ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ನೀರಾದ್ರೂ ಕೊಡ್ರಿ... ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗರ ಬೇಡಿಕೆ

ಭಾಷಣವೇ ಭೂಷಣ ಅಭಿವೃದ್ಧಿ ಗೌಣ–4
Published 26 ಜನವರಿ 2024, 22:12 IST
Last Updated 27 ಜನವರಿ 2024, 0:40 IST
ಅಕ್ಷರ ಗಾತ್ರ

ಬೆಂಗಳೂರು: ‘ಹಳ್ಳಿಯಾಗಿದ್ದಾಗಲೇ ಚೆನ್ನಾಗಿದ್ದೋ, ಕಾರ್ಪೊರೇಷನ್‌ಗೆ ನಮ್ಮನ್ನೇಕೆ ಸೇರಿಸಿದ್ರೋ ಗೊತ್ತಿಲ್ಲ. ಹೋಗಲಿ ಸೇರಿಸಿದ ಮೇಲೆ ನಮಗೆ ಬೇಕಾದ ಸವಲತ್ತು ಕೊಟ್ಟರೋ? ಅದೂ ಇಲ್ಲ... 15 ವರ್ಷದಿಂದ ಒಂದು ಚರಂಡಿ, ಒಂದು ರಸ್ತೆ ಮಾಡಿಕೊಡಲೂ ಇವರಿಗೆ ಆಗಿಲ್ಲ ಅಂದ್ರೆ ನಮಗೇಕೆ ಬೇಕು ‘ಬಿಬಿಎಂಪಿ ಗರಿ....?’

ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ 110 ಹಳ್ಳಿಗರ ಮಾತು, ಪ್ರಶ್ನೆಗಳಿವು. ‘ಹಳ್ಳಿ ದಿಲ್ಲಿಯಾಗೋದೇನೂ ಬೇಡ, ಕನಿಷ್ಠ ರಸ್ತೆ, ಮೋರಿ, ಕುಡಿಯಲು ನೀರಾದ್ರೂ ಕೊಡಿ’ ಎಂಬ ನಾಗರಿಕರ ಮೂಲ ಬೇಡಿಕೆಗೆ ಅಧಿಕಾರಸ್ಥರಿಂದ ದಶಕದಿಂದ ಸ್ಪಂದನೆ ಸಿಕ್ಕಿಲ್ಲ. 

ಬೆಂಗಳೂರು ಮಹಾನಗರ ಪಾಲಿಕೆಯನ್ನು 2007ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ ವಿಸ್ತರಿಸಿದ ಸಂದರ್ಭದಲ್ಲಿ ನಗರದ ಸುತ್ತಮುತ್ತಲಿನ ನಗರಸಭೆ, ಪುರಸಭೆ ಜೊತೆಗೆ 110 ಹಳ್ಳಿಗಳನ್ನೂ ಸೇರಿಸಿಕೊಳ್ಳಲಾಯಿತು. ದೇಶದ ನಾಲ್ಕನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಈ ಸೇರ್ಪಡೆಯೂ ಕಾರಣ. ಆದರೆ ಈ ಪ್ರದೇಶಗಳಲ್ಲಿನ ಮೂಲಸೌಕರ್ಯ ಇಂದಿಗೂ ಮರೀಚಿಕೆಯಾಗಿಯೇ ಇದೆ.

‘110 ಹಳ್ಳಿಗಳ ಅಭಿವೃದ್ಧಿಗೆ ಹಣ’ ಎಂಬ ಘೋಷಣೆಗಳು 2007ರಿಂದಲೂ ಕೇಳಿಬರುತ್ತಲೇ ಇವೆ.  ಬಿಬಿಎಂಪಿಯ 2008–09ನೇ ಬಜೆಟ್‌ನಿಂದಲೇ ‘ಹಳ್ಳಿಗಳ ಅಭಿವೃದ್ಧಿ ಹಣ’ ಎಂದು ಹಂಚಿಕೆ ಮಾಡಲಾಗುತ್ತಿದೆ. ‘ಒಂದು ಕೋಟಿ ಒಂದು ಹಳ್ಳಿಗೆ’ ವಿಶೇಷ ಯೋಜನೆಯಲ್ಲಿ 2015–16ನೇ ಸಾಲಿನಿಂದ 2018–19ನೇ ಸಾಲಿನವರೆಗೆ ₹300.40 ಕೋಟಿಯನ್ನು ಮೂಲಸೌಕರ್ಯ ಕಾಮಗಾರಿಗಳಿಗೆ ವೆಚ್ಚ ಮಾಡಲಾಗಿದೆ. 2019–20ನೇ ಸಾಲಿನ ನಂತರ ಸುಮಾರು ₹5 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ಈ ಹಳ್ಳಿಗಳಲ್ಲಿ ಕನಿಷ್ಠ ರಸ್ತೆ, ಚರಂಡಿಯ ಸೌಕರ್ಯವೂ ಇಲ್ಲ ಎಂಬುದು ಬಹುತೇಕರ ದೂರು.

ಬಿಬಿಎಂಪಿ ರಸ್ತೆ, ಚರಂಡಿ ಹಾಗೂ ಜಲಮಂಡಳಿ ಹಾಳು ಮಾಡಿರುವ ರಸ್ತೆಯನ್ನು ಮರುಅಭಿವೃದ್ಧಿ ಮಾಡಲು ಸಾವಿರಾರು ಕೋಟಿ ವೆಚ್ಚ ಮಾಡುತ್ತಿದೆ. ಇನ್ನು ಜಲಮಂಡಳಿ, ಒಳಚರಂಡಿ ಮಾರ್ಗ, ಕುಡಿಯುವ ನೀರು ಒದಗಿಸಲು ಸುಮಾರು ₹3 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಇಷ್ಟೆಲ್ಲ ಕೋಟಿಗಳು ಕಾಗದ ಹಾಗೂ ಯೋಜನೆಯ ಅನುಷ್ಠಾನದ ಹೇಳಿಕೆಗಳಲ್ಲೇ ಉಳಿದಿದೆ. ಅಧಿಕಾರಿಗಳು ಆಗಾಗ್ಗೆ ಒಂದೊಂದು ಸಬೂಬು ಹೇಳಿಕೊಂಡು ಯೋಜನೆಗಳನ್ನು ಮುಂದೂಡುತ್ತಲೇ ಬಂದಿದ್ದಾರೆ. 110 ಗ್ರಾಮದ ಜನರು ಕನಿಷ್ಠ ಸೌಕರ್ಯವಿಲ್ಲದೆ ಹೈರಾಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT