯವಾಗುತ್ತಿದೆ. ಪ್ರಮುಖ ಜಂಕ್ಷನ್‌, ಮಾರ್ಗ ಹಾಗೂ ಹೊರವಲಯದಲ್ಲಿ ಪೊಲೀಸ್‌ ಗಸ್ತು ಸಿಬ್ಬಂದಿ ಕಾಣಿಸುವುದಿಲ್ಲ. ಅಲ್ಲಲ್ಲಿ ಹೊಯ್ಸಳ ವಾಹನ ಓಡಾಟ ನಡೆಸಿದರೆ ಪುಂಡರ ಹಾವಳಿ ಕಡಿಮೆ ಆಗಲಿದೆ’ ಎಂದು ಸಾಫ್ಟ್‌ವೇರ್‌ ಕಂಪನಿಯೊಂದರ ಉದ್ಯೋಗಿ ಸುಷ್ಮಾ ಹೇಳಿದರು.

ಚಾಕು ತೋರಿಸಿ ಬೆದರಿಸಿದ್ದ ಆರೋಪಿಗಳು: ಕೆಲವು ದಿನಗಳ ಹಿಂದಷ್ಟೇ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಡಬಲ್‌ ಡೆಕ್ಕರ್‌ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ವ್ಹೀಲಿ ನಡೆಸಿ ಆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಚಾಲಕನಿಗೆ ಹಗಲು ವೇಳೆಯೇ ಚಾಕು ತೋರಿಸಿ ಬೆದರಿಸಿದ್ದರು. ಕಾರಿನ ಗಾಜಿಗೆ ಒದ್ದು ಹಾನಿಗೊಳಿಸಿದ್ದರು. ಹಿಂದೆ ಮತ್ತೊಂದು ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದರು. ಹೀಗಾಗಿ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು.

ಮಂಗಳವಾರ ಜಯನಗರದ ಸೌತ್‌ ಎಂಡ್‌ ಸರ್ಕಲ್‌ ಬಳಿ ಫುಡ್‌ ಡೆಲಿವರಿ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಫುಡ್ ಡೆಲಿವರಿಗೆ ಹೋಗುವ ವೇಳೆ ಆಟೊವೊಂದಕ್ಕೆ ಬೈಕ್ ತಾಗಿದೆ. ಇದೇ ವಿಚಾರಕ್ಕೆ ಆಟೊ ಚಾಲಕರ ಗುಂಪು ಹಲ್ಲೆ ನಡೆಸಿದೆ. ಗ್ರಾಹಕರಿಗೆ ನೀಡಲು ಕೊಂಡೊಯ್ಯುತ್ತಿದ್ದ ಆಹಾರ ಪದಾರ್ಥವು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಹಳ್ಳಿಯಲ್ಲಿ ಸೋಮವಾರ ಮದ್ಯದ ಅಮಲಿನಲ್ಲಿ ಯುವಕನೊಬ್ಬ ಕಾರಿನ ಗ್ಲಾಸ್‌ ಒಡೆದು ಹಾಕಿ ಭೀತಿ ಸೃಷ್ಟಿಸಿದ್ದ. ಕಾರಿನ ಒಳಗೆ ಮಹಿಳೆ ಹಾಗೂ ಪುಟ್ಟ ಮಗುವಿದೆ ಎಂದು ಚಾಲಕ ವಿನಮ್ರತವಾಗಿ ಮನವಿ ಮಾಡಿದ್ದರೂ ಆರೋಪಿ ದುರ್ವತನೆ ತೋರಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಡ್ರಗ್ಸ್‌ ಮದ್ಯದ ಅಮಲು

ಕಿಡಿಗೇಡಿಗಳು ಮದ್ಯ ಹಾಗೂ ಡ್ರಗ್ಸ್‌ ತೆಗೆದುಕೊಂಡು ಸವಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರಶ್ನಿಸಿದರೆ ಹಲ್ಲೆ ನಡೆಸುತ್ತಾರೆ. ಯುವಕರ  ಕೈಗೆ ಸುಲಭವಾಗಿ ಡ್ರಗ್ಸ್ ಸಿಗುತ್ತಿದೆ. ಡ್ರಗ್ಸ್‌ ಪೂರೈಕೆದಾರರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿ ಗಲಾಟೆ ನಡೆಸಿದರೆ ಅಂತಹ ವ್ಯಕ್ತಿಗಳನ್ನು ರೌಡಿಪಟ್ಟಿಗೆ ಸೇರಿಸಲಾಗುವುದು.
ಬಿ.ದಯಾನಂದ, ನಗರ ಪೊಲೀಸ್‌ ಕಮಿಷನರ್‌
ಜಯನಗರದಲ್ಲಿ ಫುಡ್‌ ಡೆಲಿವರಿ ಹುಡುಗನ ಮೇಲೆ ಹಲ್ಲೆ ನಡೆಸಿದವರು ಡ್ರಗ್ಸ್‌ ತೆಗೆದುಕೊಂಡಿರುವ ಅನುಮಾನ ಇದೆ.
ಮೂರ್ತಿ, ಜಯನಗರದ ನಿವಾಸಿ
ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಡಬಲ್‌ ಡೆಕ್ಕರ್‌ ಮೇಲ್ಸೇತುವೆಯಲ್ಲಿ ಕಾರಿಗೆ ಕಾಲಿನಿಂದ ಒದ್ದು ಹಾನಿ ಮಾಡಿದ್ದ ಕಿಡಿಗೇಡಿಗಳು.
ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯ ಡಬಲ್‌ ಡೆಕ್ಕರ್‌ ಮೇಲ್ಸೇತುವೆಯಲ್ಲಿ ಕಾರಿಗೆ ಕಾಲಿನಿಂದ ಒದ್ದು ಹಾನಿ ಮಾಡಿದ್ದ ಕಿಡಿಗೇಡಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT